ಮಂಗಳೂರು: ಚಿನ್ನಾಭರಣಗಳೊಂದಿಗೆ ಮನೆಯಲ್ಲಿದ್ದ 25,000 ರೂ. ನಗದು ಹಾಗೂ ಸ್ವಸಹಾಯ ಸಂಘದ ಹಣದೊಂದಿಗೆ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗ್ರೆ ಕಸಬ ನಿವಾಸಿ ಫರೂದಿ ಮೊಯಿದ್ದಿನ್ ಅವರ ಪತ್ನಿ ಉಮ್ಮಿ ಸಲಾ ¾(28) ನಾಪತ್ತೆಯಾದಾಕೆ.
ಘಟನೆಯ ವಿವರ ಫರೂದಿ ಅವರು ಜು.7ರಂದು ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ತೆರಳಿದ್ದರು. ಸಂಜೆ 4 ಗಂಟೆಗೆ ಅವರಿಗೆ ಫೋನ್ ಕರೆ ಮಾಡಿದ ಪತ್ನಿ ಉಮ್ಮಿ ಸಲ್ಮಾ “ನಾನು ಬೆಂಗಳೂರಿಗೆ ಹೋಗುತ್ತಿದ್ದೇನೆ, ನನ್ನನ್ನು ಹುಡುಕಬೇಡಿ’ ಎಂದು ತಿಳಿಸಿದ್ದರು. ಫರೂದಿ ಅವರು ಕೂಡಲೇ ಮನೆಗೆ ಬಂದಾಗ ಮನೆಗೆ ಬೀಗ ಹಾಕಿರುವುದು ಕಂಡು ಬಂದಿತ್ತು. ಆ ಬಳಿಕ ಅವರು ಸಂಬಂಧಿಕರ ಮನೆಗಳಿಗೆ ಕರೆ ಮಾಡಿ ವಿಚಾರಿಸಿದಲ್ಲದೆ, ಬಸ್ ನಿಲ್ದಾಣ, ರೈಲು ನಿಲ್ದಾಣ ಮೊದಲಾದೆಡೆ ಹುಡುಕಾಡಿದ್ದರು. ಎಲ್ಲಿಯೂ ಪತ್ನಿಯ ಬಗ್ಗೆ ಮಾಹಿತಿ ಸಿಗದೆ ಇದ್ದಾಗ ಅವರು ಪಣಂಬೂರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು.
ಜು.9ರಂದು ಬೆಳಗ್ಗೆ ಪತಿಗೆ ಕರೆ ಮಾಡಿದ ಉಮ್ಮಿ ಸಲ್ಮಾ “ನಾನು ಬೆಂಗಳೂರಿನಲ್ಲಿ ಬೇರೆ ಮದುವೆಯಾಗಿರುತ್ತೇನೆ. ನನ್ನನ್ನು ಹುಡುಕಲು ಪ್ರಯತ್ನಿಸಬೇಡ. ನಿನಗೆ ಪ್ರತಿ ತಿಂಗಳು 1000 ರೂ. ಕಳುಹಿಸಿ ಕೊಡುತ್ತೇನೆ’ ಎಂದು ಹೇಳಿ ಮೊಬೈಲ್ ಆಫ್ ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಉಮ್ಮಿ ಸಲ್ಮಾ ಅವರು 7ನೇ ತರಗತಿಯವರೆಗೆ ಓದಿದ್ದಾರೆ. 5 ಅಡಿ ಎತ್ತರವಿದ್ದು, ಬಿಳಿ ಮೈ ಬಣ್ಣ, ಕೋಲು ಮುಖ ಹೊಂದಿದ್ದಾರೆ. ಕುತ್ತಿಗೆಯ ಹಿಂಬದಿಯ ಎಡ ಬದಿಯಲ್ಲಿ ಕೆಂಪು ಬಣ್ಣದ ದಪ್ಪವಾದ ಕಲೆ ಇದೆ. ಕನ್ನಡ, ಹಿಂದಿ, ಇಂಗ್ಲಿಷ್, ಉರ್ದು ಹಾಗೂ ಬ್ಯಾರಿ ಭಾಷೆಯನ್ನು ಮಾತನಾಡುತ್ತಾರೆ. ಆಕೆ ಪತ್ತೆಯಾದಲ್ಲಿ ಪಣಂಬೂರು ಪೊಲೀಸರಿಗೆ ಮಾಹಿತಿ ನೀಡಲು ಕೋರಲಾಗಿದೆ.