Advertisement

ಶಾಸಕರ ತಾಯಿ ಕೈಗೆ ಪಂಚಾಯತ್‌ ಚುಕ್ಕಾಣಿ

04:44 PM Feb 04, 2021 | Team Udayavani |

ಸಿಂಧನೂರು: ತಾಲೂಕಿನ ದಢೇಸುಗೂರು ಗ್ರಾಪಂನಲ್ಲಿ ಕನಕಗಿರಿ ಶಾಸಕ ಬಸವರಾಜ ದಢೇಸುಗೂರು ಅವರ ತಾಯಿ ದುರುಗಮ್ಮ ಅವರು ಬುಧವಾರ ಅವಿರೋಧವಾಗಿ ಅಧ್ಯಕ್ಷೆ ಕುರ್ಚಿ ಅಲಂಕರಿಸಿದರು. ಗ್ರಾಪಂ ಚುನಾವಣೆ ಬಳಿಕ 21 ಸದಸ್ಯ ಬಲದ ಗ್ರಾಪಂ ಗದ್ದುಗೆ ಕುರಿತು ಭಾರಿ ಕುತೂಹಲ ಮೂಡಿತ್ತು. ಅಧ್ಯಕ್ಷ ಸ್ಥಾನಕ್ಕೆ ಎಸ್ಸಿಗೆ ಮೀಸಲಾದ ನಂತರ ಕಾವು ತಣ್ಣಗಾಗಿತ್ತು. ಎಸ್ಸಿ ವರ್ಗದಲ್ಲಿನ ಇಬ್ಬರು ಸದಸ್ಯರ ಪೈಕಿ ಶಾಸಕರ ತಾಯಿಗೆ ಹಸಿರು ನಿಶಾನೆ ತೋರಿದ್ದರಿಂದ ಯಾವುದೇ ವಿರೋಧವಿಲ್ಲದೇ ಪಂಚಾಯಿತಿ ಪಟ್ಟಕ್ಕೇರಿದರು.

Advertisement

ಆಯ್ಕೆ ಘೋಷಣೆ: ಚುನಾವಣಾಧಿಕಾರಿ ಶರಣಪ್ಪ ಅವರು, ಬೆಳಗ್ಗೆ 10 ಗಂಟೆಯಿಂದ ನಾಮಪತ್ರ ಸ್ವೀಕರಿಸಲು ಆರಂಭಿಸಿದರು. ಅಧ್ಯಕ್ಷ ಸ್ಥಾನಕ್ಕೆ ದುರಗಮ್ಮ ಗಂ.ದುರಗಪ್ಪ ಅವರು ಮಾತ್ರ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ಬೆಂಬಲಿತ ಪಕೀರಮ್ಮ ಸಣ್ಣಪಕೀರಪ್ಪ ಅವರೊಬ್ಬರೇ ನಾಮಪತ್ರ ಸಲ್ಲಿಸಿದರು. ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಚುನಾವಣಾಧಿಕಾರಿಗಳು, ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು. ಗ್ರಾಪಂನ 21 ಸದಸ್ಯ ಬಲದ ಪೈಕಿ ಶೇ.50ರಷ್ಟು ಕೋರಂ ಇರಬೇಕು. ಸದ್ಯ 15 ಸದಸ್ಯರು ಇರುವುದರಿಂದ ಕೋರಂ ಭರ್ತಿಯಾಗಿದ್ದು, ಅವಿರೋಧ ಆಯ್ಕೆಯನ್ನು ಅಂತಿಮಗೊಳಿಸಲಾಗಿದೆ ಎಂದರು. ಬಳಿಕ ನೂತನ ಅಧ್ಯಕ್ಷೆ, ಉಪಾಧ್ಯಕ್ಷೆಗೆ ಹಾರ ಹಾಕಿ ಸ್ವಾಗತಿಸಿಕೊಳ್ಳಲಾಯಿತು.

ಕಚೇರಿ ಸುತ್ತ ಜನಸ್ತೋಮ: ಸ್ವತಃ ಶಾಸಕ ಬಸವರಾಜ ದಢೇಸುಗೂರು ಅವರೇ ಗ್ರಾಪಂ ಕಚೇರಿ ಮುಂಭಾಗದಲ್ಲಿ ನೆರೆದಿದ್ದರು. ಶಾಸಕರ ತಾಯಿ ಆಯ್ಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಜಿಪಂ ಸದಸ್ಯ ಎನ್‌.ಶಿವನಗೌಡ ಗೋರೆಬಾಳ, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಕೊಲ್ಲಾಶೇಷಗಿರಿರಾವ್‌, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಹನುಮೇಶ ಸಾಲಗುಂದಾ,
ಮಧ್ವರಾಜ್‌ ಆಚಾರ್‌ ಇದ್ದರು. ಆಯ್ಕೆಯ ಬಳಿಕ ಅಧ್ಯಕ್ಷ, ಉಪಾಧ್ಯಕ್ಷರನ್ನು ತೆರೆದ ವಾಹನದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಸದಸ್ಯ ಸ್ಥಾನಕ್ಕೂ ಅವಿರೋಧವಾಗಿ ಆಯ್ಕೆ ನಡೆದಿತ್ತು. ಈಗಲೂ ಗ್ರಾಮದವರೆಲ್ಲ ಸೇರಿ ಒಗ್ಗಟ್ಟಾಗಿ ಆಯ್ಕೆ ಮಾಡಿದ್ದಾರೆ. ಎಲ್ಲ ಸದಸ್ಯರು ನಮ್ಮವರೇ. ಇದರಲ್ಲಿ ಪಕ್ಷ ಅಂತೇನೂ ಇಲ್ಲ. ಎಲ್ಲ ಸಹಕಾರದಿಂದಲೇ ಗ್ರಾಪಂನಲ್ಲಿ ಆಡಳಿತ ನಡೆಯಲಿದೆ.
ಬಸವರಾಜ ದಢೇಸುಗೂರು,
ಶಾಸಕ, ಕನಕಗಿರಿ ಕ್ಷೇತ್ರ

Advertisement

Udayavani is now on Telegram. Click here to join our channel and stay updated with the latest news.

Next