ಚಿಕ್ಕೋಡಿ: ಎಕರೆಗೆ 100 ಟನ್ ಪ್ರಗತಿ ಸಾಧಿಸಲು ಕೃಷಿಕರು ಮಣ್ಣಿನ ಫಲವತ್ತತೆ, ಕಬ್ಬಿನ ಲಾವಣಿ ಮಾಡುವ ಬಗೆ, ರಾಸಾಯನಿಕ ಗೊಬ್ಬರಗಳ ಮಿತ ಬಳಕೆ, ನೀರಿನ ವ್ಯವಸ್ಥೆ, ಕಬ್ಬಿನ ಕಟಾವು, ಈ ಪಂಚಸೂತ್ರಗಳನ್ನು ಪಾಲಿಸುವುದರಿಂದ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ ಎಂದು ಕೃಷಿ ತಜ್ಞ ಸಂಜಯ ಮಾನೆ ಹೇಳಿದರು.
ತಾಲೂಕಿನ ಅಂಕಲಿ ಗ್ರಾಮದ ಶಿವಾಲಯದಲ್ಲಿ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಡಾ| ಪ್ರಭಾಕರ ಕೋರೆ ಅವರ 75ನೇ ಜನ್ಮ ದಿನಾಚರಣೆ ಅಂಗವಾಗಿ ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ, ಚಿಕ್ಕೋಡಿ ಶಿವಶಕ್ತಿ ಶುಗರ್ಸ್ ಲಿಮಿಟೆಡ್, ಸವದತ್ತಿ ಆಮ್ಸ್ì ಡಿಸ್ಟಿಲರಿ ಪ್ರೈವೆಟ್ ಲಿಮಿಟೆಡ್, ಡಾ| ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ ಲಿಮಿಟೆಡ್ ಪರವಾಗಿ ಆಯೋಜಿಸಿದ್ದ “ಪ್ರತಿ ಎಕರೆಗೆ ನೂರು ಟನ್ ಕಬ್ಬು ಉತ್ಪಾದನೆ ಮಾಡುವ ಬಗೆ ಹೇಗೆ?’ ಎಂಬ ವಿಷಯದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಜನರು ಇನ್ನೂವರೆಗೆ ತಮ್ಮ ಪಾರಂಪರಿಕ ಕೃಷಿ ವ್ಯವಸಾಯ ಮಾಡುತ್ತಿದ್ದರಿಂದ ಕೃಷಿ ಉತ್ಪನ್ನ ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ. ಆದರೆ ಇಂದು ಕೃಷಿ ಬೇಸಾಯದಲ್ಲಿ ಮತ್ತು ಕಬ್ಬು ಬೆಳೆಯುವಲ್ಲಿ ಹಲವಾರು ತಂತ್ರಜ್ಞಾನ ಬೆಳಕಿಗೆ ಬಂದಿದು, ಈ ತಂತ್ರಜ್ಞಾನ ಮೂಲಕ ಕೃಷಿ ಬೇಸಾಯ ಮಾಡಿದರೆ ರೈತರು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಉತ್ಪಾದನೆ ಮಾಡಬಹುದು. ಕಬ್ಬು ಬೆಳೆಯುವ ಬೆಳೆ ಪದ್ಧತಿಯಲ್ಲಿ ಎಲ್ಲ ರೈತರು ಪಂಚಸೂತ್ರದ ಮೂಲಕ ಕಬ್ಬು ಬೆಳೆದರೆ ಪ್ರತಿ ಎಕರೆ ಕಬ್ಬಿಗೆ ನೂರ ಐವತ್ತು ಟನ್ ಇಳುವರಿ ಪಡೆಯಲು ಸಾಧ್ಯ ಎಂದರು.
ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ| ಪ್ರಭಾಕರ ಕೋರೆ ಮಾತನಾಡಿ, ರೈತರು ಮುಂದೆ ಹಲವಾರು ಸಮಸ್ಯೆ ಇದ್ದರೂ ಕೂಡ ನಿವಾರಿಸಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಭಾಗದ ರೈತರಿಗೆ ಅನುಕೂಲ ಆಗುವಂತಹ ಎಲ್ಲ ತಂತ್ರಜ್ಞಾನ ಇಂದು ಲಭ್ಯವಿದ್ದು, ಈ ತಂತ್ರಜ್ಞಾನ ಮೂಲಕ ಕೃಷಿ ಪದ್ಧತಿ ಅಳವಡಿಸಿಕೊಂಡು ಕೃಷಿ ಉತ್ಪಾದನೆ ಹೆಚ್ಚಿಸಬೇಕು ಎಂದರು.
ರೈತರು ಕೃಷಿ ಭೂಷಣ ಪುರಸ್ಕೃತ ಸಂಜಯ ಮಾನೆ ಅವರ ಅನುಭವವನ್ನು ಕೃಷಿಯಲ್ಲಿ ಅಳವಡಿಸಿ ಪ್ರಗತಿ ಸಾಧಿಸಬೇಕು. ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಚಿಕ್ಕೋಡಿ ಹಾಗೂ ಶಿವಶಕ್ತಿ ಶುಗರ್ ಸದಸ್ಯರು ಪ್ರಸಕ್ತ ಹಂಗಾಮಿನಲ್ಲಿ 100 ಟನ್ ಕಬ್ಬು ಬೆಳೆಯುವ ರೈತರಿಗೆ ಪ್ರೋತ್ಸಾಹ ಬಹುಮಾನವಾಗಿ 25 ಸಾವಿರ ನೀಡಲಾಗುವುದು ಎಂದು ಘೋಷಿಸಿದ್ದಾರೆ. ಸಂಜಯ ಮಾನೆ ಅವರ ಕೃಷಿ ಪುಸ್ತಕವನ್ನು ಕನ್ನಡದಲ್ಲಿ ಪ್ರಕಟಿಸಲಾಗುವುದು ಎಂದರು.
ಡಾ| ಪ್ರಭಾಕರ ಕೋರೆ ಜನ್ಮ ದಿನಾಚರಣೆ ಸಮಿತಿ ಅಧ್ಯಕ್ಷ ಬಿ.ಆರ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ತಾತ್ಯಾಸಾಹೇಬ್ ಕಾಟೆ, ಬಾಳಗೌಡ ರೇಂದಾಳೆ, ಅಣ್ಣಾಸಾಹೇಬ್ ಪಾಟೀಲ್, ಚೇತನ್ ಪಾಟೀಲ್, ಸಂದೀಪ್ ಪಾಟೀಲ್, ಮಲ್ಲಪ್ಪ ಮೈಶಾಳೆ, ರಾಮಚಂದ್ರ ನಿಶಂದಾರ್, ಮಹಾವೀರ ಮಿರ್ಜಿ, ಸಿದಗೌಡ ಮಗದುಮ್ಮ, ಪಿಂಟು ಹಿರೇಕುರಬರ, ಸುರೇಶ್ ಪಾಟೀಲ, ತುಕಾರಾಮ ಪಾಟೀಲ, ಪ್ರಭಾಕರ್ ಕೋರೆ ಕ್ರೆಡಿಟ್ ಸೌಹಾರ್ದ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ದೇವೇಂದ್ರ ಕರೋಶಿ ಮುಂತಾದವರು ಇದ್ದರು.
ಸಿ.ಬಿ. ಕೋರೆ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಕೋರೆ ಸ್ವಾಗತಿಸಿದರು. ಉಪನ್ಯಾಸಕ ಸಚಿನ ಮೆಕ್ಕಳಕ್ಕಿ ಪ್ರಾಸ್ತಾವಿಕ ಮಾತನಾಡಿದರು.