Advertisement

ವಾಹನ ಸಂಚಾರ ನಿಷೇಧಿಸಿ ಮುಂಜಾಗ್ರತಾ ಕ್ರಮಕ್ಕೆ ಮುಂದಾದ ಪಂಚಾಯತ್‌

08:52 PM Sep 06, 2019 | Sriram |

ಕಟಪಾಡಿ: ಕುರ್ಕಾಲು-ಮಣಿಪುರ ಸಂಪರ್ಕದ ಬಹುಮುಖ್ಯ ರಸ್ತೆಯೊಂದು ನಡುವೆ ಕುಸಿದಿದ್ದು, ಭಾರೀ ಗಾತ್ರದ ಕಂದಕ ಸೃಷ್ಟಿಯಾಗಿದ್ದು, ವಾಹನ ಸಂಚಾರ ನಿಷೇಧಿಸಲಾಗಿರುತ್ತದೆ.

Advertisement

ಬೆಳ್ಮಣ್‌, ಶಿರ್ವ, ಶಂಕರಪುರ ಭಾಗದಿಂದ ಮಣಿಪುರ-ದೆಂದೂರುಕಟ್ಟೆ-ಅಲೆವೂರು ಮಣಿಪಾಲಕ್ಕೆ ಸಂಪರ್ಕವನ್ನು ಕಲ್ಪಿಸುವ ಹೆಚ್ಚು ಬಳಕೆಯಲ್ಲಿರುವ ಅತೀ ಶಾರ್ಟ್‌ ಕಟ್‌ ಆಗಿರುವ ಈ ರಸ್ತೆಯು ತೀವ್ರಗೊಂಡ ಮಳೆಯ ಪರಿಣಾಮ ಕುಸಿತಕ್ಕೊಳಗಾಗಿದೆ.

ಜಿಲ್ಲಾ  ಪಂಚಾಯತ್‌ ರಸ್ತೆ ಇದಾಗಿದ್ದು, ಹೆಚ್ಚು ವಾಹನ ದಟ್ಟಣೆಯಿಂದ ಕೂಡಿದೆ. ಮಣಿಪುರ-ದೆಂದೂರು ಕಟ್ಟೆ-ಅಲೆವೂರು-ಉಡುಪಿಗೂ ಸಂಪರ್ಕವನ್ನು ಕಲ್ಪಿಸುವ ಹತ್ತಿರದ ರಸ್ತೆಯಾಗಿದ್ದು ರಾತ್ರಿ ಹಗಲೆನ್ನದೆ ಹೆಚ್ಚು ವಾಹನಗಳು ಸಂಚರಿಸುತ್ತಿರುತ್ತವೆ.

ಮಳೆಯ ತೀವ್ರತೆಗೆ ಹೆಚ್ಚಳಗೊಂಡಿರುವ ನೀರಿನ ಮಟ್ಟದಿಂದಾಗಿ ರಸ್ತೆ ನಿರ್ಮಾಣಕ್ಕೆ ಹಾಕಲಾಗಿದ್ದ ಅಡಿಪಾಯ ಕುಸಿದಿದೆ. ಹಾಗಾಗಿ ಮೆನ್ನಲ ನಾಗೇಶ್‌ ಜತ್ತನ್ನ ಮನೆಯ ಬಳಿಯಲ್ಲಿ ಮೇಲ್ಭಾಗದಲ್ಲಿನ ರಸ್ತೆಯ ಕಾಂಕ್ರೀಟ್‌ ಕುಸಿತಕ್ಕೊಳಗಾಗಿದೆ.

ಕುಸಿತದಿಂದ ದೊಡ್ಡ ಗಾತ್ರದಲ್ಲಿ ಕಂದಕ ನಿರ್ಮಾಣಗೊಂಡಿರುವ ಕಾರಣದಿಂದ ವಾಹನಗಳ ಸಂಚಾರ ಅಪಾಯಕಾರಿಯಾಗಿದೆ. ಎಚ್ಚೆತ್ತ ಕುರ್ಕಾಲು ಗ್ರಾಮ ಪಂಚಾಯತ್‌ ವಾಹನ ಸಂಚಾರವನ್ನು ನಿಷೇಧಿಸಿ ಬ್ಯಾನರ್‌ ಅಳವಡಿಸಿದ್ದು, ಬ್ಯಾರಿಕೇಡ್‌ ಇರಿಸಿ ಸೂಕ್ತ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ.

Advertisement

ಈ ಸ್ಥಳದಲ್ಲಿ ಮೊದಲು ಆಲದ ಮರವೊಂದು ಇದ್ದು, ರಸ್ತೆ ನಿರ್ಮಾಣದ ಸಂದರ್ಭ ತೆರವುಗೊಳಿಸಲಾಗಿದೆ. ಅದರ ಬುಡಭಾಗವನ್ನು ಸಮರ್ಪಕವಾಗಿ ನಿರ್ವಹಿಸದೆ ಇದೀಗ ಮಣ್ಣು ಕುಸಿದಿರಬಹುದೆಂಬ ಸಂಶಯವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ.

ಮಣ್ಣು ತುಂಬಿಸುವ ಪ್ರಕ್ರಿಯೆ ನಡೆಯುತ್ತಿದ್ದು ಮಣಿಪುರ ಭಾಗದಲ್ಲಿ ಮತ್ತು ಕುರ್ಕಾಲು ಭಾಗದಲ್ಲಿಯೂ ಬ್ಯಾನರ್‌, ಬ್ಯಾರಿಕೇಡ್‌ ಅಳವಡಿಸಿ ವಾಹನ ಸವಾರರನ್ನು ಎಚ್ಚರಿಸುವ ಸೂಚನೆಯನ್ನು ಅಳವಡಿಸಲಾಗಿದೆ.

ಮಳೆ ನಿಂತ ಬಳಿಕ ಶಾಶ್ವತ ಪರಿಹಾರ
ಇದು ಜಿ.ಪಂ. ರಸ್ತೆಯಾಗಿದೆ. ಎಂಜಿನಿಯರಿಂಗ್‌ ವಿಭಾಗಕ್ಕೆ ರಸ್ತೆ ಕುಸಿತದ ಬಗ್ಗೆ ಮಾಹಿತಿ ನೀಡಲಾಗಿದೆ. ಅಪಾಯ ಸಂಭವಿಸಬಾರದೆಂಬ ದೃಷ್ಟಿಯಿಂದ ವಾಹನ ಸಂಚಾರ ನಿಷೇಧಿಸಿ ಕ್ರಮ ಕೈಗೊಳ್ಳಲಾಗಿದೆ. ಮಳೆ ಬಿರುಸಿನಿಂದ ಕೂಡಿದ್ದು ತುರ್ತಾಗಿ ತಾತ್ಕಾಲಿಕ ಕೆಲಸ ಮಾತ್ರ ಸಾಧ್ಯ. ಶಾಶ್ವತ ಪರಿಹಾರ ಮಳೆ ನಿಂತ ಬಳಿಕ ನಡೆಯುವ ಭರವಸೆ ಇದೆ.
-ಶೋಭಾ, ಅಧ್ಯಕ್ಷೆ, ಕುರ್ಕಾಲು ಗ್ರಾ.ಪಂ.

ತಾತ್ಕಾಲಿಕ ಕಾಮಗಾರಿ ಸ್ಥಳವನ್ನು ಪರಿಶೀಲನೆ ನಡೆಸಲಾಗಿದೆ. ರಸ್ತೆ ನಿರ್ಮಾಣದ ಸಂದರ್ಭ ಅಳವಡಿಸಲಾದ ತಳ ಭಾಗದ ಮಣ್ಣು ಮಳೆಯ ನೀರಿನ ಮಟ್ಟ ಹೆಚ್ಚಳದಿಂದ ಕುಸಿದಿದೆ. ಆದುದರಿಂದ ಕಾಂಕ್ರೀಟ್‌ ರಸ್ತೆಯು ಕುಸಿತಕ್ಕೊಳಗಾಗಿದೆ. ಸದ್ಯ ಮಣ್ಣು ತುಂಬಿಸಿ ಭದ್ರಪಡಿಸಲಾಗುತ್ತದೆ. ಮಳೆ ಮುಗಿದ ಬಳಿಕ ಕಾಂಕ್ರೀಟ್‌ ಹಾಕಲಾಗುತ್ತದೆ. ಎರಡು ದಿನಗಳೊಳಗಾಗಿ ತಾತ್ಕಾಲಿಕ ಕಾಮಗಾರಿ ನಡೆಯಲಿದೆ.
– ಸುನಿಲ್‌ ಕುಮಾರ್‌, ಜಿ.ಪಂ. ಎಂಜಿನಿಯರಿಂಗ್‌ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next