Advertisement

ಪಂಚಾಮೃತ ಘಳಿಗೆ!

11:46 AM Aug 20, 2019 | Sriram |

ನಿರಂತರ ರಾಸಾಯನಿಕ ಗೊಬ್ಬರ, ಔಷಧದ ಬಳಕೆಯಿಂದ ಬರಡಾಗಿದ್ದ ಕೃಷಿ ಭೂಮಿಯಲ್ಲಿ ಪಂಚಾಮೃತ ಬಳಕೆಯಂಥ ಸಾವಯವ ಕೃಷಿ ವಿಧಾನಗಳಿಂದ ಸಮೃದ್ಧವಾಗಿ ಬೆಳೆಯುತ್ತಿದೆ ದಾಳಿಂಬೆ ಮತ್ತು ಶ್ರೀಗಂಧ.

Advertisement

ವರ್ಷದಲ್ಲಿ ಬಹುಕಾಲ ನೀರಿನ ಅಭಾವ ಮತ್ತು ಬರಗಾಲವನ್ನು ಎದುರಿಸುವ ಪ್ರದೇಶ, ಬಯಲುಸೀಮೆ ಬಳ್ಳಾರಿಯ ಕೊಟ್ಟೂರು. ಈ ಊರಿನಿಂದ ಸುಮಾರು 4 ಕಿ.ಮೀ ದೂರದ ಇಟ್ಟಿಗೆ ರಸ್ತೆಯಲ್ಲಿರುವ ಎಕರೆಗಟ್ಟಲೆ ಪ್ರದೇಶದಲ್ಲಿ ರೈತರೊಬ್ಬರು, ರಾಸಾಯನಿಕಮುಕ್ತ ಹಾಗೂ ನೈಸರ್ಗಿಕ ಮಾರ್ಗಗಳನ್ನು ಅನುಸರಿಸಿ ದಾಳಿಂಬೆ ಮತ್ತು ಶ್ರೀಗಂಧ, ಮಹೋಗನಿ, ಜಂಬು ನೇರಳೆ ಬೆಳೆಯುತ್ತಿದ್ದಾರೆ.

ಪಂಚಾಮೃತ ಮತ್ತು ನೈಸರ್ಗಿಕ ಕೀಟನಾಶಕ
ಪಂಚಾಮೃತವನ್ನು ಸಸಿಗಳ ಮೇಲೆ ಸಿಂಪಡಣೆ ಜೊತೆಗೆ ಹನಿ ನೀರಾವರಿ (ಡ್ರಿಪ್‌) ಮೂಲಕ ಬೇರುಗಳಿಗೂ ತಲುಪಿಸುತ್ತ 17 ಎಕರೆಯಲ್ಲಿ ದಾಳಿಂಬೆ, 8 ಎಕರೆಯಲ್ಲಿ ಶ್ರೀಗಂಧ, ರಕ್ತ ಚಂದನ, ಮಹೋಗನಿ, ಜಂಬೂ ನೇರಳೆಯಂಥ ಅರಣ್ಯ ಕೃಷಿಯನ್ನೂ ನಡೆಸುತ್ತಿದ್ದಾರೆ. ಇವರು ನಡೆಸುತ್ತಿರುವ ರಾಸಾಯನಿಕ ಮುಕ್ತ, ಸಾವಯವ ಪದ್ಧತಿಯಿಂದ ಕೃಷಿಭೂಮಿಯ ಸತ್ವ ಹೆಚ್ಚಾಗಿ, ಬೆಳೆಯಲ್ಲಿಯೂ ಸಹ ರೋಗ ನಿರೋಧಕ ಶಕ್ತಿ ಹೆಚ್ಚಿ ಸಮೃದ್ಧವಾಗಿ ಬೆಳೆಯಬಹುದು ಎನ್ನುವುದು ರೈತ ಬರಮನಗೌಡ ಅವರ ಅಭಿಪ್ರಾಯ. ಜೊತೆಗೆ ಕಿಲಾರಿ, ಗಿರ್‌, ಮಲೆನಾಡ ಗಿಡ್ಡ ತಳಿಯ ಆಕಳು ಸಾಕಾಣಿಕೆ ನಡೆಸುತ್ತಾ ಅದರಿಂದ ಸಿಗುವ ಗಂಜಲ, ಸಗಣಿಯನ್ನು ಉಪಯೋಗಿಸುತ್ತ ಪಂಚಾಮೃತವನ್ನು ಸಹ ತಾವೇ ತಯಾರಿಸಿಕೊಂಡು, ಕೀಟ ನಿರ್ವಹಣೆಗೆ ರಾಸಾಯನಿಕಮುಕ್ತ ಸೋಲಾರ್‌ ಕೀಟನಾಶಕ ಯಂತ್ರವನ್ನು ಅಳವಡಿಸಿಕೊಂಡು, ಯಾವುದೇ ರಾಸಾಯನಿಕ ಬಳಸದೆ ಸಂಪೂರ್ಣ ಸಾವಯವ ಕೃಷಿ ನಡೆಸುವುದರ ಜೊತೆಗೆ ಇತರರಿಗೂ ಮಾದರಿಯಾಗಿದ್ದಾರೆ.

ಜಲಸಂರಕ್ಷಣೆ ಕುರಿತು ಕಾಳಜಿ
ನೀರಾವರಿ ವ್ಯವಸ್ಥೆಗೆ 3 ಬೋರ್‌ವೆಲ್‌ ಮೂರು ಕೃಷಿಹೊಂಡವನ್ನು ಹೊಂದಿದ್ದು ಜೊತೆಗೆ ತಮ್ಮ ಜಮೀನಿನಲ್ಲಿ 2- 4 ಎಕರೆ ಪ್ರದೇಶದಲ್ಲಿ ಒಂದು ಸಣ್ಣ ಕೆರೆ ನಿರ್ಮಾಣ ಮಾಡುವ ಯೋಜನೆಯೂ ಇದೆ. ಇದರಿಂದಾಗಿ ಮಳೆನೀರು ಶೇಖರಣೆ ಮಾಡಿ ಸುತ್ತಮುತ್ತಲಿನ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ರೂಪಿಸುವುದು ಒಂದು ಉಪಯೋಗ. ಜೊತೆಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಿ ಬೋರ್‌ವೆಲ್‌ಗ‌ಳು ಸಹ ರೀಚಾರ್ಜ್‌ ಆಗಲು ಅನುಕೂಲವಾಗುವುದು. ಈ ರೀತಿಯಾಗಿ ಸಾವಯವ ಪದ್ಧತಿ ಅಳವಡಿಸಿಕೊಂಡಿರುವುದರ ಹಿಂದೆ ಭೂಮಿಯ ಸತ್ವ ಉಳಿಸಿಕೊಂಡು ಅತಿ ಹೆಚ್ಚು ಇಳುವರಿ ಪಡೆಯುವುದರ ಜೊತೆಗೆ ವಿಷಮುಕ್ತ ಆಹಾರವನ್ನು ಸಮಾಜಕ್ಕೆ ಒದಗಿಸುವ ಕಾಳಜಿಯೂ ಇದೆ.

ಗೋನಂದಜಲದ ಬಳಕೆ
ಅವರು ತಮ್ಮ ಭೂಮಿಯನ್ನು ಫ‌ಲವತ್ತಾಗಿಸಲು ಗೋನಂದಜಲವನ್ನು ಬಳಸುತ್ತಾರೆ. ಗೋನಂದ ಜಲ ಎಂದರೆ ಅಂದರೆ ಕಾರಣಾಂತರಗಳಿಂದ ಸತ್ತುಹೋದ ಗೋವನ್ನು ಗೊಬ್ಬರವಾಗಿಸುವ ಪ್ರಕ್ರಿಯೆ. ಸತ್ತ ಗೋವಿನ ದೇಹದ ಜೊತೆಗೆ ಹುಳಿ ಮಜ್ಜಿಗೆ, ಗೋಮೂತ್ರ, ಬೆಲ್ಲ , ಪಪ್ಪಾಯಿ ಕಾಯಿ ಇವೆಲ್ಲವನ್ನೂ ಒಟ್ಟಾಗಿ ಒಂದು ತೊಟ್ಟಿಯಲ್ಲಿ ಶೇಖರಿಸುವುದು. (ದೇಹ 100 kg ತೂಕವಿದ್ದರೆ, 100 ಲೀಟರ್‌ ಗೋಮೂತ್ರ, 100 ಲೀಟರ್‌ ಹುಳಿ ಮಜ್ಜಿಗೆ, 50kg ಬೆಲ್ಲ, 50kg ಪಪ್ಪಾಯಿ ಕಾಯಿ) ಆ ತೊಟ್ಟಿಯ ಬಾಯಿಯನ್ನು ಒಂದು ಬಟ್ಟೆಯಿಂದ ಮುಚ್ಚಿಟ್ಟು 5- 6 ತಿಂಗಳು ಅದ ನಂತರ ಅದನ್ನು ಕದಡಿದಾಗ ಸ್ಲರಿ (ನಂದಜಲ) ಸಿಗುತ್ತದೆ. ಇದು ದುರ್ವಾಸನೆ ಬೀರುತ್ತದೆಯೇ ಎನ್ನುವುದು ಅನೇಕರ ಪ್ರಶ್ನೆಯಾಗಿರುತ್ತದೆ. ಆದರೆ ದುರ್ವಾಸನೆಯನ್ನು ತೊಡೆದುಹಾಕಲೆಂದೇ ಪಪ್ಪಾಯಿಕಾಯಿಯನ್ನು ಬಳಸುವುದು. ಹೀಗಾಗಿ ದುರ್ವಾಸನೆ ಬೀರುದು.

Advertisement

ರೈತ- ಬರಮನ ಗೌಡ ಪಾಟೀಲ್‌
ಸ್ಥಳ- ಕೊಟ್ಟೂರು, ಬಳ್ಳಾರಿ
ಸಿನ್ಸ್‌- 2014

– ನಾಗರಾಜ ಗೌಡ
ಹೆಚ್ಚಿನ ಮಾಹಿತಿಗಾಗಿ 8073429771

Advertisement

Udayavani is now on Telegram. Click here to join our channel and stay updated with the latest news.

Next