ಪಣಜಿ: ಗೋವಾದ ಪಬ್‍ನಲ್ಲಿ ಮಹಿಳೆಯೊಬ್ಬರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಭಾರತೀಯ ಪೊಲೀಸ್ (ಐಪಿಎಸ್) ಅಧಿಕಾರಿಯನ್ನು ಕೇಂದ್ರ ಗೃಹ ಸಚಿವಾಲಯ ಅಮಾನತುಗೊಳಿಸಿದೆ.
ಅರುಣಾಚಲ ಪ್ರದೇಶ, ಗೋವಾ, ಮಿಜೋರಾಂ ಮತ್ತು ಕೇಂದ್ರಾಡಳಿತ ಪ್ರದೇಶಗಳ (ಎಜಿಎಂಯುಟಿ) ಕೇಡರ್ 2009ರ ಬ್ಯಾಚ್‍ನ ಐಪಿಎಸ್ ಅಧಿಕಾರಿ ಡಾ.ಎ.ಕೋನ್ ಅಧಿಕಾರಿಯನ್ನು “ತಕ್ಷಣದಿಂದ ಜಾರಿಗೆ ಬರುವಂತೆ” ಅಮಾನತುಗೊಳಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಬುಧವಾರ ಅಮಾನತು ಆದೇಶ ಹೊರಡಿಸಿದೆ.
ಗೃಹ ಸಚಿವಾಲಯವು ಐಪಿಎಸ್ ಅಧಿಕಾರಿಗಳಿಗೆ ಕೇಡರ್ ನಿಯಂತ್ರಣ ಪ್ರಾಧಿಕಾರವಾಗಿದೆ. ಸಚಿವಾಲಯವು ಗೋವಾ ಸರ್ಕಾರದಿಂದ ಪ್ರಾಥಮಿಕ ತನಿಖಾ ವರದಿಯನ್ನು ಸ್ವೀಕರಿಸಿದ ನಂತರ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಧಿಕಾರಿ ಎ.ಕೋನ್ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯೊಂದಿಗೆ ಇರುತ್ತಾರೆ ಮತ್ತು ಅಮಾನತು ಆದೇಶವು ಜಾರಿಗೆ ಬರುವವರೆಗೆ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ಪ್ರಧಾನ ಕಛೇರಿಯನ್ನು ಬಿಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದಕ್ಕೂ ಮುನ್ನ ಗೋವಾ ಸರ್ಕಾರ ಡೆಪ್ಯುಟಿ ಇನ್ಸ್‍ಪೆಕ್ಟರ್ ಜನರಲ್ (ಡಿಐಜಿ) ರವರು ಪೋಲಿಸ್ ಅಧಿಕಾರಿ ಎ.ಕೋನ್ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಿತ್ತು ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ವರದಿ ಸಲ್ಲಿಸುವಂತೆ ಸೂಚಿಸಿತ್ತು.
ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಅಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್‍ಪಿ) ಶಾಸಕ ವಿಜಯ್ ಸರ್ದೇಸಾಯಿ ಕೂಡ ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು.