ಪಣಜಿ: ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಹವಾಮಾನ ಇಲಾಖೆ ಇನ್ನೂ ಎರಡು ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಿಸಿದೆ. ಗೋವಾ ರಾಜ್ಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರಾಜ್ಯದ ಅಣೆಕಟ್ಟುಗಳು ತುಂಬಿ ಹರಿಯಲಾರಂಭಿಸಿವೆ. ಪ್ರವಾಸಿ ಆಕರ್ಷಣೆಯಾಗಿರುವ ಸಾಳಾವಳಿ ಅಣೆಕಟ್ಟು ಕೂಡ ಗುರುವಾರ ಬೆಳಗ್ಗೆಯಿಂದ ತುಂಬಿ ಹರಿಯುತ್ತಿದೆ.
ಈ ವರ್ಷ ಮಳೆ ತಡವಾಗಿ ಆರಂಭಗೊಂಡಿದ್ದರಿಂದ ಹಲವಾರು ಅಣೆಕಟ್ಟುಗಳಲ್ಲಿ ನೀರು ಸಂಗ್ರಹವಾಗುವ ಸಾಧ್ಯತೆಯ ಕುರಿತು ಗಂಭೀರ ಪ್ರಶ್ನೆ ಎದುರಾಗಿತ್ತು. ಆದರೆ, ಕಳೆದ ಕೆಲ ದಿನಗಳಿಂದ ಗೋವಾ ರಾಜ್ಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ದಿಢೀರ್ ಹೆಚ್ಚಾಗಿ ಸಾಳಾವಲಿ ಅಣೆಕಟ್ಟು ಭರ್ತಿಯಾಗಿದೆ. ರಾಜ್ಯದ ಇತರ ಆಣೆಕಟ್ಟುಗಳ ನೀರಿನ ಮಟ್ಟ ಕೂಡ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ರಾಜ್ಯ ಜಲಸಂಪನ್ಮೂಲ ಇಲಾಖೆಯ ಸಹಾಯಕ ಇಂಜಿನಿಯರ್, ಸಿಡ್ನಿ ಫೆರ್ನಾಂಡಿಸ್ ಈ ಕುರಿತು ಮಾಹಿತಿ ನೀಡಿ, ಇಂದು (ಜುಲೈ 20) ಬೆಳಿಗ್ಗೆ 8.12 ರಿಂದ ಸಾಳಾವಲಿ ಅಣೆಕಟ್ಟು ತುಂಬಿ ಹರಿಯಲಾರಂಭಿಸಿತು. ಹೀಗಾಗಿ ನೀರಾವರಿ ಸಮಸ್ಯೆ ಬಗೆಹರಿದಿದೆ. ಕಳೆದ ವರ್ಷ ಜುಲೈ 8 ರಂದು ಅಣೆಕಟ್ಟು ತುಂಬಿ ಹರಿದಿತ್ತು ಎಂದರು.
ಮುಂದುವೆರದು ಮಾತನಾಡಿ, ಕಳೆದ ವರ್ಷ 1,599 ಮಿ.ಮೀ ಮಳೆಯ ನಂತರ ಅಣೆಕಟ್ಟು ತುಂಬಿ ಹರಿದಿತ್ತು. ಆದರೆ, ಈ ವರ್ಷ ತಡವಾಗಿ ಸುರಿದ ಮಳೆಯಿಂದಾಗಿ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಆದ್ದರಿಂದ ಈ ವರ್ಷ 2,170 ಮಿ.ಮೀ ಮಳೆಯಾದ ನಂತರ ಸಾಲಾವಳಿ ಅಣೆಕಟ್ಟು ತುಂಬಿ ಹರಿದಿದೆ ಎಂದು ಹೇಳಿದರು.
ಸಾಳಾವಲಿ ಅಣೆಕಟ್ಟು ಪ್ರವಾಸಿಗರಿಗೆ ಮುಕ್ತವಾಗಿದ್ದು, ಆಗಸ್ಟ್ ನಲ್ಲಿ ‘ಆಜಾದಿ ಕಾ ಅಮೃತ್ ಮಹೋತ್ಸವ’ದಡಿ ಇಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಪ್ರವಾಸಿಗರು ಉತ್ಸಾಹದಿಂದ ಗೋವಾಕ್ಕೆ ಬರುತ್ತಾರೆ. ಆದರೆ ಅದೇ ಸಮಯದಲ್ಲಿ, ಅವರ ಬಗ್ಗೆ ಕಾಳಜಿ ವಹಿಸುವುದು ಅಷ್ಟೇ ಮುಖ್ಯ. ಆದ್ದರಿಂದ ಪ್ರವಾಸಿಗರು ಭದ್ರತಾ ಸಿಬ್ಬಂದಿ, ಜಲಸಂಪನ್ಮೂಲ ಇಲಾಖೆ ಹಾಗೂ ಸರ್ಕಾರ ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅಣೆಕಟ್ಟು ಆವರಣದಲ್ಲಿ ಯಾವುದೇ ರೀತಿಯ ಅಶುಚಿತ್ವ ಮಾಡದಂತೆ ಅಧಿಕಾರಿಗಳು ಮನವಿ ಮಾಡಿದರು.