Advertisement

ಮಹಾನಗರದಲ್ಲಿ ಮೊಳಗಿದ ಪಾಂಚಜನ್ಯ

12:30 AM Mar 08, 2019 | |

    “ಪಾಂಚಜನ್ಯ’ ಅಪೂರ್ವ ಶಂಖ. ಇದು ಕೃಷ್ಣನ ಕೈಸೇರಿದ ಕಥೆ ಹೆಚ್ಚು ಪ್ರಚಲಿತ ಇಲ್ಲ. ಈ ವಸ್ತುವನ್ನು ಯಕ್ಷಗಾನ ರಂಗಕ್ಕೆ ತಂದ ವರು ಕೀರಿಕ್ಕಾಡು ವಿಷ್ಣುಭಟ್‌ ಮಾಸ್ತರ್‌ರವರು. ಯಕ್ಷದೇಗುಲ 2019ರ ಸನ್ಮಾನ ಕಾರ್ಯಕ್ರಮದ ಅಂಗವಾಗಿ ಬೆಂಗಳೂರು ರಸಿಕರಿಗೆ ಪರಿಚಯಿಸಿ “ಪಾಂಚಜನ್ಯ’ ಮೊಳಗಿಸಿದವರು ಬೆಂಗಳೂರಿನ ಯಕ್ಷ ದೇಗುಲ ತಂಡದವರು. ಪ್ರಸಂಗದ ವಸ್ತು ತೆಳುವಾದರೂ ಕಲಾವಿದರ ಸಾಮರ್ಥ್ಯದಿಂದಾಗಿ ಪ್ರದರ್ಶನ ರಂಗದಲ್ಲಿ ಮಿಂಚುವಂತಾಯಿತು. 

Advertisement

ಗುರು ಸಾಂದೀಪನಿ ಮುನಿಯ ಆಶ್ರಯದಲ್ಲಿ ಶಿಕ್ಷಣ ಮುಗಿಸಿದ ಶ್ರೀ ಕೃಷ್ಣ ಮತ್ತು ಉದ್ದಲರ ಸಂಭಾಷಣೆಯೊಂದಿಗೆ ಪ್ರಸಂಗ ಪ್ರಾರಂಭವಾಗುತ್ತದೆ. ಕೃಷ್ಣನಾಗಿ ಸುಜಯೀಂದ್ರ ಹಂದೆಯವರು ಅಚ್ಚುಕಟ್ಟಾದ ವೇಷ, ಕುಣಿತ ಹಾಗೂ ಆಕರ್ಷಕ ಮಾತುಗಾರಿಕೆ ಪ್ರದರ್ಶನದ ಧನಾತ್ಮಕ ಅಂಶ. ಅವರ ತಂದೆ ಎಚ್‌.ಶ್ರೀಧರ ಹಂದೆಯವರ ಕೃಷ್ಣನ ವೇಷವೆಂದರೆ ನಯನ ಮನೋಹರವಾದುದು. ಸುಜಯೀಂದ್ರ ಹಂದೆ ಅದನ್ನು ಸರಿಗಟ್ಟಿರುವುದೇ ಇಲ್ಲಿನ ವಿಶೇಷ. ಉದ್ಧಲನಾಗಿ ಪಾತ್ರವಹಿಸಿದ ಪ್ರಶಾಂತ ಹೆಗಡೆಯವರ ಹಾಸ್ಯಮಯ ಮಾತುಗಾರಿಕೆ, ಹದವರಿತ ಅಭಿನಯ ಆಕರ್ಷಕವಾಗಿತ್ತು. ಸಮುದ್ರದ ವರ್ಣನೆಯ ಪರಿಕಿಸು ಮಿತ್ರನೆ… ಪದ್ಯದ ಸಂದರ್ಭದಲ್ಲಿ ಕೃಷ್ಣನ ನರ್ತನ, ಅಭಿನಯ, ಗುರುವಿನೊಂದಿಗಿನ ಮಾತಿನಲ್ಲಿನ ವಿನಯಪೂರ್ಣ ನಡವಳಿಕೆ ಹಂದೆಯವರ ಮಾಗಿದ ವ್ಯಕ್ತಿತ್ವವನ್ನು ಬಿಂಬಿಸುತ್ತಿತ್ತು. ಮಗನನ್ನು ಕಳೆದುಕೊಂಡ ಗುರು ಸಾಂದೀಪನಿಯ ಅಳಲು (ನರಸಿಂಹ ತುಂಗ) ಕರುಣಾಮಯವಾಗಿತ್ತು. ರಾಕ್ಷಸ ವೇಷವಾಗಿ ಪ್ರವೇಶಿಸಿದ ಪಂಚಜನನಾಗಿ ತಮ್ಮಣ್ಣ ಗಾಂವ್ಕರ್‌ ಅವರ ವೀರೋಚಿತ ಕುಣಿತ, ಉತ್ತಮ ಪೀಠಿಕೆ, ಯುದ್ಧದ ಕಾಲದ ಹೆಜ್ಜೆಗಾರಿಕೆ, ವಿಶೇಷ ಭಕ್ತಿಯಲ್ಲಿ ತೋಡಿಕೊಂಡ ವಿಚಾರಗಳೆಲ್ಲವೂ ಪ್ರಸಂಗವು ಸುಲಲಿತವಾಗಿ ಸಾಗಲು ಕಾರಣವಾಯಿತು. ಪಂಚಜನನ ಆಸೆ ಈಡೇರಿಸಲು ಅವನ ದೇಹದ ಮೂಳೆಯಿಂದ “ಪಾಂಚಜನ್ಯ’ ಶಂಖವನ್ನು ನಿರ್ಮಿಸಿಕೊಂಡು ಕೃಷ್ಣ ಅದನ್ನು ಕೈಯಲ್ಲಿ ಧರಿಸುತ್ತಾನೆ. ಆತನಿಂದಲೇ ಗುರುತತ್ವ ಮೃತ್ಯುಮಾಲಿನಿಯ ವಶವಿರುವುದು ತಿಳಿದು ಅಲ್ಲಿಗೆ ಕೃಷ್ಣ ಉದ್ಧಲರು ತೆರಳುತ್ತಾರೆ. ಮೃತ್ಯುಮಾಲಿನಿಯ ಒಡ್ಡೋಲಗ, ಪೀಠಿಕೆಯಲ್ಲಿ ಆಕರ್ಷಕವಾಗಿತ್ತು. ಗಣೇಶ ಉಪ್ಪುಂದ ಅವರ ಈ ಪಾತ್ರ ವೃತ್ತಿ ಕಲಾವಿದರ ವೇಷವನ್ನು ನೆನಪಿಸುತ್ತಿತ್ತು. ಪವಡಿಸಿರುವ ಕೃಷ್ಣನನ್ನು ನೋಡಿ ಮೋಹಿಸಿದ ಅಸಿಕೆಯಾಗಿ ಮನೋಜ್‌ ಭಟ್‌ ಅವರ ಲಾಸ್ಯಪೂರ್ಣ ನರ್ತನ, ಹಾವಭಾವಗಳು ಕಣ್‌ಸೆಳೆಯುವಂತಿತ್ತು. ಅಸಿಕೆ, ಕೃಷ್ಣರ ವಿವಾಹ ನಡೆದು ಗುರುಪುತ್ರನನ್ನು ಗುರುವಿಗೆ ಮರಳಿಸಿ “ಗುರುದಕ್ಷಿಣಿಯನ್ನು ನೀಡುವುದರೊಂದಿಗೆ ಪ್ರಸಂಗ ಮುಕ್ತಾಯವಾಗುತ್ತದೆ. 

ಹಿಮ್ಮೇಳದಲ್ಲಿ ಭಾಗವತರಾಗಿ ಲಂಬೋದರ ಹೆಗಡೆಯವರಿದ್ದರು. ಮೃದಂಗ ವಾದನದಲ್ಲಿ ಗಣಪತಿ ಭಟ್‌ ಹಾಗೂ ಮಾಧವ ಮಣೂರು ಸಹಕರಿಸಿದರೆ ಚಂಡೆ ವಾದಕರಾಗಿ ಮುಂಜುನಾಥ ನಾವುಡರು ಪಾಲ್ಗೊಂಡಿದ್ದರು. ಲಂಬೋದರ ಹೆಗಡೆಯವರು ಭಾವಪೂರ್ಣವಾಗಿ ಹಾಡಿದ್ದು ಕೂಡ ವಿಶೇಷವೇ.

 ಡಾ|| ಆನಂದರಾಮ ಉಪಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next