ಚಾಮರಾಜನಗರ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸತತ ಮೂರು ಬಾರಿ ಗೆದ್ದ ಸದಸ್ಯನಿಗೆ ಆತನ ಬೆಂಬಲಿಗರು ಬೈಕ್ ಕೊಳ್ಳಲು 1 ಲಕ್ಷ ರೂ. ಸಂಗ್ರಹಿಸಿಕೊಟ್ಟಿದ್ದು, ಈ ಮೊತ್ತದಲ್ಲಿ ಡೌನ್‌ಪೇಮೆಂಟ್ ನೀಡಿ ಹ್ಯಾಟ್ರಿಕ್ ಸದಸ್ಯ ಬೈಕ್ ಖರೀದಿಸಿ ಸಂಭ್ರಮಿಸಿದ್ದಾರೆ.
ತಾಲೂಕಿನ ಹರದನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ತಾವರೆಕಟ್ಟೆ ಮೋಳೆಯ ಬಿಜೆಪಿ ಬೆಂಬಲಿತ ಸದಸ್ಯ ಎಸ್. ಮಹೇಶ್ ಮೊನ್ನೆ ನಡೆದ ಚುನಾವಣೆಯಲ್ಲಿ ಜಯಗಳಿಸಿದ್ದರು. ಇದು ಅವರಿಗೆ ಸತತ ಮೂರನೇ ಗೆಲುವು. ಮಹೇಶ್ ಅವರ ಪತ್ನಿ ಕಾಂತಾಮಣಿ ಅವರು ತಾಲೂಕು ಪಂಚಾಯಿತಿ ಸದಸ್ಯೆಯಾಗಿದ್ದಾರೆ. ಮಹೇಶ್ ಈ ಚುನಾವಣೆಯಲ್ಲಿ ಗೆದ್ದು ಹ್ಯಾಟ್ರಿಕ್ ಬಾರಿಸಿ, ಬೈಕ್‌ನಲ್ಲಿ ಗ್ರಾಮದಲ್ಲಿ ಓಡಾಡಬೇಕು. ಇದಕ್ಕೆ ನಮ್ಮ ಕೈಲಾಧ ನೆರವು ನೀಡುವುದಾಗಿ ಅವರ ಬೆಂಬಲಿಗರು, ಸ್ನೇಹಿತರು ತಿಳಿಸಿದ್ದರು.
ಅದರಂತೆ, ಚುನಾವಣೆಯಲ್ಲಿ ಮಹೇಶ್ ಗೆದ್ದ ಕಾರಣ, ಅವರ ಬೆಂಬಲಿಗರೆಲ್ಲ ಸೇರಿ ತಮ್ಮ ಯಥಾನುಶಕ್ತಿ ಹಣ ಸಂಗ್ರಹಿಸಿ. 1 ಲಕ್ಷ ರೂ. ಮೊತ್ತ ಮಾಡಿ ಮಹೇಶ್‌ಗೆ ಬೈಕ್ ಕೊಳ್ಳಲು ನೀಡಿದ್ದಾರೆ.
ಇದನ್ನೂ ಓದಿ:ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಸಿಡಿಸಿದ ಪಟಾಕಿಗೆ ನೂರೂರು ಹಕ್ಕಿಗಳು ಬಲಿ
ಬಿಜೆಪಿ ಮುಖಂಡ ಪ್ರತಾಪ್ ಒಡೆತನಕ್ಕೆ ಸೇರಿದ ರಾಯಲ್ ಎನ್‌ಫೀಲ್‌ಡ್ ಶೋರೂಮ್ ಇತ್ತೀಚಿಗಷ್ಟೇ ಚಾಮರಾಜನಗರದಲ್ಲಿ ಆರಂಭಗೊಂಡಿದ್ದು, ಇಲ್ಲಿ 2.38 ಲಕ್ಷ ರೂ.ಗಳ ರಾಯಲ್ ಎನ್‌ಫೀಲ್‌ಡ್, ಮೀಟಿಯೋರ್ ಸೂಪರ್‌ನೋವಾ ಮಾಡೆಲ್ ಅನ್ನು ಮಹೇಶ್ ಖರೀದಿಸಿದ್ದಾರೆ. 80 ಸಾವಿರ ರೂ.ಗಳನ್ನು ಡೌನ್‌ಪೇಮೆಂಟ್ ಆಗಿ ನೀಡಿ ಬೈಕ್ ಖರೀದಿಸಿದ್ದು ಉಳಿದ ಹಣವನ್ನು ಇಎಂಐ ಮೂಲಕ ಪಾವತಿಸುವುದಾಗಿ ತಿಳಿಸಿದ್ದಾರೆ.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ನಾಗಶ್ರೀ ಪ್ರತಾಪ್ ಮತ್ತು ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ. ರಾಮಚಂದ್ರ ಬೈಕ್ ಕೀಯನ್ನು ಸದಸ್ಯ ಮಹೇಶ್‌ಗೆ ಹಸ್ತಾಂತರಿಸಿದರು.