Advertisement

ಹಳ್ಳಿಗಳ ಪಂಚ ಸಾರ್ವಜನಿಕ ಸೇವೆಗಳಿಗೆ ಗ್ರಾ.ಪಂ. ಬಲ!

09:00 PM Aug 02, 2021 | Team Udayavani |

ಕಾರ್ಕಳ: ಗ್ರಾಮೀಣ ಭಾಗದಲ್ಲಿ  ಸಾರ್ವಜನಿಕ ಐದು ಪ್ರಮುಖ ಸೇವೆಗಳು ಏನಿದ್ದರೂ ಆಯಾ ಇಲಾಖೆಗೆ ಸೇರಿದ್ದು  ಅಂದುಕೊಂಡು  ಗ್ರಾ.ಪಂ.ಗಳು  ಇನ್ನು ಮುಂದೆ ಸುಮ್ಮನೆ ಕೂರುವಂತಿಲ್ಲ. ಸ್ಥಳೀಯ ಮಟ್ಟದಲ್ಲಿ ಸೇವೆಗಳು ಗುಣಮಟ್ಟ ಹಾಗೂ ಉತ್ತಮ ರೀತಿಯಲ್ಲಿ  ಜನರಿಗೆ ಸಿಗುವಂತಾಗಲು ಗ್ರಾಮೀಣಾಭಿವೃದ್ಧಿ  ಮತ್ತು ಪಂಚಾಯತ್‌ ರಾಜ್‌ ಇಲಾಖೆ ನಿರ್ಧರಿಸಿದ್ದು  ಮಹತ್ವದ  ಆದೇಶ ಹೊರಡಿಸಿದೆ. ಗ್ರಾ.ಪಂ. ವ್ಯಾಪ್ತಿಯ  ಐದು ಸೇವೆಗಳಲ್ಲಿ  ಸುಧಾರಣೆ ತರಲು ಅದು ನಿರ್ಧರಿಸಿದ್ದು,  ಗ್ರಾ.ಪಂ.ಗಳು ಸ್ಥಿತಿಗತಿ ಅಧ್ಯಯನ ಮಾಡಿ ಹೊಣೆ ಹೊತ್ತುಕೊಳ್ಳಬೇಕಿದೆ.

Advertisement

ಗ್ರಾಮೀಣಾಭಿವೃದ್ಧಿ, ಪಂ. ರಾಜ್‌ ಇಲಾಖೆ  ರಾಜ್ಯದ ಎಲ್ಲ ಜಿ.ಪಂ, ತಾ.ಪಂ, ಗ್ರಾ.ಪಂ.ಗಳಿಗೆ  ಸ್ಥಳೀಯ ಮಟ್ಟದ ಸೇವೆಗಳ  ಸುಧಾರಣೆ ಹೊಣೆಯನ್ನು  ಹೊರಿಸಿದೆ. ಅಂಗನವಾಡಿ, ಶಾಲೆ, ಆಸ್ಪತ್ರೆ. ಗ್ರಂಥಾಲಯ, ಪಶುಕ್ಲಿನಿಕ್‌ಗಳ ಪ್ರಾಥಮಿಕ ಹಂತದ ಸೇವೆ ಗಳಲ್ಲಿ  ಕುಂದು ಕೊರತೆಗಳ  ಕುರಿತು ಅಧ್ಯ ಯನ ನಡೆಸಿ,   ಅವುಗಳಲ್ಲಿ  ಸುಧಾರಣೆ ತರು ವಂತೆ  ಗ್ರಾಮೀಣಾಭಿವೃದ್ಧಿ  ಇಲಾಖೆ ಜು.27 ರಂದು  ಹೊರಡಿಸಿದ ಸೂಚನ ಪತ್ರದಲ್ಲಿದೆ.

ರಾಜ್ಯದಲ್ಲಿ  5,766, ಉಡುಪಿ ಜಿಲ್ಲೆ ಯಲ್ಲಿ  150, ದ.ಕ, ಜಿಲ್ಲೆಯಲ್ಲಿ 229 ಗ್ರಾ.ಪಂ.ಗಳಿವೆ. ಗ್ರಾ.ಪಂನ  ತಂಡ  ಈ ಐದು ಸೇವೆಗಳ ಉನ್ನತೀಕರಣಕ್ಕೆ ಹೆಚ್ಚಿನ  ಬಲವನ್ನು ನೀಡಬೇಕಿದೆ. ಆಯಾ ಗ್ರಾ.ಪಂ. ವ್ಯಾಪ್ತಿಯ ಈ ಐದು ಕೇಂದ್ರಗಳ ಮೂಲಸೌಕರ್ಯ

ಕೊರತೆಗೆ ಸಂಬಂಧಿಸಿ ಗ್ರಾ.ಪಂ.ಗಳು ಅಧ್ಯ ಯನ ನಡೆಸಬೇಕು. ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿಯ ಅಧ್ಯಕ್ಷರು ಹಾಗೂ ಶಿಕ್ಷಣ ಕಾರ್ಯಪಡೆ ಸದಸ್ಯರು  ಕನಿಷ್ಠ  3 ತಿಂಗಳುಗಳಿಗೊಮ್ಮೆ  ತಮ್ಮ  ಗ್ರಾ.ಪಂ. ವ್ಯಾಪ್ತಿಯ ಈ ಎಲ್ಲ  ಕೇಂದ್ರಗಳಿಗೆ  ಭೇಟಿ ನೀಡಿ,  ಸ್ಥಳೀಯ ಮಟ್ಟದಲ್ಲಿ   ಸೌಲಭ್ಯ, ಸಮಸ್ಯೆ ಪರಿಹಾರಕ್ಕೆ  ತ್ತೈಮಾಸಿಕ  ಕೆಡಿಪಿ ಸಭೆಗಳಲ್ಲಿ  ಚರ್ಚಿಸಿ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ.

ಹೆಚ್ಚಿನ ಅನುದಾನ ಬರದು :

Advertisement

ಮೂಲ ಸೌಕರ್ಯ ಒದಗಿಸಲು  ಗ್ರಾ.ಪಂ.ಗಳು ತಮ್ಮ ಸ್ವಂತ ನಿಧಿ, ಕೇಂದ್ರ ಮತ್ತು ರಾಜ್ಯ ಸರಕಾರಗಳ ಅನುದಾನ, ಜಲಜೀವನ್‌, ನರೇಗಾ ಸೇರಿ ವಿವಿಧ ಅನುದಾನ ಬಳಸಿಕೊಳ್ಳಬಹುದಾಗಿದೆ. ಸರಕಾರದ ಆದೇಶ ಮಹತ್ವದ್ದೇ ಆಗಿದ್ದರೂ ಹೆಚ್ಚಿನ ಸ್ಥಳೀಯಾಡಳಿತಗಳಲ್ಲಿ ಸಾಕಷ್ಟು ಆದಾಯದ ಕೊರತೆಯಿದೆ. ಸರಕಾರಿ ಯೋಜನೆಗಳನ್ನು ಇನ್ನಿತರ  ಮೂಲ ಸೌಕರ್ಯ ಅಭಿವೃದ್ಧಿಗೆ ಬಳಸುವುದು ಅನಿವಾರ್ಯವಾಗಿದ್ದರಿಂದ ಗರಿಷ್ಠಕ್ಕಿಂತ ಹೆಚ್ಚು  ಅನುದಾನಗಳನ್ನು ಹಿಂದಿನಿಂದ  ನಿರೀಕ್ಷೆಯಷ್ಟು  ವಿನಿಯೋಗಿಸಲು ಸಾಧ್ಯವಾಗುತ್ತಿಲ್ಲ.  ಸರಕಾರ  ಹೆಚ್ಚುವರಿ  ವಿಶೇಷ ಅನುದಾನ ನೀಡಿದಲ್ಲಿ  ಮಾತ್ರ  ಸ್ಥಳೀಯಾಡಳಿತ ಮಟ್ಟದಲ್ಲಿ  ಸೇವೆಗಳ  ಬಲವರ್ಧನೆ ಸಾಧ್ಯ ಎನ್ನುವುದು  ಪಂಚಾಯತ್‌ ಆಡಳಿತಗಳ ಅಭಿಪ್ರಾಯವಾಗಿದೆ.

ಐದು ಕ್ಷೇತ್ರಗಳಲ್ಲಿ  ಸುಧಾರಣೆ ಹೊಣೆ : ಶಾಲೆಗಳಿಗೆ ನಿವೇಶನ, ಕಟ್ಟಡ, ದಾಸ್ತಾನು ಕೊಠಡಿ, ಅಡುಗೆ ಕೋಣೆ, ಕಟ್ಟಡ ದುರಸ್ತಿ, ಕಾಂಪೌಂಡ್‌ ನಿರ್ಮಾಣ, ವಿದ್ಯುತ್‌ ಬಿಲ್‌ಪಾವತಿ, ಕುಡಿಯುವ ನೀರು ಸರಬರಾಜು, ವಾಟರ್‌ ಫಿಲ್ಟರ್‌, ಶೌಚಾಲಯ ನಿರ್ಮಾಣ, ಕೈದೋಟ, ಆಟದ ಸಲಕರಣೆ, ಕುರ್ಚಿ, ಬೆಂಚು, ಟೇಬಲ್‌, ಗೋಡೆ ನಿರ್ಮಾಣ,  ಪಶು ಚಿಕಿತ್ಸೆ ಕೇಂದ್ರಗಳಿಗೆ  ಕಟ್ಟಡ,  ದಾಸ್ತಾನು ಕೊಠಡಿ, ಕಟ್ಟಡ ದುರಸ್ತಿ, ಕಾಂಪೌಂಡ್‌, ವಿದ್ಯುತ್‌ ಸಂಪರ್ಕ, ವಿದ್ಯುತ್‌ ಬಿಲ್‌ ಪಾವತಿ, ಕುಡಿಯುವ ನೀರು, ವಾಟರ್‌ ಫಿಲ್ಟರ್‌,  ಶೌಚಾಲಯ,  ನೀರಿನ ತೊಟ್ಟಿ ಮುಂತಾದವುಗಳು. ಗ್ರಂಥಾಲಯಗಳಿಗೆ ನಿವೇಶನ, ಕಟ್ಟಡ/ಓದುವ ಕೊಠ ಡಿ, ಕಾಂಪೌಂಡ್‌, ವಿದ್ಯುತ್‌ ಸಂಪರ್ಕ, ವಿದ್ಯುತ್‌ ಬಿಲ್‌ ಪಾವತಿ, ಕುಡಿಯುವ ನೀರು, ಶೌಚಾಲಯ, ಆಸನ, ಟೇಬಲ್‌, ಬೆಂಚು,  ಗೋಡೆ ಬರಹ, ಡಿಜಿಟಲೀಕರಣ, ಇಂಟರ್‌ನೆಟ್‌ ಮುಂತಾದುವುಗಳನ್ನು ಒದಗಿಸುವುದು.  ಪ್ರಾ. ಆರೋಗ್ಯ ಕೇಂದ್ರಗಳಲ್ಲಿ  ಕಟ್ಟಡ, ದುರಸ್ತಿ, ವೈದ್ಯ ಸಿಬಂದಿ ವಸತಿ ಗೃಹ, ಕಾಂಪೌಂಡ್‌, ವಿದ್ಯುತ್‌ ಸಂಪರ್ಕ, ವಿದ್ಯುತ್‌ ಬಿಲ್‌ ಪಾವತಿ, ಕುಡಿಯುವ ನೀರು ಸರಬರಾಜು, ಬಳಕೆಗೆ  ನೀರಿನ ಸಂಪರ್ಕ, ಸಂಪರ್ಕ ವ್ಯವಸ್ಥೆ, ವಾಟರ್‌ ಫಿಲ್ಟರ್‌, ಶೌಚಾಲಯ, ಪೀಠೊಪಕರಣ ಒದಗಿಸುವುದು. ಅಂಗನವಾಡಿ ಕೇಂದ್ರಗಳಿಗೆ ಕಟ್ಟಡ, ದುರಸ್ತಿ, ಕುಡಿಯುವ ನೀರು ಮೂಲ ಸೌಕರ್ಯಗಳು ಹೊಂದಲು ನೆರವು ನೀಡಬೇಕಿದೆ.

ಸರಕಾರ ಗ್ರಾ.ಪಂ.ಗಳಿಗೆ ವಿವಿಧ ಅನುದಾನ ನೀಡುತ್ತಿದೆ. ಜತೆಗೆ  ಸ್ಥಳೀಯಾಡಳಿತಗಳು ಸ್ವಂತ ನಿಧಿಯನ್ನು ಹೊಂದಿವೆ. ಈಗ ನೀಡುತ್ತಿರುವ ಅನುದಾನಗಳನ್ನು  ಮೂಲ ಸೌಕರ್ಯಕ್ಕೆ  ಬಳಸಿ ಸುಧಾರಣೆಗಳನ್ನು ಮಾಡಬೇಕಿದೆ. ದೊಡ್ಡ ಪ್ರಮಾಣದಲ್ಲಿ ಹಣಕಾಸಿನ ನೆರವು ಬೇಕಿದ್ದಲ್ಲಿ  ತಾ.ಪಂ., ಜಿ.ಪಂ.ಗಳನ್ನು ಸಂಪರ್ಕಿಸಿ ಪೂರೈಸಿಕೊಳ್ಳಬೇಕು. ಸ್ಥಳೀಯ ಮಟ್ಟದಲ್ಲಿ ಸೇವೆಗಳ ಗುಣಮಟ್ಟ ಹೆಚ್ಚಿಸಲು ಇದರಿಂದ ಅನುಕೂಲವಾಗಲಿದೆ.-ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಆಯುಕ್ತರು, ಪಂಚಾಯತ್‌ ರಾಜ್‌ ಆಯುಕ್ತಾಲಯ ಬೆಂಗಳೂರು

 

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next