ಕೊಲ್ಲೂರು: ಸ್ವಚ್ಛತೆಯ ವಿಷಯದಲ್ಲಿ ವಂಡ್ಸೆ ಗ್ರಾ.ಪಂ. ಮಾದರಿ ಕೆಲಸ ಮಾಡಿದೆ. ಇನ್ನಷ್ಟು ಹೊಸ ಯೋಜನೆಗಳು ಇಲ್ಲಿ ಮೂಡಿಬರಬೇಕು. ವಂಡ್ಸೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಈಗ ನಿರ್ಮಾಣವಾಗುತ್ತಿರುವ ಕಿಂಡಿ ಅಣೆಕಟ್ಟು ವಂಡ್ಸೆಯ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಲಿದೆ ಎಂದು ಜಿ.ಪಂ. ಶಿಕ್ಷಣ ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಹೇಳಿದರು.
ವಂಡ್ಸೆ ಗ್ರಾಮದ ಮಾರ್ಕೆಟ್ ರಸ್ತೆಯಲ್ಲಿ ಗಾಂಧಿ ಗ್ರಾಮ ಪುರಸ್ಕಾರದ ಅನುದಾನದಲ್ಲಿ ನಿರ್ಮಿಸಲಾದ ಸಾರ್ವಜನಿಕ ಶೌಚಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ವಂಡ್ಸೆಯ ಸ್ವಾವಲಂಬನಾ ಕೇಂದ್ರದಲ್ಲಿ ಹೊಲಿಗೆ ತರಬೇತಿ ಪಡೆದ ಪ್ರಥಮ ತರಗತಿಯ 46 ಶಿಬಿರಾರ್ಥಿಗಳಿಗೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧೂ ರೂಪೇಶ್ ಪ್ರಮಾಣ ಪತ್ರ ವಿತರಿಸಿ, ಸ್ವಾವಲಂಬನಾ ಕೇಂದ್ರ ಗ್ರಾಮ ಪಂಚಾಯತ್ ಮಟ್ಟದಲ್ಲಿ ಮಾಡಿರುವುದು ಅನುಕರಣೀಯ ಎಂದರು.
ಮೂಕಾಂಬಿಕಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಕೃಷ್ಣಮೂರ್ತಿ ಮಂಜರು ಸಸಿಗಳನ್ನು ವಿತರಿಸಿ ಮಾತನಾಡಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಹೊಲಿಗೆ ತರಬೇತಿ ಪಡೆದವರು ಟೈಲರಿಂಗ್ ಘಟಕ ಆರಂಭಿಸುವುದಾದರೆ 10 ಟೈಲರಿಂಗ್ ಯಂತ್ರಗಳನ್ನು ಉಚಿತವಾಗಿ ನೀಡುವುದಾಗಿ ತಿಳಿಸಿದರು.
ಗ್ರಾ. ಪಂ. ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಸದಸ್ಯ ಉದಯ ಪೂಜಾರಿ, ಗ್ರಾ.ಪಂ. ಉಪಾಧ್ಯಕ್ಷೆ ಶಾರದಾ ರುದ್ರಯ್ಯ ಆಚಾರ್ಯ, ಗ್ರಾ.ಪಂ. ಸದಸ್ಯರಾದ ಉದಯ ಕೆ.ನಾಯ್ಕ, ಗುಂಡು ಪೂಜಾರಿ, ಕೊಲ್ಲೂರು ಮೂಕಾಂಬಿಕಾ ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯ ವಂಡಬಳ್ಳಿ ಜಯರಾಮ ಶೆಟ್ಟಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ವಿ.ಕೆ. ಶಿವರಾಮ ಶೆಟ್ಟಿ, ಸಂಜೀವ ಪೂಜಾರಿ ಉಪಸ್ಥಿತರಿದ್ದರು.
ಸುರೇಖಾ ಒಕ್ಕೂಟ ರಚನೆ ಬಗ್ಗೆ ಮಾಹಿತಿ ನೀಡಿದರು. ಸಾರ್ವಜನಿಕ ಶೌಚಾಲಯ ನಿರ್ಮಾಣದ ಗುತ್ತಿಗೆದಾರ ಸಂಜೀವ ಪೂಜಾರಿ ಅವರನ್ನು ಗೌರವಿಸಲಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೂಪಾ ಗೋಪಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಎಸ್.ಎಲ್.ಆರ್.ಎಂ. ಮೇಲ್ವಿಚಾರಕಿ ವಿಜಯಲಕ್ಷ್ಮೀ ವಂದಿಸಿದರು.