Advertisement

ಷರೀಫ್ ಪ್ರಧಾನಿ ಹುದ್ದೆ ಸೇಫ್; ಜಂಟಿ ಸಮಿತಿಯಿಂದ ತನಿಖೆಗೆ ಆದೇಶ

03:45 AM Apr 21, 2017 | |

ಇಸ್ಲಾಮಾಬಾದ್‌: ಭ್ರಷ್ಟಾಚಾರ ಆರೋಪದಿಂದ ಹುದ್ದೆ ಕಳೆದುಕೊಳ್ಳುವ ಭೀತಿಯಲ್ಲಿದ್ದ ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್ ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.

Advertisement

ಅವರನ್ನು ಪ್ರಧಾನಿ ಹುದ್ದೆಯಿಂದ ತೆಗೆದುಹಾಕಲು ಬೇಕಾದಷ್ಟು ಪುರಾವೆಗಳಿಲ್ಲ ಎಂದು ಪಾಕ್‌ ಸುಪ್ರೀಂ ಕೋರ್ಟ್‌ ಗುರುವಾರ ಅಭಿಪ್ರಾಯಪಟ್ಟಿದೆ. ಜತೆಗೆ, ಅವರ ಮತ್ತು ಕುಟುಂಬದ ವಿರುದ್ಧವಿರುವ ಭ್ರಷ್ಟಾಚಾರ ಪ್ರಕರಣದ ತನಿಖೆಗೆ ಜಂಟಿ ತಂಡವನ್ನು ರಚಿಸುವಂತೆಯೂ ಆದೇಶಿಸಿದೆ. ಹೀಗಾಗಿ, ಷರೀಫ್ ಸದ್ಯಕ್ಕೆ ನಿರಾಳರಾಗಿದ್ದಾರೆ.

90ರ ದಶಕದಲ್ಲಿ 2 ಬಾರಿ ಪ್ರಧಾನಿಯಾಗಿದ್ದಂಥ ಸಂದರ್ಭದಲ್ಲಿ ಷರೀಫ್ ಅವರು ಲಂಡನ್‌ನಲ್ಲಿ ಆಸ್ತಿ ಖರೀದಿಸಲು ಹಣಕಾಸು ಅವ್ಯವಹಾರ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಕಳೆದ ವರ್ಷ ಸೋರಿಕೆಯಾದ ಪನಾಮಾ ದಾಖಲೆಗಳಲ್ಲಿ ಈ ಕುರಿತ ಪ್ರಸ್ತಾಪವಿತ್ತು. ಲಂಡನ್‌ನಲ್ಲಿರುವ ಆಸ್ತಿಪಾಸ್ತಿಗಳನ್ನು ಷರೀಫ್ರ ಮಕ್ಕಳ ಹೆಸರಲ್ಲಿರುವ ಸಾಗರೋತ್ತರ ಕಂಪನಿಗಳೇ ನಿರ್ವಹಿಸುತ್ತಿವೆ ಎಂದು ದಾಖಲೆಯಲ್ಲಿ ನಮೂದಾಗಿತ್ತು.

ಸಾಕ್ಷ್ಯಾಧಾರಗಳ ಕೊರತೆ: ಈ ಆರೋಪಗಳಿಗೆ ಸಂಬಂಧಿಸಿ ವಿಚಾರಣೆ ನಡೆಸಿ 540 ಪುಟಗಳ ಐತಿಹಾಸಿಕ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್‌ ನ್ಯಾಯಪೀಠ, “ಗುಪ್ತಚರ ಸಂಸ್ಥೆಯಾದ ಐಎಸ್‌ಐ, ಸೇನಾ ಗುಪ್ತಚರ ದಳ ಸೇರಿದಂತೆ ವಿವಿಧ ಏಜೆನ್ಸಿಗಳ ಅಧಿಕಾರಿಗಳನ್ನು ಒಳಗೊಂಡ ಜಂಟಿ ತನಿಖಾ ಸಮಿತಿಯನ್ನು ವಾರದೊಳಗೆ ರಚಿಸಿ, ಷರೀಫ್ ಭ್ರಷ್ಟಾಚಾರ ಕುರಿತು ತನಿಖೆ ನಡೆಸಬೇಕು. ಷರೀಫ್, ಅವರ ಪುತ್ರರಾದ ಹಸನ್‌ ಮತ್ತು ಹುಸೇನ್‌ ಕೂಡ ಜಂಟಿ ಸಮಿತಿಯ ಮುಂದೆ ಹಾಜರಾಗಬೇಕು. 60 ದಿನಗಳೊಳಗೆ ಸಮಿತಿ ವರದಿ ನೀಡಬೇಕು,’ ಎಂದು ಸೂಚಿಸಿದೆ. ಜತೆಗೆ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಷರೀಫ್ರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ಸಾಧ್ಯವಿಲ್ಲ ಎಂದೂ ಹೇಳಿದೆ. ವರದಿ ಬಂದ ಬಳಿಕವಷ್ಟೇ ಈ ಕುರಿತು ಪರಿಶೀಲಿಸಲಾಗುವುದು ಎಂದಿದೆ.

ಪ್ರಕರಣ ದಾಖಲಿಸಿದವರಾರು?
ಪಾಕಿಸ್ತಾನ-ತೆಹ್ರಿಕ್‌-ಇ-ಇನ್ಸಾಫ್ ಮುಖ್ಯಸ್ಥ ಇಮ್ರಾನ್‌ ಖಾನ್‌, ಜಮಾತ್‌-ಇ-ಇಸ್ಲಾಮಿಯ ಮಿರ್‌ ಸಿರಾಜುಲ್‌ ಹಕ್‌ ಮತ್ತು ಶೇಖ್‌ ರಶೀದ್‌ ಅಹ್ಮದ್‌ ಸೇರಿದಂತೆ ಹಲವರು ಷರೀಫ್ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದರು. ಲಂಡನ್‌ನ ಶ್ರೀಮಂತ ಪಾರ್ಕ್‌ ಲೇನ್‌ನಲ್ಲಿ ನಾಲ್ಕು ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಲಾಗಿದೆ. ಆದರೆ, ಷರೀಫ್ ಅವರು ತಮ್ಮ ಪುತ್ರರ ಹೆಸರಲ್ಲಿ ಮಾಡಿರುವ ಹೂಡಿಕೆಗಳ ಕುರಿತು ಸುಳ್ಳು ಮಾಹಿತಿ ನೀಡಿದ್ದಾರೆ. ಹಾಗಾಗಿ, ಭ್ರಷ್ಟಾಚಾರದಲ್ಲಿ ತೊಡಗಿರುವ ಷರೀಫ್ರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಇವರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.

Advertisement

ಕಳೆದ ವರ್ಷದ ನ.3ಕ್ಕೆ ಆರಂಭವಾದ ವಿಚಾರಣೆಯು ಫೆ.23ಕ್ಕೆ ಸಮಾಪ್ತಿಗೊಂಡಿದೆ. ಈವರೆಗೆ ನ್ಯಾಯಾಲಯ ಒಟ್ಟು 35 ವಿಚಾರಣೆಗಳನ್ನು ನಡೆಸಿದೆ. ಖತಾರ್‌ನ ಕಂಪನಿಯಲ್ಲಿದ್ದ ಷೇರುಗಳನ್ನು ಮಾರಾಟ ಮಾಡಿ ಲಂಡನ್‌ನ ಆಸ್ತಿಯನ್ನು ಖರೀದಿಸಲಾಯಿತು ಎಂದು ಷರೀಫ್ ಹೇಳಿದ್ದರು.

ತೀರ್ಪಿಗೆ ಸ್ವಾಗತ:
ನ್ಯಾಯಾಲಯದ ತೀರ್ಪನ್ನು ಷರೀಫ್ ಬೆಂಬಲಿಗರು ಸ್ವಾಗತಿಸಿದ್ದಾರೆ. ಜತೆಗೆ, ಇದು ನ್ಯಾಯಕ್ಕೆ ಸಂದ ಜಯ ಎಂದು ಬಣ್ಣಿಸಿದ್ದಾರೆ. ತೀರ್ಪು ಹೊರಬೀಳುತ್ತಿದ್ದಂತೆಯೇ ಷರೀಫ್ ಅವರು ತಮ್ಮ ಕಿರಿಯ ಸಹೋದರ ಶಹಬಾಜ್‌ ಷರೀಫ್ರನ್ನು ಆಲಿಂಗಿಸಿದ್ದು ಕಂಡುಬಂತು. ಇನ್ನೊಂದೆಡೆ, ಪ್ರತಿಪಕ್ಷಗಳು, ಷರೀಫ್ ವಿರುದ್ಧ ದೋಷಾರೋಪ ಇರುವುದನ್ನು ಸುಪ್ರೀಂ ಒಪ್ಪಿಕೊಂಡಿದೆ. ಹಾಗಾಗಿ, ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿವೆ. ದೇಶವನ್ನು ಆಳುವ ನೈತಿಕತೆಯನ್ನೇ ಷರೀಫ್ ಕಳೆದುಕೊಂಡಿದ್ದಾರೆ. ಅವರು ಕೂಡಲೇ ರಾಜೀನಾಮೆ ನೀಡಿದರೆ ಸೂಕ್ತ ಎಂದು ತೆಹ್ರೀಕ್‌ ಇ ಇನ್ಸಾಫ್ ಮುಖ್ಯಸ್ಥ ಇಮ್ರಾನ್‌ ಖಾನ್‌ ಆಗ್ರಹಿಸಿದ್ದಾರೆ.

ಆಪ್ತನ ವಜಾ:
ರಾಷ್ಟ್ರೀಯ ಭದ್ರತಾ ಸಮಿತಿಯ ಸಭೆಯ ವಿವರಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ ಆರೋಪದಲ್ಲಿ ಷರೀಫ್ ಅವರ ವಿದೇಶಾಂಗ ವ್ಯವಹಾರಕ್ಕೆ ಸಂಬಂಧಿಸಿದ ವಿಶೇಷ ಸಹಾಯಕ ತಾರಿಕ್‌ ಫ‌ತೇಮಿ ಅವರನ್ನು ವಜಾ ಮಾಡುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಏಪ್ರಿಲ್‌ ಭೂತದಿಂದ ಪಾರು
ಕೊನೆಗೂ ಷರೀಫ್ ಅವರು “ಏಪ್ರಿಲ್‌’ನ ಭೂತದಿಂದ ಪಾರಾಗಿದ್ದಾರೆ. ಏಪ್ರಿಲ್‌ ತಿಂಗಳು ಪಾಕಿಸ್ತಾನದ ಪ್ರಧಾನಿಗಳಿಗೆ ಆಗಿಬರುವುದಿಲ್ಲ. ಇಲ್ಲಿ ಹೆಚ್ಚಿನ ಪ್ರಧಾನಿಗಳು ಹುದ್ದೆ ಕಳೆದುಕೊಂಡಿದ್ದು, ಜೀವಾವಧಿ, ಗಲ್ಲು ಶಿಕ್ಷೆಗೆ ಒಳಗಾಗಿದ್ದು ಇದೇ ಏಪ್ರಿಲ್‌ ತಿಂಗಳಲ್ಲಿ. 1979ರ ಏ.4ರಂದೇ ಮಾಜಿ ಪ್ರಧಾನಿ ಜುಲ್ಫಿಕರ್‌ ಅಲಿಯನ್ನು ಗಲ್ಲಿಗೇರಿಸಲಾಯಿತು. 2012ರ ಏ.26ರಂದು ಅಂದಿನ ಪ್ರಧಾನಿ ಯೂಸುಫ್ ರಜಾ ಗಿಲಾನಿ ಅವರನ್ನು ಕೋರ್ಟ್‌ ಸೂಚನೆಗೆ ಬೆಲೆಕೊಡಲಿಲ್ಲ ಎಂಬ ಕಾರಣಕ್ಕೆ ಶಿಕ್ಷಿಸಲಾಯಿತು. ಆದರೆ, ಷರೀಫ್ ಮಾತ್ರ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ.

ಸುಪ್ರೀಂ ನೀಡಿರುವ ತೀರ್ಪು ಪ್ರಜಾಪ್ರಭುತ್ವಕ್ಕಷ್ಟೇ ಅಲ್ಲ, ನ್ಯಾಯಕ್ಕೂ ಹಾನಿ ಉಂಟು ಮಾಡಿದೆ. ಈ ತೀರ್ಪನ್ನು ನಾನು ಖಂಡಿಸುತ್ತೇನೆ ಮತ್ತು ಷರೀಫ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸುತ್ತೇನೆ.
– ಆಸಿಫ್ ಅಲಿ ಜರ್ದಾರಿ, ಪಾಕ್‌ ಮಾಜಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next