ಇಸ್ಲಮಬಾದ್: ಮಹತ್ವದ ವಿದ್ಯಮಾನವೊಂದರಲ್ಲಿ ಪನಾಮಾ ಪೇಪರ್ಸ್ ಪ್ರಕರಣದಲ್ಲಿ
ಪಾಕಿಸ್ಥಾನ ಪ್ರಧಾನಿ ನವಾಜ್ ಷರೀಫ್ ದೋಷಿ ಎಂದು ಸಾಬೀತಾಗಿದೆ. ಪ್ರಕರಣದ ತೀರ್ಪು ನೀಡಿದ ಪಾಕ್ ಸುಪ್ರೀಂ ಕೋರ್ಟ್ ಷರೀಫ್ ಅವರನ್ನು ಉನ್ನತ ಹುದ್ದೆಯಿಂದ ವಜಾಗೊಳಿಸಿದೆ.
ಪನಾಮ ಪೇಪರ್ ಪ್ರಕರಣದಲ್ಲಿ ಷರೀಫ್ ಅಪರಾಧಿ ಎಂದು ಸಾಬೀತಾಗಿದ್ದು, ಪ್ರಧಾನಮಂತ್ರಿ ಹುದ್ದೆಯಲ್ಲಿ ಮುಂದುವರಿಯಲು ಅವರು ಅರ್ಹರಲ್ಲ ಎಂದು ಅನರ್ಹಗೊಳಿಸಿದೆ. ಷರೀಫ್ ಮತ್ತು ಕುಟುಂಬದ ಸದಸ್ಯರ ವಿರುದ್ಧ 6 ವಾರಗಳ ಒಳಗೆ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಎಂದು ನ್ಯಾಷನಲ್ ಅಕೌಂಟೇಬಿಲಿಟಿ ಬೋರ್ಡ್‌ಗೆ ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶ ನೀಡಿದೆ.
ಬೆನಾಮಿ ಹೆಸರಿನಲ್ಲಿ ಲಂಡನ್‌ಲ್ಲಿ ಭಾರೀ ಅಕ್ರಮ ಆಸ್ತಿ ಸಂಪಾದಿಸಿದ ಆರೋಪ ಷರೀಫ್ ಮೇಲೆ ಇತ್ತು. ಪ್ರಕರಣದ ತೀರ್ಪು ಬಂದಿರುವ ಹಿನ್ನಲೆಯಲ್ಲಿ ಷರೀಫ್ ಯಾವುದೇ ಕ್ಷಣದಲ್ಲಿ ಜೈಲು ಪಾಲಾಗುವ ಸಾಧ್ಯತೆಗಳಿವೆ. ಇನ್ನೊಂದೆಡೆ ಪಾಕ್‌ನಲ್ಲಿ ಮಿಲಿಟರಿ ಆಡಳಿತ ಬರುವ ಸಾಧ್ಯತೆಗಳಿವೆ ಎನ್ನಲಾಗಿದೆ.
ತೀರ್ಪಿನ ಹಿನ್ನಲೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ಭಾರೀ ಸಂಖ್ಯೆಯ ಸೇನಾಪಡೆಗಳನ್ನು ನಿಯೋಜಿಸಲಾಗಿತ್ತು. ಕೋರ್ಟ್‌ನ ಒಳಗೂ ಶಸ್ತ್ರ ಸಜ್ಜಿತ ಪಡೆಗಳನ್ನು ನಿಯೋಜಿಸಲಾಗಿತ್ತು. ಸುಮಾರು 3 ಸಾವಿರಕ್ಕೂ ಹೆಚ್ಚು ಪೊಲೀಸರು , ಕಮಾಂಡೋಗಳು ಮತ್ತು ಪ್ಯಾರಾಮಿಲಿಟರಿ ಪಡೆಗಳು ಕೋರ್ಟ್ ಆವರಣದಲ್ಲಿ ನಿಯೋಜಿಸಲ್ಪಟ್ಟಿದ್ದರು.