Advertisement

ಹಳ್ಳಿ ಶಾಲೆ-ಹಾಸ್ಟೆಲ್‌ಗ‌ಳಿಗೆ ಪಂಚಾಯತ್‌ “ಬಲ’

09:46 PM Sep 11, 2021 | Team Udayavani |

ಬೆಂಗಳೂರು: ಗ್ರಾಮೀಣ ಭಾಗದ ಸರಕಾರಿ ಶಾಲೆಗಳು, ಅಶ್ರಮ ಶಾಲೆಗಳು, ವಸತಿ ಶಾಲೆಗಳು ಮತ್ತು ವಿದ್ಯಾರ್ಥಿ ನಿಲಯಗಳಿಗೆ ಇನ್ನು ಮುಂದೆ ಗ್ರಾಮ ಪಂಚಾಯತ್‌ಗಳ “ಬಲ’ ಸಿಗಲಿದೆ.

Advertisement

ಸರಕಾರಿ ಶಾಲೆಗಳಲ್ಲಿ ಸಮರ್ಪಕ ಮೂಲಸೌಕರ್ಯಗಳು ಸಿಕ್ಕಿ ಶೇ. 100ರಷ್ಟು ಮಕ್ಕಳು  ದಾಖಲಾಗಿ ಗುಣಮಟ್ಟದ ಶಿಕ್ಷಣ ಪಡೆಯುಬೇಕು. ಅದೇ ರೀತಿ ಆಶ್ರಮ ಶಾಲೆಗಳು, ವಸತಿ ಶಾಲೆಗಳು ಮತ್ತು ವಿದ್ಯಾರ್ಥಿ ನಿಲಯಗಳಲ್ಲಿ ವಸತಿಯೊಂದಿಗೆ ಶಿಕ್ಷಣ ಪಡೆಯುತ್ತಿರುವ ಹಿಂದುಳಿದ ವರ್ಗಗಳ ಮಕ್ಕಳಿಗೆ ಉತ್ತಮ ಸೌಲಭ್ಯಗಳು, ಆರೋಗ್ಯ ಮತ್ತು ಸುರಕ್ಷೆಯೊಂದಿಗೆ ಗುಣಮಟ್ಟದ ಶಿಕ್ಷಣ ದೊರಕಬೇಕು ಎಂಬುದು ಸರಕಾರದ ಉದ್ದೇಶವಾಗಿದೆ.

ಇದನ್ನು ಸಾಕಾರಗೊಳಿಸಲು ಆಯಾ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯ ಸರಕಾರಿ ಶಾಲೆಗಳು, ವಸತಿ ಶಾಲೆಗಳು ಮತ್ತು ವಿದ್ಯಾರ್ಥಿ ನಿಲಯಗಳ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಿ, ಬೇಕಾದ ಅಗತ್ಯಗಳನ್ನು ಪೂರೈಸಲು ಗ್ರಾಮ ಪಂಚಾಯತ್‌ಗಳು ಮುಂದಾಗಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಹೇಳಿದೆ.

ಈ ನಿಟ್ಟಿನಲ್ಲಿ  ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರು ಕನಿಷ್ಠ ಮೂರು ತಿಂಗಳಿಗೊಮ್ಮೆ ತಮ್ಮ ವ್ಯಾಪ್ತಿಯ ಇಂಥ ಶಾಲೆಗಳು ಹಾಗೂ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಬೇಕು. ಅಲ್ಲಿನ ಶಿಕ್ಷಕರು, ಮಕ್ಕಳು ಹಾಗೂ ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಗಳ ಸದಸ್ಯರೊಂದಿಗೆ ಸಮಾಲೋಚಿಸಿ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು. ಮಕ್ಕಳು ಶಾಲೆಗಳಿಗೆ ತಪ್ಪದೆ ದಾಖಲಾಗಿ ನಿರಂತರವಾಗಿ ಹಾಜರಾಗಲು ಪೂರಕವಾಗುವಂತೆ ಮೂಲಸೌಕರ್ಯ ಲಭ್ಯವಾಗುವಂತೆ ಮಾಡಬೇಕು ಎಂದು ಗ್ರಾ.ಪಂ.ಗಳಿಗೆ ಸೂಚಿಸಲಾಗಿದೆ.

ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ ಅಧಿನಿಯಮ 1993ರ ಪ್ರಕರಣ 58ರಲ್ಲಿ ಉಲ್ಲೇಖೀಸಿರುವ ಗ್ರಾಮ ಪಂಚಾಯತ್‌ ಪ್ರಕಾರ್ಯಗಳಲ್ಲಿ ಶಾಲೆಗಳು ಮತ್ತು ವಸತಿ ನಿಲಯಗಳ ಅಭಿವೃದ್ಧಿಯೂ ಸೇರಿದೆ. ಅಲ್ಲದೆ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ-2009ರಲ್ಲಿ ಶಿಕ್ಷಣಕ್ಕೆ ಸಂಬಂಧಿಸಿ ಸ್ಥಳೀಯ ಸರಕಾರಗಳ ಜವಾಬ್ದಾರಿ ಬಗ್ಗೆ ಹೇಳಲಾಗಿದೆ. ಅದರಂತೆ, ಶಾಲೆಗಳಿಗೆ ಬೇಕಾಗುವ ಮೂಲಸೌಕರ್ಯಗಳಾದ ನಿವೇಶನ, ಕಟ್ಟಡ, ದಾಸ್ತಾನು ಕೊಠಡಿ, ಅಡುಗೆ ಕೊಠಡಿ ನಿರ್ವಹಣೆ, ಕಟ್ಟಡ ದುರಸ್ತಿ, ಕಾಂಪೌಂಡ್‌, ವಿದ್ಯುತ್‌ ಸಂಪರ್ಕ, ವಿದ್ಯುತ್‌ ಬಿಲ್‌ ಪಾವತಿ, ಕುಡಿಯುವ ನೀರು ಸರಬರಾಜು, ಶೌಚಾಲಯ, ಕೈತೋಟ, ಆಟದ ಸಲಕರಣೆ, ಪೀಠೊಪಕರಣಗಳು ಮುಂತಾದ ನೆರವು ಒದಗಿಸಬಹುದು. ಇದಕ್ಕಾಗಿ ಗ್ರಾ.ಪಂ.ಗಳು ಸ್ವಂತ ಸಂಪನ್ಮೂಲ, ಕೇಂದ್ರ ಮತ್ತು ರಾಜ್ಯ ಸರಕಾರಗಳ ಶಾಸನಬದ್ಧ ಅನುದಾನ, ಜಲಜೀವನ್‌ ಮಿಷನ್‌, ಉದ್ಯೋಗ ಖಾತರಿ ಮುಂತಾದ ಯೋಜನೆಗಳ ಅನುದಾನ ಬಳಸಿಕೊಳ್ಳಬಹುದು ಎಂದು ಇಲಾಖೆ ಸ್ಪಷ್ಟಪಡಿಸಿದೆ.

Advertisement

“ಅಂಗನವಾಡಿ ಮಾದರಿಯಲ್ಲಿ ಸರಕಾರಿ ಶಾಲೆಗಳು ಮತ್ತು ವಸತಿ ನಿಲಯಗಳಿಗೆ ಮೂಲಸೌಕರ್ಯಗಳನ್ನು ಒದಗಿಸಲು ಗ್ರಾ.ಪಂ.ಗಳು ನೆರವು ಒದಗಿಸಬಹುದು. ಇದರಿಂದ ಮಕ್ಕಳ ದಾಖಲಾತಿ ಮತ್ತು ಗುಣಮಟ್ಟದ ಶಿಕ್ಷಣ ಖಾತರಿಪಡಿಸಬಹುದು. ನರೇಗಾ ಯೋಜನೆಯಡಿ ಶಾಲೆ, ವಸತಿ ನಿಲಯಗಳಲ್ಲಿ ಆಟದ ಮೈದಾನ, ಕಾಂಪೌಂಡ್‌ ಗೋಡೆ ನಿರ್ಮಾಣ ಮಾಡಬಹುದು.’ಉಮಾ ಮಹಾದೇವನ್‌, ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ

 

ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next