Advertisement

ಜಗದೋನ್ನತಿಗೆ ಪಂಚಾಚಾರ್ಯರ ಕೊಡುಗೆ ಅಪಾರ

06:44 PM Apr 20, 2021 | Team Udayavani |

ಬೀದರ: ಜಗದ ಉನ್ನತಿಗೆ ಜಗದ್ಗುರು ಪಂಚಾಚಾರ್ಯರ ಕೊಡುಗೆ ಅಪಾರವಾಗಿದೆ ಎಂದು ಹುಡಗಿ ಹಿರೇಮಠ ಸಂಸ್ಥಾನದ ವಿರೂಪಾಕ್ಷ ಶಿವಾಚಾರ್ಯರು ಅಭಿಪ್ರಾಯಪಟ್ಟರು. ನಗರದ ಜಿಲ್ಲಾ ರಂಗಮಂದಿರದಲ್ಲಿ ಜಗದ್ಗುರು ಪಂಚಾಚಾರ್ಯ ಜಯಂತಿ ಯುಗಮಾನೋತ್ಸವ ಸೇವಾ ಸಮಿತಿ ಹಾಗೂ ಜಿಲ್ಲಾ ವೀರಶೈವ ಮಹಾಸಭಾ ವತಿಯಿಂದ ಆಯೋಜಿಸಿದ್ದ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಸಾರ್ಥಕ ಬದುಕಿಗಾಗಿ ಪ್ರತಿಯೊಬ್ಬರೂ ಧರ್ಮದ ಮಾರ್ಗದಲ್ಲಿ ನಡೆಯಬೇಕು. ಲಿಂಗ ಪೂಜೆ, ಜಪ, ತಪ, ಧ್ಯಾನ, ಸತ್ಯ, ಅಹಿಂಸಾ ತತ್ವಗಳನ್ನು ಜೀವನದ ಭಾಗವಾಗಿಸಿಕೊಳ್ಳಬೇಕು ಎಂದರು.

Advertisement

ಗುರು-ವಿರಕ್ತರು ಒಂದಾಗಬೇಕು. ರೇಣುಕಾಚಾರ್ಯ, ಬಸವಣ್ಣ ಮೊದಲಾದವರು ಗುರು, ಲಿಂಗ, ಜಂಗಮ ಪರಿಕಲ್ಪನೆಯನ್ನೇ ಒತ್ತಿ ಹೇಳಿದ್ದರು. ಆದರೆ, ಬಸವಣ್ಣನವರ ಅನುಯಾಯಿಗಳೆಂದು ಹೇಳಿಕೊಂಡು ಕೆಲವರು ಸಮಾಜದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಹಿರನಾಗಾಂವದ ಜಯಶಾಂತಲಿಂಗ ಸ್ವಾಮೀಜಿ ಮಾತನಾಡಿ, ಪರಸ್ಪರ ದ್ವೇಷ, ಅಸೂಯೆ ತೊರೆದು ಎಲ್ಲರೂ ಒಗ್ಗೂಡಿದರೆ ಮಾತ್ರ ಐದು ಸಾವಿರ ವರ್ಷಗಳ ಪಂಚಾಚಾರ್ಯ ಧರ್ಮ ಎತ್ತರಕ್ಕೆ ಬೆಳೆಯಲು ಸಾಧ್ಯವಿದೆ ಎಂದು ಹೇಳಿದರು.

ತಡೋಳಾ-ಮೆಹಕರದ ರಾಜೇಶ್ವರ ಶಿವಾಚಾರ್ಯ ಮಾತನಾಡಿ, ರೇಣುಕಾಚಾರ್ಯರು ಪ್ರಾಣತತ್ವ ಅಧಿಧೀನದಲ್ಲಿ ಇರಿಸಿಕೊಂಡ ಮಹಾನ್‌ ಶಕ್ತಿಗಳಾಗಿದ್ದರು. ಅಣಿಮ, ಮಹಿಮ, ಗರಿಮ, ಲಗಿಮ, ಪ್ರಾಪ್ತಿ, ಪ್ರಾಕಾಮ್ಯ, ಈಶದ್ವ ಹಾಗೂ ಸಿದ್ಧಿ ಎನ್ನುವ ಎಂಟು ಯೋಗಗಳನ್ನು ಹೊಂದಿದ್ದರು ಎಂದು ನುಡಿದರು.

ಘನಲಿಂಗ ರುದ್ರಮುನಿ ಶಿವಾಚಾರ್ಯ, ಮುರುಘೇಂದ್ರ ದೇವರು, ವೀರಶೈವ ಮಹಾಸಭಾ ಅಧ್ಯಕ್ಷ ವೈಜಿನಾಥ ಕಮಠಾಣೆ, ಡಾ| ಚನ್ನಬಸಪ್ಪ ಹಾಲಹಳ್ಳಿ, ರಾಮಕೃಷ್ಣ ಸಾಳೆ, ಗುರುನಾಥ ಜ್ಯಾಂತಿಕರ್‌, ರಾಜ್ಯ ಅಭಿವೃದ್ಧಿ ಸಮನ್ವಯ-ಮೇಲುಸ್ತುವಾರಿ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ ಮಾತನಾಡಿದರು. ಲಾಡಗೇರಿಯ ಗಂಗಾಧರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯರು, ರಾಚೊಟೇಶ್ವರ ಶಿವಾಚಾರ್ಯ, ಚಂದ್ರಶೇಖರ ಶಿವಾಚಾರ್ಯ, ಚನ್ನಬಸವ ಸ್ವಾಮೀಜಿ, ಗುರುಪಾದ ಸ್ವಾಮೀಜಿ, ಚನ್ನಮಲ್ಲ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಶಂಕರಲಿಂಗ ಸ್ವಾಮೀಜಿ, ಮುಖಂಡ ಈಶ್ವರಸಿಂಗ್‌ ಠಾಕೂರ್‌ ಉಪಸ್ಥಿತರಿದ್ದರು.

ಅರ್ಚಕರಾದ ಬಸಯ್ಯ ಸ್ವಾಮಿ, ಶಿವಶಂಕರ ಸ್ವಾಮಿ ಹಾಗೂ ತಂಡದವರು ವೈದಿಕ ರಾಷ್ಟ್ರಗೀತೆ ಹಾಗೂ ಕೋವಿಡ್‌ ನಿರ್ಮೂಲನೆಗಾಗಿ ಸಾಮೂಹಿಕ ಮಹಾಮೃತ್ಯುಂಜಯ ಮಂತ್ರ ಪಠಣ ಮಾಡಿಸಿದರು. ಪಂಚಪೀಠಗಳ ಪರಂಪರೆ ಕುರಿತು ಡಾ| ರಾಜಶೇಖರ ಶಿವಾಚಾರ್ಯ ರಚಿಸಿದ “ಸ್ವಯಂ ಪ್ರಭೆ’ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು.

Advertisement

ಪ್ರಮುಖರಾದ ನಿರಂಜನ ಸ್ವಾಮಿ ಜ್ಯಾಂತಿ, ಪ್ರೊ| ಕುಮಾರಸ್ವಾಮಿ, ಗುರುರಾಜ ಸ್ವಾಮಿ ಮೋಳಕೇರಿ, ರವಿ ಸ್ವಾಮಿ, ವರದಯ್ಯ ಸ್ವಾಮಿ ಗಾದಗಿ, ಬಸಯ್ಯ ಸ್ವಾಮಿ ಹೆಡಗಾಪುರ, ಶಿವಕುಮಾರ ಸ್ವಾಮಿ, ಬಸವರಾಜ ಸ್ವಾಮಿ, ಡಾ| ಶರಣಯ್ಯ ಸ್ವಾಮಿ, ಆರ್‌.ಜಿ. ಮಠಪತಿ, ಪ್ರಕಾಶ ಮಠಪತಿ, ಶೇಖರ ಸ್ವಾಮಿ, ತೀರ್ಥಯ್ಯ ಸ್ವಾಮಿ, ಮಹೇಶ ಸ್ವಾಮಿ, ಮಲ್ಲಿಕಾರ್ಜುನ ಸ್ವಾಮಿ, ವೈಜಿನಾಥ ಸ್ವಾಮಿ, ಕಾಶೀನಾಥ ಸ್ವಾಮಿ, ಮಲ್ಲಿಕಾರ್ಜುನ ಸ್ವಾಮಿ ಹಳ್ಳದಕೇರಿ ಇದ್ದರು.
ಕೋವಿಡ್‌ ಕಾರಣ ಫೇಸ್‌ಬುಕ್‌, ಯುಟ್ಯೂಬ್‌, ಸ್ಥಳೀಯ ಸುದ್ದಿ ವಾಹಿನಿಗಳಲ್ಲಿ ಕಾರ್ಯಕ್ರಮದ ನೇರ ಪ್ರಸಾರ ವ್ಯವಸ್ಥೆ ಮಾಡಲಾಗಿತ್ತು.

ಬರುವ ವರ್ಷದಿಂದ ಸರ್ಕಾರದ ವತಿಯಿಂದಲೇ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಆಚರಿಸಬೇಕು. ಯಾವುದಾದರೊಂದು ವಿಶ್ವವಿದ್ಯಾಲಯದಲ್ಲಿ ಸಿದ್ಧಾಂತ ಶಿಖಾಮಣಿ ಅಧ್ಯಯನ ಪೀಠ ಸ್ಥಾಪಿಸಬೇಕು.
ಡಾ| ರಾಜಶೇಖರ ಶಿವಾಚಾರ್ಯರು,
ನೌಬಾದ್‌ ಜ್ಞಾನ ಶಿವಯೋಗಾಶ್ರಮ

Advertisement

Udayavani is now on Telegram. Click here to join our channel and stay updated with the latest news.

Next