Advertisement

ದಸರಾದಂತೆ ಪಂಚಲಿಂಗದರ್ಶನ ಮಹೋತ್ಸವವನ್ನು ಸರಳ ರೀತಿಯಲ್ಲಿ ಆಚರಿಸೋಣ: ಎಸ್.ಟಿ.ಸೋಮಶೇಖರ್

03:39 PM Nov 04, 2020 | sudhir |

ಮೈಸೂರು: ಕೋವಿಡ್ 19 ರ ಹಿನ್ನೆಲೆಯಲ್ಲಿ ದಸರಾವನ್ನು ಹೇಗೆ ಸರಳವಾಗಿ ಮಾಡಲಾಯಿತೋ ಹಾಗೆಯೇ ಪಂಚಲಿಂಗದರ್ಶನ ಮಹೋತ್ಸವವನ್ನೂ ಮಾಡೋಣ. ವರ್ಚುವಲ್ ವ್ಯವಸ್ಥೆಯನ್ನು ಮಾಡುವುದು ಒಳ್ಳೆಯದು. ಈ ಬಗ್ಗೆ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರ ಬಳಿಯೂ ಚರ್ಚಿಸಿದ್ದೇನೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ನಡೆದ ಪಂಚಲಿಂಗ ದರ್ಶನ ಮಹೋತ್ಸವ ಕುರಿತ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಲಹೆ, ಮಾಹಿತಿಯನ್ನು ಪಡೆದು ಸಚಿವರು ಮಾಹಿತಿ ನೀಡಿದರು.

ತಜ್ಞರ ಸಮಿತಿಯೊಂದನ್ನು ರಚಿಸಬೇಕಿದೆ. ಈ ತಂಡ ತಲಕಾಡಿಗೆ ಭೇಟಿ ನೀಡಿ ವರದಿ ಕೊಡಲಿ. ಅವರ ವರದಿ ಆಧಾರದ ಮೇಲೆ ಆಚರಣೆ ಮಾಡೋಣ. ಜೊತೆಗೆ ಚಳಿಗಾಲ ಬರುತ್ತಿರುವುದರಿಂದ ಹೆಚ್ಚಿನ ನಿಗಾ ವಹಿಸುವುದು ಒಳ್ಳೆಯದು ಎಂದು ಸಚಿವರು ತಿಳಿಸಿದರು.

ತಲಕಾಡಿನಲ್ಲಿ ಅಭಿವೃದ್ಧಿ ಕಾರ್ಯಗಳೂ ಆಗಬೇಕು. ಡಿಸೆಂಬರ್ 14ರಿಂದ ಪಂಚಲಿಂಗ ದರ್ಶನ ಮಹೋತ್ಸವ ಆರಂಭವಾಗುತ್ತಿರುವುದರಿಂದ ಎಲ್ಲವನ್ನೂ ಒಮ್ಮೆಲೆ ಮಾಡಲು ಸಾಧ್ಯವಾಗುವುದಿಲ್ಲ. ತುರ್ತು ಕೆಲಸಗಳನ್ನು ಈಗ ಮಾಡಿಕೊಳ್ಳಿ. ಹಂತಹಂತವಾಗಿ ಶಾಶ್ವತ ಅಭಿವೃದ್ಧಿ ಕಾರ್ಯಗಳನ್ನು ಮಾಡೋಣ ಎಂದು ಸೋಮಶೇಖರ್ ಅಧಿಕಾರಿಗಳಿಗೆ ತಿಳಿಸಿದರು.

ತಜ್ಞರ ತಂಡದ ವರದಿ ಬಳಿಕ ತೀರ್ಮಾನ: ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ 5-6 ಮಂದಿಯ ತಂಡ ರಚಿಸಲಾಗುವುದು. ಈ ತಂಡ ತಲಕಾಡಿಗೆ ಭೇಟಿ ನೀಡಿ ವರದಿ ಸಿದ್ಧಪಡಿಸಲಿದೆ. ಇನ್ನು ತಜ್ಞರ ತಂಡ ನೀಡುವ ವರದಿ ಆಧಾರದಲ್ಲಿ ಎಷ್ಟು ಜನ ಇರಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ತಿಳಿಸಿದರು.

Advertisement

ಇದನ್ನೂ ಓದಿ:ನಕಲಿ ವೈದ್ಯರಿಂದ ನಡೆಸುತ್ತಿದ್ದ ಡೆಂಟಲ್ ಕ್ಲಿನಿಕ್ ! ಡೆಂಟಲ್ ಗೆ ಬೀಗ ಜಡಿದ ಅಧಿಕಾರಿಗಳು

ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ

ಪಂಚಲಿಂಗದರ್ಶನ ಮಹೋತ್ಸವಕ್ಕೆ ಬೇಕಾದ ತಯಾರಿಗಳು ನಡೆಯಲಿ. ಸುಣ್ಣ ಬಣ್ಣ, ದೀಪಾಲಂಕಾರ, ರಸ್ತೆ, ಚರಂಡಿ ವ್ಯವಸ್ಥೆಗಳು ಸೇರಿದಂತೆ ಪ್ರತಿ ಬಾರಿ ನಡೆಯುವ ಕಾರ್ಯಕ್ರಮದಂತೆ ನಡೆಸುವ ಕಾಮಗಾರಿಗಳಿಗೆ ಎಷ್ಟು ಖರ್ಚು ಬೇಕಾಗುತ್ತದೆ ಎಂದು ಅಂದಾಜು ವೆಚ್ಚವನ್ನು ಪಟ್ಟಿ ಮಾಡಿ ಜಿಲ್ಲಾಡಳಿತ ಮುಖಾಂತರ ಪ್ರಸ್ತಾವನೆ ಸಲ್ಲಿಸಿ, ಸರ್ಕಾರದ ನಿರ್ಧಾರದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳೋಣ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಜ್ಞರ ತಂಡ ಪರಿಶೀಲಿಸಲಿ

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾತನಾಡಿ, ಪಂಚಲಿಂಗ ದರ್ಶನವನ್ನು ದಸರಾ ಮಾದರಿಯಲ್ಲಿ ವರ್ಚುವಲ್ ಆಗಿ ಆಚರಿಸುವುದು ಒಳ್ಳೆಯದು. ಎಲ್ಲರೂ ಮನೆಯಲ್ಲಿಯೇ ಕುಳಿತು ಕಾರ್ಯಕ್ರಮ ವೀಕ್ಷಣೆ ಮಾಡಲಿ. ಅಲ್ಲದೆ, ತಜ್ಞರ ತಂಡವನ್ನು ಕರೆಸಿ ವರದಿ ಪಡೆದರೆ, ಅವರ ಸೂಚನೆಯಂತೆ ಆಚರಣೆ ಮಾಡುವುದು ಒಳ್ಳೆಯದು ಎಂದು ತಿಳಿಸಿದರು.

ಸಭೆಯ ಅಭಿಪ್ರಾಯಗಳು

ತಲಕಾಡು ಪ್ರಸಿದ್ಧವಾದ ಸ್ಥಳವಾಗಿದ್ದು, ಪ್ರತಿ ಬಾರಿ ಕಾರ್ತಿಕ ಮಾಸ, ವೃಶ್ಚಿಕ ಅಮವಾಸ್ಯೆ, ಸೋಮವಾರ ಕುಹಯೋಗ, ವಿಶಾಖ ನಕ್ಷತ್ರದ ಶುಭ ಲಗ್ನದಲ್ಲಿ ನಡೆಯುವ ಪಂಚಲಿಂಗ ದರ್ಶನ ಮಹೋತ್ಸವಕ್ಕೆ ಲಕ್ಷಾಂತರ ಮಂದಿ ಸೇರುತ್ತಾರೆ. ಈ ಬಾರಿ ಕೋವಿಡ್ ಇರುವುದರಿಂದ ಸರಳವಾಗಿ ಆಚರಿಸುವುದು ಒಳ್ಳೆಯದು ಎಂಬ ಅಭಿಪ್ರಾಯಗಳು ವ್ಯಕ್ತವಾದವು.

ತಲಕಾಡು ಕ್ಷೇತ್ರದ ಶ್ರೀವೈದ್ಯೇಶ್ವರ, ಶ್ರೀ ಪಾತಾಳೇಶ್ವರ, ಶ್ರೀ ಮರುಳೇಶ್ವರ, ಶ್ರೀ ಅರ್ಕೇಶ್ವರ ಮತ್ತು ಶ್ರೀ ಮುಡುಕುತೊರೆ ಮಲ್ಲಿಕಾರ್ಜುನೇಶ್ವರದ ಐದು ದೇವಸ್ಥಾನಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಇವುಗಳಿಗೆ ಶಾಶ್ವತ ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂದು ಸಭೆಯಲ್ಲಿ ಮನವಿಗಳು ವ್ಯಕ್ತವಾದವು.

ಕಳೆದ ಬಾರಿ 2013ರಲ್ಲಿ ಪಂಚಲಿಂಗ ದರ್ಶನ ಮಹೋತ್ಸವಕ್ಕೆ 12 ಕೋಟಿ ರೂ.ಅನುದಾನ ಮಂಜೂರಾಗಿತ್ತು. ಅದರಲ್ಲಿ 6,78,01,740 ರೂ. ಖರ್ಚಾಗಿದ್ದು, ಇದರಲ್ಲಿ 5,58,00,000 ರೂಪಾಯಿ ಉಳಿಕೆಯಾಗಿತ್ತು. ಇದನ್ನು ಸಮೂಹ ದೇವಸ್ಥಾನಗಳಲ್ಲೊಂದಾದ ಮುಡುಕುತೊರೆ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯದಲ್ಲಿ ಶಾಶ್ವತ ಕಾಮಗಾರಿಗಳಿಗೆ ಉಪಯೋಗಿಸಿಕೊಳ್ಳಲು ಸರ್ಕಾರದಿಂದ ಅನುಮತಿ ದೊರೆತಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಅಂದಾಜು ವೆಚ್ಚ ಪಟ್ಟಿ

ವರ್ಚುವಲ್ ವ್ಯವಸ್ಥೆ ಮಾಡಲು 9 ಲಕ್ಷ ರೂಪಾಯಿ, ಧಾರ್ಮಿಕ ಕಾರ್ಯಕ್ರಮಕ್ಕೆ 32 ಲಕ್ಷ ರೂಪಾಯಿಯನ್ನು ಅಂದಾಜು ಮಾಡಲಾಗಿದೆ. ಆದರೆ, ಇದರಲ್ಲಿ ಯಾವುದೇ ದೀಪಾಲಂಕಾರಗಳು ಯಾವುದೂ ಸೇರಿಲ್ಲ ಎಂಬ ಮಾಹಿತಿಯನ್ನು ಸಭೆಗೆ ಅಧಿಕಾರಿಗಳು ನೀಡಿದರು.

ಆರೋಗ್ಯ, ಪೊಲೀಸ್ ಇಲಾಖೆಗಳು ಸೇರಿದಂತೆ ವಿವಿಧ ಇಲಾಖೆಗಳ ಸಿದ್ಧತೆ ಹಾಗೂ ಕಾರ್ಯಕ್ರಮವನ್ನು ನಡೆಸಿದರೆ ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next