Advertisement

ಆ್ಯಪ್‌ನಲ್ಲೇ ಪ್ಯಾನ್‌ಕಾರ್ಡ್‌, ಆಧಾರ್‌ ಜೋಡಣೆಯಿಂದ ನಿಮಿಷದಲ್ಲೇ ಲಭ್ಯ

03:45 AM Feb 16, 2017 | Harsha Rao |

ನವದೆಹಲಿ: ಪರ್ಮನೆಂಟ್‌ ಅಕೌಂಟ್‌ ನಂಬರ್‌, ಸರಳವಾಗಿ ಹೇಳುವುದಾದರೆ ಪ್ಯಾನ್‌ ಕಾರ್ಡನ್ನು ಸುಲಭವಾಗಿ ಪಡೆದುಕೊಳ್ಳುವುದು ಹೇಗಪ್ಪಾ ಎಂಬ ಚಿಂತೆಯಲ್ಲಿ ಕೊರಗುತ್ತಿದ್ದೀರಾ? ನಿಮ್ಮ ಚಿಂತೆ ನಿವಾರಣೆ ಮಾಡಲು ಕೇಂದ್ರಸರ್ಕಾರ ದಿಟ್ಟ ಹೆಜ್ಜೆಯಿಟ್ಟಿದೆ. ಇನ್ನು ನಿಮ್ಮ ಸ್ಮಾರ್ಟ್‌ಫೋನ್‌ ಬಳಸಿ ಪ್ಯಾನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು,
ಕೆಲವೇ ನಿಮಿಷದಲ್ಲಿ ಪ್ಯಾನ್‌ ಸಂಖ್ಯೆಯನ್ನೂ ಪಡೆಯಬಹುದು! ಕೇಂದ್ರ ವಿತ್ತ ಸಚಿವಾಲಯ ಮೊಬೈಲ್‌ ಆ್ಯಪೊಂದನ್ನು ಸಿದ್ಧಪಡಿಸುತ್ತಿದೆ. ಇದನ್ನು ಡೌನ್‌ಲೋಡ್‌ ಮಾಡಿಕೊಂಡರೆ ಸಾಕು ಹಲವು ಕೆಲಸಗಳು ಸುಲಭವಾಗಲಿದೆ.

Advertisement

ಈ ಆ್ಯಪ್‌ ಮೂಲಕ ನೀವು ನೇರವಾಗಿ ತೆರಿಗೆ ಪಾವತಿ ಮಾಡಬಹುದು, ತಕ್ಷಣವೇ ಪ್ಯಾನ್‌ ಸಂಖ್ಯೆ ಬೇಕೆಂದರೆ ಅದನ್ನೂ ಪಡೆಯಬಹುದು ಅಥವಾ ಪ್ಯಾನ್‌ ಕಾರ್ಡ್‌ಗೆ ಅರ್ಜಿಯನ್ನು ಗುಜರಾಯಿಸಬಹುದು. ಆದರೆ ಈ ಆ್ಯಪ್‌ ಸಿದ್ಧತೆ
ಹಂತದಲ್ಲಿರುವುದರಿಂದ ಗ್ರಾಹಕರು ಸ್ವಲ್ಪ ಸಮಯ ಕಾಯಬೇಕಾಗುತ್ತದೆ.

ಹೇಗೆ ಸಾಧ್ಯ?: ಬರಲಿರುವ ಹೊಸ ಆ್ಯಪ್‌ಗೆ ಆಧಾರ್‌ ಸಂಖ್ಯೆ ಆಧಾರಿತ ಇ-ಕೆವೈಸಿ ಸೌಲಭ್ಯವನ್ನು ಜೋಡಿಸಲಾಗಿದೆ. ಇ-ಕೆವೈಸಿಯಲ್ಲಿ ನೀವು ಆಧಾರ್‌ಗೆ ನೀಡಿರುವ ಜನ್ಮದಿನ, ವಿಳಾಸ, ಬೆರಳಚ್ಚು ಮಾಹಿತಿಗಳು ಲಭ್ಯವಿರುತ್ತದೆ.  ನೂತನ ಆ್ಯಪ್‌ ಬಳಸಿ ಪಾನ್‌ ಸಂಖ್ಯೆ ಪಡೆಯಲು ಯತ್ನಿಸುವಾಗ ನಿಮ್ಮ ವಿಳಾಸ, ಜನ್ಮದಿನ ಇವನ್ನು ಇ-ಕೆವೈಸಿ ಮೂಲಕ ಖಚಿತಪಡಿಸಬಹುದು. ಜೊತೆಗೆ ನಿಮ್ಮ ಬೆರಳಚ್ಚನ್ನು ನೀಡಬಹುದು. ಆಧಾರ್‌ನಲ್ಲಿ ನಿಮ್ಮ ಬೆರಳಚ್ಚು ಇರುವುದರಿಂದ ಕೂಡಲೇ ಆ್ಯಪ್‌ ಅದನ್ನು ಒಪ್ಪಿಕೊಳ್ಳುತ್ತದೆ.

ಏಕೆ ಈ ಕ್ರಮ?: ಇತ್ತೀಚೆಗೆ ಕೇಂದ್ರ ಸರ್ಕಾರ ನೋಟು ಅಪನಗದೀಕರಣ ಮಾಡಿದ ನಂತರ 50,000 ರೂ.ಗಿಂತ ಹೆಚ್ಚಿನ ಹಣ ಹಿಂಪಡೆಯಲು, 2 ಲಕ್ಷ ರೂ.ಗಿಂತ ಜಾಸ್ತಿ ಮೌಲ್ಯದ ಖರೀದಿ ಮಾಡಲು ಪಾನ್‌ಕಾರ್ಡ್‌ ಸಂಖ್ಯೆ ಬೇಕೇ ಬೇಕು ಎಂದು ನಿಗದಿ ಮಾಡಿದೆ. ಆದ್ದರಿಂದ ಪಾನ್‌ ಸಂಖ್ಯೆಗೆ ಬೇಡಿಕೆ ಹೆಚ್ಚಿದೆ. ಇದಕ್ಕೆ ಸ್ಪಂದಿಸಲು ಕೇಂದ್ರ ಈ ಕ್ರಮಕ್ಕೆ ಮುಂದಾಗಿದೆ. ವಿಶೇಷವೆಂದರೆ ದೇಶದಲ್ಲಿ 111 ಕೋಟಿ ಮಂದಿ ಆಧಾರ್‌ ಕಾರ್ಡ್‌ ಹೊಂದಿದ್ದಾರೆ.

ಆದರೆ ಪಾನ್‌ ಸಂಖ್ಯೆ ಹೊಂದಿರುವವರು 25 ಕೋಟಿ ಮಂದಿ ಮಾತ್ರ. ಈ ಆ್ಯಪ್‌ ಮೂಲಕ ಪಾನ್‌ ಪಡೆಯುವುದನ್ನು ಸಲೀಸು ಮಾಡಿದರೆ ತೆರಿಗೆ ಪಾವತಿದಾರರು ಸುಲಭವಾಗಿ ಪಾನ್‌ ಪಡೆಯುತ್ತಾರೆ, ಜೊತೆಗೆ ತೆರಿಗೆ ವ್ಯಾಪ್ತಿಗೆ ಬರುತ್ತಾರೆ ಎನ್ನುವುದು ಲೆಕ್ಕಾಚಾರ.

Advertisement
Advertisement

Udayavani is now on Telegram. Click here to join our channel and stay updated with the latest news.

Next