Advertisement

ಪಂಚಾಚಾರ್ಯರಿಗೆ ಸಕಲರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಕೀರ್ತಿ

11:47 AM Apr 04, 2022 | Team Udayavani |

ಹುಬ್ಬಳ್ಳಿ: ಸಾತ್ವಿಕ ಮತ್ತು ತಾತ್ವಿಕ ಬೋಧನೆಗಳ ಮೂಲಕ ಭಾವೈಕ್ಯತೆ ಬೋಧಿಸಿದ, ಸಕಲರ ಶ್ರೇಯೋಭಿವೃದ್ಧಿಗೆ ಸದಾ ಶ್ರಮಿಸಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರಿಗೆ ಸಲ್ಲುತ್ತದೆ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದ ಜಗದ್ಗುರು ಡಾ| ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯರು ಹೇಳಿದರು.

Advertisement

ತಡಸ ಕ್ರಾಸ್‌ ಬಳಿಯ ಶ್ರೀ ಜಗದ್ಗುರು ರೇಣುಕ ಧರ್ಮ ನಿವಾಸದಲ್ಲಿ ಶನಿವಾರ ನಡೆದ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ರಥೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಯುಗಾದಿ ಹೊಸ ವರ್ಷದಂದು ಪ್ರತಿವರ್ಷ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವವನ್ನು ಆಚರಿಸಿಕೊಂಡು ಬರುತ್ತಿರುವ ಸತ್ಪರಂಪರೆಯಿದೆ. ಯುಗ ಯುಗಗಳ ಚಾರಿತ್ರಿಕ ಇತಿಹಾಸ ಹೊಂದಿದ ಪಂಚಾಚಾರ್ಯರು ಮಾನವ ಜೀವನ ಪರಿಪೂರ್ಣತೆಯೆಡೆಗೆ ಕೊಂಡೊಯ್ಯಲು ಶ್ರಮಿಸಿದರು. ಅಸ್ಪೃಶ್ಯೋದ್ಧಾರ ಮತ್ತು ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ ಮೊಟ್ಟ ಮೊದಲಿಗೆ ಕಲ್ಪಿಸಿಕೊಟ್ಟ ಶ್ರೇಯಸ್ಸು ಅವರದು ಎಂದರು.

ಮುಕ್ತಿಮಂದಿರ ಕ್ಷೇತ್ರದ ಪಟ್ಟಾಧ್ಯಕ್ಷ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು ಸಮಾರಂಭ ಉದ್ಘಾಟಿಸಿ ಮತನಾಡಿ, ಯುಗಾದಿ ಹೊಸ ವರುಷದಲ್ಲಿ ಸೃಷ್ಟಿ ಹೊಸ ಚೈತನ್ಯ ಪಡೆಯುವಂತೆ ಮನುಷ್ಯನ ಜೀವನದಲ್ಲೂ ಸಹ ಹೊಸ ಉಲ್ಲಾಸ, ನೆಮ್ಮದಿ ಪಡೆಯಲು ಶ್ರಮಿಸಬೇಕಾಗಿದೆ. ಸಮರ ಜೀವನ ಅಮರ ಜೀವನದೆಡೆಗೆ ಕೊಂಡೊಯ್ಯಲು ಪಂಚಾಚಾರ್ಯರು ಕೊಟ್ಟ ಧರ್ಮ ಸಿದ್ಧಾಂತ ಸಕಲರ ಬಾಳಿನಲ್ಲಿ ಬೆಳಕು ಮತ್ತು ಬಲ ತಂದುಕೊಡುತ್ತದೆ ಎಂದು ಹೇಳಿದರು.

ಸುಳ್ಳದ ಶಿವಸಿದ್ಧರಾಮೇಶ್ವರ ಶ್ರೀಗಳು, ಸೂಡಿ ಜುಕ್ತಿಹಿರೇಮಠದ ಡಾ| ಕೊಟ್ಟೂರು ಬಸವೇಶ್ವರ ಶ್ರೀಗಳು, ಮಳಲಿ ಸಂಸ್ಥಾನ ಮಠದ ಡಾ| ನಾಗಭೂಷಣ ಶ್ರೀಗಳು ವೀರಶೈವ ಧರ್ಮ, ಗುರು ಪರಂಪರೆಯ ಮಹತ್ವ, ಯುಗಾದಿ ಹೊಸ ವರುಷದ ಆಚರಣೆಯ ಮಹತ್ವ ತಿಳಿಸಿದರು.

Advertisement

ಮಾಜಿ ಶಾಸಕ ಎಸ್‌.ಐ. ಚಿಕ್ಕನಗೌಡ್ರ, ಎಂ.ಆರ್‌. ಪಾಟೀಲ, ಶಂಕರಗೌಡ ಸಿದ್ಧನಗೌಡರು, ಈಶ್ವರಯ್ಯ ನಾವಳ್ಳಿಮಠ, ಪ್ರಕಾಶ ಬೆಂಡಿಗೇರಿ, ವಿಶ್ವನಾಥ ಹಿರೇಗೌಡರ, ಜಗದೀಶ ಹಿರೇಮಠ, ಶಿವನಗೌಡ ಪಾಟೀಲ, ಪಿ.ಎಸ್‌. ಹಿರೇಮಠ, ಗುರುಸಿದ್ಧಯ್ಯ ಹಿರೇಮಠ, ಮಹೇಶ ಹಿರೇಮಠ ಮೊದಲಾದವರಿದ್ದರು.

ಸಮಾರಂಭಕ್ಕೂ ಮುನ್ನ ಶ್ರೀ ಜಗದ್ಗುರು ರೇಣುಕಾಚಾರ್ಯ ಭವ್ಯ ರಥೋತ್ಸವ ಸುರಶೆಟ್ಟಿಕೊಪ್ಪದ ಜಗ್ಗಲಗಿ ಮೇಳ, ಜಾನಪದ ತಂಡದವರ ವೀರಗಾಸೆ, ಭಜನಾ ಮಂಡಳಿಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next