Advertisement

ಪಂಚಾಯತ್‌ರಾಜ್‌ ವ್ಯವಸ್ಥೆ ಬಲಗೊಳ್ಳಬೇಕಿದೆ: ರಮೇಶ್‌

12:12 AM Jun 29, 2019 | Team Udayavani |

ಶಿರ್ವ: ಶಿರ್ವ ಗ್ರಾಮ ಪಂಚಾಯತ್‌ನ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2019-20ನೇ ಸಾಲಿನ ಪ್ರಥಮ ಹಂತದ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮ ಸಭೆಯು ನೋಡಲ್ ಅಧಿಕಾರಿ ರಮೇಶ್‌ ಎಸ್‌. ಎನ್‌. ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಶಿರ್ವ ಗ್ರಾ.ಪಂ. ಸಭಾ ಭವನದಲ್ಲಿ ನಡೆಯಿತು.

Advertisement

ಉದ್ಯೋಗ ಖಾತರಿ ಯೋಜನೆಯ ತಾಲೂಕು ಸಂಯೋಜಕ ರಾಜು ಮೂಲ್ಯ ಮಾತನಾಡಿ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಮುದಾಯ ಸಹಭಾಗಿತ್ವದಲ್ಲಿ ನೋಂದಣಿ ಮಾಡಿಕೊಂಡು ದುಡಿಯುವ ಕೈಗಳಿಗೆ ಕೆಲಸ ನೀಡುವಂತಾಗಿ ಪಂಚಾಯತ್‌ರಾಜ್‌ ವ್ಯವಸ್ಥೆ ಬಲಪಡಿಸಬೇಕು. ಗ್ರಾಮೀಣ ಪ್ರದೇಶದ ಅರ್ಹ ಕುಟುಂಬ 100 ದಿನ ಕೆಲಸ ಪಡೆದುಕೊಂಡು ಜೀವನೋಪಾಯ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.

ಗ್ರಾಮ ಪಂಚಾಯತ್‌ ಅಧ್ಯಕ್ಷೆ ವಾರಿಜಾ ಪೂಜಾರ್ತಿ ಮತು ತಾ.ಪಂ. ಸದಸ್ಯೆ ಗೀತಾ ವಾಗ್ಲೆ ಮಾತನಾಡಿದರು. ಜಿ.ಪಂ. ಸದಸ್ಯ ವಿಲ್ಸನ್‌ ರೊಡ್ರಿಗಸ್‌, ಗ್ರಾ.ಪಂ. ಉಪಾಧ್ಯಕ್ಷ ದೇವದಾಸ ನಾಯಕ್‌, ವಿಮಲ ವೇದಿಕೆಯಲ್ಲಿದ್ದರು.

ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಅನಂತಪದ್ಮನಾಭ ನಾಯಕ್‌ ಯೋಜನೆಯ ಬಗ್ಗೆ ಅರಿವು ಮತ್ತು ಉದ್ದೇಶದ ಬಗ್ಗೆ ಮಾಹಿತಿ ನೀಡಿ ಉದ್ಯೋಗ ಖಾತರಿ ಯೋಜನೆಯು ಕಾಯಿದೆ ಕೂಡಾ ಆಗಿದ್ದು ಅದನ್ನು ಮೀರುವಂತಿಲ್ಲ,ಅಲ್ಲದೆ ಭೂ ಪರಿವರ್ತನೆಯಾದ ಜಾಗಕ್ಕೆ ಉದ್ಯೋಗ ಖಾತರಿ ಯೋಜನೆಯ ಸವಲತ್ತು ಸಿಗುವುದಿಲ್ಲ ಎಂದು ಹೇಳಿದರು. ಗ್ರಾಮ ಕರಣಿಕ ವಿಜಯ್‌ ಸಾಮಾಜಿಕ ಭದ್ರತೆಯ ಪಿಂಚಣಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಗ್ರಾ.ಪಂ. ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಬಿ.ಎನ್‌.ವಿ.ಗಳು, ಕೂಲಿ ಕಾರ್ಮಿಕರು, ಸ್ತ್ರೀ ಶಕ್ತಿ ಗುಂಪುಗಳ ಸದಸ್ಯರು, ಪಂಚಾಯತ್‌ ಸಿಬಂದಿ ಭಾಗವಹಿಸಿದ್ದರು.

Advertisement

ಗ್ರಾ.ಪಂ. ಕಾರ್ಯದರ್ಶಿ ಮಂಗಳಾ ಯೋಜನೆಯ ಖರ್ಚು ವೆಚ್ಚಗಳ ವರದಿ ಮಂಡಿಸಿದರು. ಪಿಡಿಒ ಅನಂತ ಪದ್ಮನಾಭ ನಾಯಕ್‌ ಸ್ವಾಗತಿಸಿ, ವಂದಿಸಿದರು.

ಉದ್ಯೋಗ ಚೀಟಿ ಮಾಡಿಸಿಕೊಳ್ಳಿ
ಯೋಜನೆಯ ಅನುಷ್ಠಾನದ ಹಂತದಲ್ಲಿ ಯಾವುದೇ ಗೊಂದಲವಿಲ್ಲದಂತೆ ಚೆಕ್‌ಲಿಸ್ಟ್‌ ನಡೆಸಿ ಕ್ರಮ ಬದ್ಧವಾಗಿ ನಡೆಸಬೇಕಾಗಿದೆ.ಯೋಜನೆಯಲ್ಲಿ ಗ್ರಾಮಸ್ಥರಿಗೆ ವೈಯಕ್ತಿಕ ಮತ್ತು ಸಮುದಾಯ ಕಾಮ ಗಾರಿ ನಡೆಸಲು ವಿಪುಲ ಅವಕಾಶವಿದ್ದು ಉದ್ಯೋಗ ಚೀಟಿ ಮಾಡಿಸದ ಗ್ರಾಮಸ್ಥರು ಹೆಚ್ಚು ಭಾಗವಹಿಸಿ ಯೋಜನೆಯ ಪ್ರಯೋಜನವನ್ನು ಪಡೆಯಬೇಕು.
-ರಮೇಶ್‌ ಎಸ್‌. ಎನ್‌., ನೋಡಲ್ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next