ಪಣಜಿ: ಮಹಿಳೆಯರಿಗೆ ಸಮಾಜ ನೀಡಿರುವ ಸ್ಥಾನ ಹಾಗೂ ಗೌರವವನ್ನು ನಾವು ಉಳಿಸಿಕೊಂಡು ಹೋಗಬೇಕು. ಹಿಂದಿನಿಂದಲೂ ಮಹಿಳೆಯರಿಂದ ಜ್ಯೋತಿ ಬೆಳಗಿಸುವ ಪದ್ದತಿಯಿದೆ. ಅಂದರೆ ಒಂದು ಮನೆಯನ್ನು ಬೆಳಗುವವಳು ಮಹಿಳೆಯೇ ಆಗಿದ್ದಾರೆ ಎಂದು ವಿಜಯಪುರ ಜಿ.ಪಂ ಮಾಜಿ ಅಧ್ಯಕ್ಷೆ ನೀಲಮ್ಮ ಮೇಟಿ ಹೇಳಿದರು.
ಮಹಿಳೆಯು ಸಹನಾ ಮೂರ್ತಿ. ಮಹಿಳೆಯು ಒಂದು ಶಕ್ತಿ ಹಾಗೂ ಒಂದು ಭಕ್ತಿ. ಭೂ ಮಾತೆಯು ಎಂದು ಕೂಡ ತನಗೆ ಭಾರ ಎಂದು ಹೇಳಿಲ್ಲ. ಅಂತೆಯೇ ಗಂಗಾ ಮಾತೆಯು ಕೂಡ ಎಂದೂ ಕೂಡ ಬೇಸರ ಮಾಡಿಕೊಂಡಿಲ್ಲ. ಹೆಣ್ಣು ತಾಯಿಯಾಗಿ, ಅಕ್ಕ-ತಂಗಿಯಾಗಿ, ತನ್ನ ಸ್ಥಾನವನ್ನು ನಿಭಾಯಿಸಿಕೊಂಡು ಹೋಗುತ್ತಾಳೆ ಎಂದು ಹೇಳಿದರು.
ಗೋವಾ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು, ಪಣಜಿ ತಾಲೂಕು ಘಟಕ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಪಣಜಿಯ ಮೆನೆಜಿಸ್ ಬ್ರಾಗಾಂಜಾ ಸಭಾಗೃಹದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಮಹಿಳಾ ಘಟಕ ಉಧ್ಘಾಟನೆ ಹಾಗೂ 2023ರ ಕಸಾಪ ಪಣಜಿಯ ಘಟಕದ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಅವರು ಮಾತನಾಡುತ್ತಿದ್ದರು.
ಸಮಾರಂಭದ ಉಧ್ಘಾಟನೆ ನೆರವೇರಿಸಿದ ಬಾರ್ದೇಸ ಗೋವಾದ ಡೆಪ್ಯುಟಿ ಕಲೆಕ್ಟರ್ ಯಶಸ್ವಿನಿ.ಬಿ ಮಾತನಾಡಿ, ಮಕ್ಕಳಿಗೆ ಶಿಕ್ಷಣಕ್ಕೆ ಉತ್ತೇಜಿಸುವ ಕೆಲಸವನ್ನು ನಾವು ಮಾಡಬೇಕು. ಯಾವುದೇ ಒಂದು ಸಾಧನೆಗೈಯ್ಯಬೇಕಾದರೆ ಇದು ನಿನ್ನಿಂದ ಸಾಧ್ಯ ಎಂದು ಅವರಲ್ಲಿ ವಿಶ್ವಾಸ ಮೂಡಿಸುವಂತಹ ಕೆಲಸವನ್ನು ಮಾಡಬೇಕು. ಗೋವಾದಲ್ಲಿ ಇಷ್ಟೊಂದು ಕನ್ನಡಿಗರೆಲ್ಲ ಸೇರಿ ಮಹಿಳಾ ದಿನಾಚರಣೆ ಆಚರಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಡಾ. ಸಿದ್ಧಣ್ಣ ಮೇಟಿ ಮಾತನಾಡಿ, ಇಂದಿನ ವೇದಿಕೆ ನೋಡಿದರೆ ಮಹಿಳಾ ಮಯ ಎಂಬಂತೆ ಕಂಡುಬರುತ್ತಿದೆ. ಗೋವಾ ರಾಜ್ಯದ ಡೆಪ್ಯುಟಿ ಕಲೆಕ್ಟರ್ ಆಗಿ ನಿಯುಕ್ತಿಗೊಂಡಿರುವ ಯಶಸ್ವಿನಿ.ಬಿ ರವರನ್ನು ಅಭಿನಂದಿಸುತ್ತೇನೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಹಾಗೆಯೇ ನಾವು ಸ್ತ್ರೀ ಶಕ್ತಿಯನ್ನು ಗೌರವಿಸೋಣ. ಗಂಡ ಹೆಂಡತಿ ಇಬ್ಬರೂ ಒಬ್ಬರಿಗೊಬ್ಬರು ಬೆಂಬಲಿಸಿಕೊಂಡು ಸಮಾಜದಲ್ಲಿ ಬೆಳೆಯಬೇಕು ಎಂದರು.
ಅತಿಥಿಗಳಾಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ಭರತನಾಟ್ಯ ಶಿಕ್ಷಕಿ ನಿಧಿ ಸಾಂಕೆ, ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯ ಘಟಕದ ಮಹಿಳಾ ಪ್ರತಿನಿಧಿ ರೇಣುಕಾ ದಿನ್ನಿ, ಕನ್ನಡ ಸಾಹಿತ್ಯ ಪರಿಷತ್ ಪಣಜಿ ಘಟಕದ ಅಧ್ಯಕ್ಷ ಹನುಮಂತ ಗೊರವರ್, ವೇದಿಕೆಯ ಮೇಲೆ ಉಪಸ್ಥಿತರಿದ್ದು ಮಾತನಾಡಿದರು.
ಕಾರ್ಯಕ್ರಮ ಆರಂಭದಲ್ಲಿ ಪಣಜಿ ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಪ್ರತಿನಿಧಿಗಳು ನಾಡಗೀತೆ ಹಾಡಿದರು. ಕುಮಾರಿ ವೈಶಾಲಿ ಜೋಶಿ ರವರ ಭರತನಾಟ್ಯದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಗೋವಾ ಕನ್ನಡಿಗ ಕುವರಿ ಧರಣಿ ಮೋಹನ್ ಶೆಟ್ಟಿ ರವರನ್ನು ಸನ್ಮಾನಿಸಲಾಯಿತು. ಯಶೋದಾ ಹರಿಶೇಟ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು. ಶೀಲಾ ಮೇಸ್ತ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು. ಗೋವಾ ರಾಜ್ಯದ ವಿವಿದೆಡೆಯಿಂದ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.