Advertisement

ಪಂಚರತ್ನ ಪಂಚರ್, ಪ್ರಜಾಧ್ವನಿ ಬ್ರೇಕ್ ಫೇಲ್: ಶಿವಮೊಗ್ಗದಲ್ಲಿ ನಳಿನ್ ವ್ಯಂಗ್ಯ

04:38 PM Feb 05, 2023 | Team Udayavani |

ಶಿವಮೊಗ್ಗ :”ಪಂಚರತ್ನ ಪಂಚರ್ ಆಗಿದೆ, ಪ್ರಜಾಧ್ವನಿ ಬ್ರೇಕ್ ಫೇಲ್ ಆಗಿದೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ವಿರುದ್ಧ ಭಾನುವಾರ ವ್ಯಂಗ್ಯವಾಡಿದ್ದಾರೆ.

Advertisement

ಶಿವಮೊಗ್ಗದಲ್ಲಿ ನಡೆಯುತ್ತಿರುವ ಪೇಜ್ ಪ್ರಮುಖ್ ಸಮಾವೇಶದಲ್ಲಿ ಮಾತನಾಡಿದ ಅವರು,ಸುಡುವ ಬಿಸಿಲಿನಲ್ಲಿ ನಾವು ಕಾರ್ಯಕ್ರಮ ಮಾಡುತ್ತಿದ್ದೇವೆ. ಕೆಲವರ ಹೊಟ್ಟೆಯಲ್ಲೂ ಬಿಸಿಮುಟ್ಟಿದೆ. ಪಂಚರತ್ನ ಪಂಚರ್ ಆಗಿದೆ, ಪ್ರಜಾಧ್ವನಿ ಬ್ರೇಕ್ ಫೇಲ್ ಆಗಿದೆ ಎಂದರು.

ನಾನೂ ಪೇಜ್ ಪ್ರಮುಖರಿಗೆ ಪ್ರೇರಣೆ ನೀಡಲು ಬಂದಿಲ್ಲ.ಬಿಜೆಪಿಯ ಶಕ್ತಿಕೇಂದ್ರ ಶಿವಮೊಗ್ಗ, ನಾನೂ ನಿಮ್ಮಿಂದ ಪ್ರೇರಣೆ ಪಡೆಯಲು ಬಂದಿದ್ದೇನೆ.ಬೂತ್ ಗೆದ್ದಾಗ ಮಾತ್ರ ಬಿಜೆಪಿ ಗೆದ್ದಹಾಗೆ ಆಗುತ್ತದೆ. ಗುಜರಾತ್ ನಲ್ಲಿ ಏಳನೇ ಬಾರಿಗೆ ಬಿಜೆಪಿಗೆ ಗೆಲ್ಲಲು ಕಾರಣ ಪೇಜ್ ಪ್ರಮುಖರಿಂದ ಆಗುತ್ತದೆ. ರಾಜ್ಯದಲ್ಲಿ ಪೇಜ್ ಪ್ರಮುಖರ ಮೊದಲ ಸಮಾವೇಶ ಶಿವಮೊಗ್ಗದಲ್ಲಿ ನಡೆಯುತ್ತಿದೆ ಎಂದರು.

ಕಾಂಗ್ರೆಸ್ ಎರಡು ಕಡೆ ಮಾತ್ರ ಉಳಿದಿದೆ. ಒಂದು ಡಿಕೆಶಿ ಮನೆಯಲ್ಲಿ, ಇನ್ನೊಂದು ಸಿದ್ದರಾಮಯ್ಯ ಮನೆಯಲ್ಲಿ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮೂರು ತುಂಡಾಗುತ್ತದೆ.ನಮ್ಮ ಮುಂದಿನ ಕಾರ್ಯ ಅಂತ್ಯೋದಯ. ಕಾಂಗ್ರೆಸ್ ಪೇಜ್ ಪ್ರಮುಖ ಸಭೆ ಮಾಡೋದು ಬಿಡಿ, ರಾಜ್ಯದ ಕಮಿಟಿ ಇಲ್ಲ.
ಕಾಂಗ್ರೆಸ್ ಒಂದು ಡಕೋಟಾ ಬಸ್ ಎಂದರು.

ರಾಷ್ಟ್ರೀಯ ಅಧ್ಯಕ್ಷ ಕೇರಳದ ಒಂದು ಗ್ರಾಮದ ಕಾರ್ಯಕರ್ತರ ಮನೆಗೆ ಬಂದು ಸಭೆ ಮಾಡುತ್ತಾರೆ. ಅಲ್ಲಿಯ ವರೆಗೂ ಕೇರಳದ ಕಮ್ಯುನಿಸ್ಟ್ ಪಕ್ಷಕ್ಕೆ ಗೊತ್ತಿರಲ್ಲ.ಅಮಿತ್ ಶಾ ಬಂದು ಹೋದ ನಂತರ ಬಿಸಿ ಮುಟ್ಟಿದೆ ಎಂದರು.

Advertisement

ಶಿವಮೊಗ್ಗದ ಪೇಜ್ ಪ್ರಮುಖರಿಗೆ ಅಭಿನಂದನೆ ಸಲ್ಲಿಸುತ್ತೇನೆ.ಭಾರತದಲ್ಲಿ ಮಾತ್ರ ಅಲ್ಲ, ಅಮೆರಿಕದಲ್ಲಿ ಮೋದಿ ಪರ ಘೋಷಣೆ ಕೂಗುತ್ತಿದ್ದಾರೆ. ಪಾಕಿಸ್ಥಾನದ ಸಂಸತ್ತಿನಲ್ಲಿ ಭಾರತ್ ಮಾತಾಕೀ ಜೈ ಎನ್ನುವ ಘೋಷಣೆ ಕೂಗುವ ಸಮಯ ಬಂದಿದೆ. ಕಾಶ್ಮೀರದಲ್ಲಿ ಭಾರತ್ ಮಾತಕೀ ಜೈ ಎಂದು ಘೋಷಣೆ ಕೂಗುವ ಹಾಗೆ ಇರಲ್ಲಿಲ್ಲ.ಅಷ್ಟೇ ಅಲ್ಲ ಹುಬ್ಬಳ್ಳಿಯ ಈದ್ಗ ಮೈದಾನದಲ್ಲಿ ಭಾರತದ ಬಾವುಟ ಹಾರಿಸಲು ಬಿಟ್ಟಿರಲಿಲ್ಲ.ಉಕ್ರೇನ್ ನಲ್ಲಿ ಭಾರತದ ಧ್ವಜ ಹಾರುತ್ತಿದೆ ಎಂದರು.

ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಹೇಳಿ ಲಸಿಕೆ ತೆಗೆದುಕೊಳ್ಳಬೇಡಿ ಎಂದು ಹೇಳಿದ್ದರು. ಲಸಿಕೆ ತೆಗೆದುಕೊಂಡರೇ ಮಕ್ಕಳಾಗುವುದಿಲ್ಲ ಎಂದು.ಹೀಗೆ ಹೇಳಿ ಬೆಳಗ್ಗೆ ಹೋಗಿ ಲಸಿಕೆ ತೆಗೆದುಕೊಂಡರು.ಪ್ರಧಾನಿ ಮೋದಿ, ಮೊದಲು ಲಸಿಕೆ ತೆಗೆದು ಕೊಂಡಿಲ್ಲ ವೈದ್ಯರು ಪೊಲೀಸರು ದಾದಿಯರು ಹಾಗೂ ಆಶಾಕಾರ್ಯಕರ್ತರಿಗೆ ನೀಡಿ ದೇಶ ಉಳಿಸಿದರು. ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರೆ, ಮೊದಲು ಸೋನಿಯಾ ಗಾಂಧಿಗೆ ನೀಡುತ್ತಿದ್ದರು. ನಂತರ ಸೋನಿಯಾ ಗಾಂಧಿ ಕುಟುಂಬಕ್ಕೆ ನೀಡುತ್ತಿದ್ದರು. ಲಸಿಕೆ ಉಳಿದರೆ ಸಿದ್ದರಾಮಯ್ಯ, ಖರ್ಗೆಗೆ ನೀಡುತ್ತಿದ್ದರು ಎಂದು ಲೇವಡಿ ಮಾಡಿದರು.

ನಿವೃತ್ತಿ ಆಗಬೇಕು!

”ಬಿಜೆಪಿಗೆ ಹೊಸಬರು ಬರಬೇಕು, ನಾವು 60 ವರ್ಷ ಮೇಲ್ಪಟ್ಟವರು ನಿವೃತ್ತಿ ಆಗಬೇಕು” ಎಂದು ಹೊಸದೊಂದು ಬದಲಾವಣೆಯ ಸೂಚನೆ, ಹಿರಿಯ ನಾಯಕರಿಗೆ ಪರೋಕ್ಷ ಸಂದೇಶ ರವಾನಿಸಿದರು.

ಭಾರತ್ ಜೋಡೋ ಮಾಡಿದ್ದು ನರೇಂದ್ರ ಮೋದಿ. ರಾಹುಲ್ ಗಾಂಧಿ ಮಾಡಿದ್ದು ಪಾದಯಾತ್ರೆ ಮಾತ್ರ. ಗರೀಬಿ ಹಟಾವೋ ಘೋಷಣೆ ಕಾಂಗ್ರೆಸ್ ಘೋಷಣೆ ಆಗಿತ್ತು.ಅದು ಸೋನಿಯಾ ಗಾಂಧಿ ಕುಟುಂಬದ ಗರೀಬಿ ಹಟಾವೋ ಆಯ್ತು, ಸಿದ್ದರಾಮಯ್ಯ ಖರ್ಗೆ ಹಾಗೂ ಶಿವಕುಮಾರ್ ಮನೆ ಗರೀಬಿ ಹಟಾವೋ ಆಗಿದೆ ಎಂದರು.

ಮೀಸಲಾತಿ ನೀಡಿದ್ದು ಸಿಎಂ ಬೊಮ್ಮಾಯಿ, ಸಮಾಜವನ್ನು ಒಡೆದು ಹಾಕಿದ್ದು ಸಿದ್ದರಾಮಯ್ಯ. ಟಿಪ್ಪು ಜಯಂತಿ ಹೆಸರಲ್ಲಿ ಹತ್ಯೆಯಾದಗ ಸಿದ್ದರಾಮಯ್ಯ ಕಣ್ಣಲ್ಲಿ ನೀರು ಬಂದಿಲ್ಲ. ಪಿಎಫ್ ಐ ಬ್ಯಾನ್ ಮಾಡಿದಾಗ, 2000 ಕಾರ್ಯಕರ್ತರನ್ನು ಎಫ್ ಐ ಆರ್ ಮಾಡಿದಾಗ ಕಣ್ಣೀರು ಬಂತು ಎಂದು ಕಿಡಿ ಕಾರಿದರು.

ನಿಮ್ಮ ತೀರ್ಥಹಳ್ಳಿಯವರು ಒಬ್ಬರು ಕುಕ್ಕರ್ ಹಿಡಿದು ಕೊಂಡು ಬಂದರು. ಇದರಿಂದ ಮಂಗಳೂರಿನಲ್ಲಿ ಜನ ಭಯಭೀತರಾದರು. ಆಗ ಡಿಕೆಶಿಗೆ ಎರಡು ಕುಕ್ಕರ್ ಮೇಲೆ ಪ್ರೀತಿ ಬಂತು. ಒಂದು ಬೆಳಗಾವಿ ಕುಕ್ಕರ್, ಇನ್ನೊಂದು ತೀರ್ಥಹಳ್ಳಿಯ ಕುಕ್ಕರ್ ಎಂದರು.

ಮುಂದಿನ ಮುಖ್ಯಮಂತ್ರಿ ಎಂದು ನಾಲ್ಕು, ನಾಲ್ಕು ಶರ್ಟ್ ಹಾಗೂ ಸೂಟ್ ಹೊಲಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಹೇಳುತ್ತಿದ್ದರು ನಮ್ಮ ಅಪ್ಪನ ಆಣೆಗೂ ಮೋದಿ ಪ್ರಧಾನಿ ಆಗುವುದಿಲ್ಲ ಎಂದು.ಈಗ ನಾನು ಹೇಳುತ್ತೇನೆ, ನಮ್ಮ ಅಪ್ಪನ ಆಣೆಗೂ ಸಿದ್ದರಾಮಯ್ಯ ಸಿಎಂ ಆಗುವುದಿಲ್ಲ.ಕಾಂಗ್ರೆಸ್ ಯಾತ್ರೆ ಪಂಚರ್ ಆಗಿದೆ ಎಂದರು.

ರಾಘವೇಂದ್ರ ಮೇಲೆ ನನಗೆ ಸಿಟ್ಟಿದೆ !
ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಹೋಗಳಿ, ಒಂದು ಕೆಲಸವನ್ನು ಮಂಗಳೂರಿಗೆ ತರಲು ಬಿಡುವುದಿಲ್ಲ. ಬೈಂದೂರಿನಲ್ಲೇ ತಡೆದು ನಿಲ್ಲಿಸುತ್ತಾರೆ.ನನಗೆ ರಾಘವೇಂದ್ರ ಮೇಲೆ ಸಿಟ್ಟಿದೆ ಎಂದು ನಗೆ ಚಟಾಕಿ ಹಾರಿಸಿದರು.

ಭಯದಲ್ಲಿದ್ದಾರೆ
9 ಜನ ಡಿಸಿಎಂ ಮೀಟಿಂಗ್ ಹೇಳಿಕೆ ವಿಚಾರ ಕ್ಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರನ್ನು ಭಯದ ವಾತವರಣ ಕಾಡುತ್ತಿದೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ 20 ಸ್ಥಾನ ಕೂಡ ಗೆಲ್ಲಲ್ಲ ಎನ್ನುವ ಭಯದಲ್ಲಿದ್ದಾರೆ. ಬಿಜೆಪಿ ಸರ್ಕಾರ ಬರುತ್ತದೆ ಎಂದು ಅವರು ಸ್ಪಷ್ಟವಾಗಿ ಒಪ್ಪಿಕೊಂಡರಲ್ಲ, ಅವರು ಹೇಳಿದ ಮೇಲೆ ಮುಗಿದು ಹೋಯ್ತು. 9 ಜನ ಉಪ ಮುಖ್ಯಮಂತ್ರಿಗಳು ಎಂದು ಅವರ ಮನೆ ನೋಡಿಯೇ ಹೇಳಿರಬಹುದು.ಮನೆಯೊಳಗಿರುವವರನ್ನೇ ನೋಡಿ ಹೇಳಿರಬಹುದು.ಕುಟುಂಬ ರಾಜಕಾರಣ, ಒಡೆದಾಳುವ ರಾಜಕಾರಣ ಎರಡನ್ನು ಅವರು ಮಾಡಿದ್ದಾರೆ.ಜೊತೆಗೆ ಸಮೂದಾಯಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಗಮನಕ್ಕೆ ಬಂದಿದೆ.ಮಾಜಿ ಸಿಎಂ ಆದವರು.ರಾಜ್ಯದ ಎಲ್ಲಾ ಸಮುದಾಯಗಳಿಗೆ ಗೌರವ ಕೊಡಬೇಕು. ಈ ರೀತಿಯ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ ಎಂದರು.

ಆರ್ ಎಸ್ಎಸ್ ಬಗ್ಗೆ ತಿಳಿಯಲು ಒಳಗೆ ಬಂದು ಅಧ್ಯಯನ ಮಾಡಲಿ. ಸಂಘದ ವಿಚಾರದ ಬಗ್ಗೆ ಎಚ್ಚರಿಕೆಯಿಂದ ಮಾತನಾಡಲಿ.ಇದು ಮೊದಲೇನಲ್ಲ.ಚುನಾವಣೆಯಲ್ಲಿ ಸೋಲುವ ಭಯದಿಂದ ಹೀಗೆ ಹೇಳಿದ್ದಾರೆ ಅಷ್ಟೇ ಎಂದರು.

ಡಿಕೆಶಿ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ ಎಂಬ ಡಿ.ಕೆ. ಸುರೇಶ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ”ಖಂಡಿತವಾಗಿಯೂ ನಮಗೆ ಇಲ್ಲ.ನಾವು ತಿಹಾರ್ ಜೈಲಿಗೆ ಹೋಗಿ ಬಂದಿಲ್ಲ” ಎಂದು ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next