ಮನೆ ಬಿದ್ದವರಿಗೆ ಸರ್ಕಾರದಿಂದ ಬರುವ ಮನೆಗಳನ್ನು ಒದಗಿಸಿ ಕೊಡುತ್ತೇನೆ. ಸರ್ವೇ ನಂ.1ರಲ್ಲಿನ ಸರ್ಕಾರಿ ಜಾಗೆಯ ಒತ್ತುವರಿ
ತೆರವುಗೊಳಿಸುತ್ತೇನೆ. ಸಿಮೆಂಟ್ ರಸ್ತೆ, ಹೊಲದ ದಾರಿ ಮಾಡಿಸುತ್ತೇನೆ. ಒಂದೇ, ಎರಡೇ.. ಸಾವಿರ ಸಾವಿರ ಪ್ರಣಾಳಿಕೆಗಳು.
Advertisement
ಹೌದು. ರಾಜ್ಯಾದ್ಯಂತ ನಾಳೆ ನಡೆಯುವ ಮೊದಲ ಹಂತದ ಗ್ರಾಪಂ ಚುನಾವಣೆ ಅಖಾಡ ರಂಗೇರಿದ್ದು, ಮತಬೇಟೆಗೆ ಹರಸಾಹಸಪಡುತ್ತಿರುವ ಅಭ್ಯರ್ಥಿಗಳು ಇದೀಗ ಸ್ಥಳೀಯ ಸಮಸ್ಯೆಗಳು, ಅಭಿವೃದ್ಧಿ ಪರ ಕೆಲಸಗಳು ಮತ್ತು ಸಾಮಾಜಿಕ ಸ್ವಾಸ್ಥದ ಕೆಲಸಗಳ ಭರವಸೆ ನೀಡುತ್ತ ಮತ ಯಾಚಿಸುತ್ತಿದ್ದಾರೆ.
ಪ್ರಣಾಳಿಕೆಯನ್ನಿಟ್ಟುಕೊಂಡು ಮತ ಬೇಡುವುದು ರೂಢಿ. ಅದೇ ಮಾದರಿಯಲ್ಲಿ 2020ರ ಗ್ರಾಪಂ ಚುನಾವಣೆಯಲ್ಲಿ ಅಭ್ಯರ್ಥಿಗಳು ಗೆಲುವಿಗಾಗಿ ವೈಯಕ್ತಿಕ ಮತ್ತು ಗೌಪ್ಯ ಪ್ರಣಾಳಿಕೆಗಳನ್ನು ಸಿದ್ಧಪಡಿಸಿಕೊಂಡು ಮತ ಬೇಟೆಗಿಳಿದಿದ್ದಾರೆ.
ಕೆಲ ಗ್ರಾಮಗಳಲ್ಲಿ ತೆರೆಮರೆಯಲ್ಲೇ ಜಾತಿ, ಧರ್ಮಗಳ ಆಧಾರದ ಮೇಲೆ ಗೆಲುವಿನ ತಂತ್ರ ರೂಪಿಸುತ್ತಿದ್ದರೆ, ಇನ್ನು ಕೆಲ ಕಡೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯಡಿಯೂರಪ್ಪ ಅವರಂತೆ ಅಭಿವೃದ್ಧಿ ಮಂತ್ರ ಜಪಿಸುತ್ತ ಮತದಾರರನ್ನು ಅಭ್ಯರ್ಥಿಗಳು ಓಲೈಸುತ್ತಿದ್ದಾರೆ. ಪ್ರಣಾಳಿಕೆ ಜಿಲ್ಲಾಮಟ್ಟ ಮತ್ತು ಪ್ರಾದೇಶಿಕವಾಗಿ ಆಯಾ ಸ್ಥಳೀಯ ಜನರ ಅನುಕೂಲ ಮತ್ತು ಅನಾನುಕೂಲ, ಆಗಬೇಕಿರುವ ಕೆಲಸಗಳು ಮತ್ತು ಜಾತಿ, ಧರ್ಮ, ಜಿದ್ದು, ಸವಾಲಾಗಿ ಕಣಕ್ಕಿಳಿದವರು ಹೀಗೆ ಸ್ಥಳೀಯ ಅಜೇಂಡಾಗಳನ್ನೇ ಇಟ್ಟುಕೊಂಡು
ಅಭ್ಯರ್ಥಿಗಳು ಮತಬ್ಯಾಂಕ್‌ಗಳಿಗೆ ಲಗ್ಗೆ ಹಾಕುವ ತಂತ್ರ ಹೆಣೆದಿದ್ದಾರೆ.
Related Articles
Advertisement
ಭ್ರಷ್ಟಾಚಾರಿಗಳು ಮತ್ತೆ ಕಣಕ್ಕೆ: 2015ರ ಚುನಾವಣೆಯಲ್ಲಿ ಭರವಸೆ ಸುರಿಮಳೆಗೈದು ಗೆದ್ದಿರುವ ಸದಸ್ಯರು ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಗ್ರಾಪಂನಲ್ಲಿ ನಡೆದ ಅನೇಕ ಅಭಿವೃದ್ಧಿ ಯೋಜನೆಗಳಲ್ಲಿ ಹಣ ತಿಂದವರು, ಅವರ ವಿರುದ್ಧ ಆಗಲೇ ಓಂಬಡ್ಸ್‌ಮನ್‌ಗಳಿಗೆ ದೂರು ನೀಡಿದ್ದರೂ ಮರಳಿ ಮತ್ತೆ ಈ ವರ್ಷದ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಪುನರಾಯ್ಕೆ ಬಯಸುವುದು ತಪ್ಪಲ್ಲ. ಆದರೆ ಭ್ರಷ್ಟಾಚಾರವೆಸಗಿ ಪುನರಾಯ್ಕೆ ಬಯಸಿ ಕಣದಲ್ಲಿದ್ದರೂ ಅವರನ್ನು ಕೇಳುವವರೇ ಇಲ್ಲದಂತಾಗಿದೆ. ಸರ್ಕಾರದ ಹಣ ತಿಂದು ತಪ್ಪಿತಸ್ಥರೆಂದು ಜಿಲ್ಲಾ ಓಂಬಡ್ಸ್‌ಮನ್ ಗಳಿಂದ ಹಣೆಪಟ್ಟಿ ಪಡೆದು ಸರ್ಕಾರಕ್ಕೆ ತಿಂದಹಣ ಮರಳಿ ಕಟ್ಟಿದ ಆರೋಪಿಗಳು ಇದೀಗ ಯಾವುದೇ ಕೀಳರಿಮೆ ಇಲ್ಲದೇ ಚುನಾವಣೆ ಅಖಾಡದಲ್ಲಿದ್ದಾರೆ. ಮರಳಿ ಬಂದ ಭ್ರಷ್ಟರು
ಧಾರವಾಡ, ಬೆಳಗಾವಿ ಸೇರಿದಂತೆ ರಾಜ್ಯದ 27ಕ್ಕೂ ಅಧಿಕ ಜಿಲ್ಲೆಗಳ ನೂರಾರು ಗ್ರಾಪಂನಲ್ಲಿ ಹಣ ಗುಳುಂ ಮಾಡಿದ ಪ್ರಕರಣ ಸಾಬೀತಾಗಿವೆ. ಈ ಪೈಕಿ ಧಾರವಾಡ ಜಿಲ್ಲೆಯ ತಾಪಂ ಇಒ, ಗ್ರಾಪಂ ಅಧ್ಯಕ್ಷೆ, ಪಿಡಿಒ ಸೇರಿದಂತೆ ಇತರೆ ಅಧಿಕಾರಿಗಳಿಗೆ ಜಿಲ್ಲಾ
ಓಂಬಡ್ಸ್‌ಮನ್ 2.52 ಲಕ್ಷ ರೂ. ದಂಡ ವಿಧಿಸಿ ಅದನ್ನು ಮರಳಿ ವಸೂಲಿ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಳ್ಳಿಯ ಗ್ರಾಪಂ ಅಧ್ಯಕ್ಷೆ ಮತ್ತು ಕಂಪ್ಯೂಟರ್ ಆಪರೇಟರ್ ಮಾಡಿದ ತಪ್ಪು ಲೆಕ್ಕಪತ್ರದಿಂದ ಹತ್ತು ಲಕ್ಷ ರೂ.ಗೂ ಅಧಿಕ ಹಣದ ಅವ್ಯವಹಾರ ನಡೆದಿದ್ದು ಸಾಬೀತಾಗಿದೆ. ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಗ್ರಾಪಂ ಅಧ್ಯಕ್ಷರೊಬ್ಬರು ಗುಳುಂ ಮಾಡಿದ ಗಂಟು ಕೋಟಿ ದಾಟುತ್ತದೆ. ಇನ್ನು 2015ರಲ್ಲಿ ಆಯ್ಕೆಯಾಗಿದ್ದ ಗ್ರಾಪಂ ಸದಸ್ಯರ ಪೈಕಿ ಶೇ.20 ಸದಸ್ಯರು ಮರಳಿ 2020ರ ಗ್ರಾಪಂನಲ್ಲಿ ಪುನರಾಯ್ಕೆ ಬಯಸಿದ್ದಾರೆ ಎನ್ನಲಾಗಿದೆ. ಇಂತಹ ಅನೇಕ ಅಂಶಗಳು ಪಂಚಾಯತ್ ರಾಜ್ ಸಂಸ್ಥೆಯೊಂದು ನಡೆಸಿದ ಅಧ್ಯಯನದಲ್ಲಿ ಬಹಿರಂಗವಾಗಿವೆ. ಗ್ರಾಪಂಗಳಲ್ಲಿ ಕಂಡು ಬರುತ್ತಿರುವ ವೈಯಕ್ತಿಕ-ಗೌಪ್ಯ ಪ್ರಣಾಳಿಕೆಗಳು
– ಈ ಬಾರಿ ಹೊಸಬರಿಗೆ ಅವಕಾಶ ಕೊಡಿ ಎಂಬ ಮನವಿಗಳು.
– ಹಿಂದಿನವರ ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ಭಾರಿ ಪ್ರಚಾರ.
– ಎರಡು ಮೂರು ಬಾರಿ ಒಬ್ಬರನ್ನೇ ಆಯ್ಕೆ ಮಾಡಬೇಡಿ ಎಂದು ಮನದಟ್ಟು ಮಾಡುವುದು.
– ಗೆದ್ದರೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆಂದು ಮನವರಿಕೆ ಮಾಡುವುದು.
– ಕೆರೆ, ಕುಂಟೆ ಸುಧಾರಣೆ, ನೀರು ಪೂರೈಕೆಗೆ ಒತ್ತು ಕೊಡುವ ಭರವಸೆ.
– ಸುಂದರ ರಸ್ತೆಗಳು, ಊರಿನ ದೇವಸ್ಥಾನ ನಿರ್ಮಾಣ ಭರವಸೆ
– ವೈಯಕ್ತಕ ದ್ವೇಷ-ಜಿದ್ದಿಗೆ ಬಿದ್ದು ಗೆಲ್ಲಿಸುವುದು, ಸೋಲಿಸುವುದು. – ಬಸವರಾಜ ಹೊಂಗಲ್