ಪಣಜಿ: ಗೋವಾ ರಾಜ್ಯಾದ್ಯಂತ ಕಳೆದ ಸುಮಾರು ಒಂದು ವಾರದಿಂದ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ರಾಜಧಾನಿ ಪಣಜಿಯಲ್ಲಿ ಭಾನುವಾರ ಸುರಿದ ಭಾರೀ ಮಳೆಗೆ ಹಲವೆಡೆ ಪ್ರವಾಹ ಪರಿಸ್ಥಿತಿಯುಂಟಾಗಿದೆ.
ಸೋಮವಾರವೂ ರಾಜ್ಯದಲ್ಲಿ ಭಾರೀ ಮಳೆ ಮುಂದುವರೆದಿದ್ದು, ರಾಜ್ಯದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿತ್ತು. ಹೀಗಾಗಿ ಇಂದು 1 ರಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ರಜೆ ಘೋಷಿಸಲಾಗಿದೆ.
ರಾಜ್ಯದಲ್ಲಿ ಮಳೆಯೊಂದಿಗೆ ಗಂಟೆಗೆ 55 ರಿಂದ 66 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯನ್ನು ಹವಾಮಾನ ಇಲಾಖೆ ವ್ಯಕ್ತಪಡಿಸಿದ್ದು, ನಾಗರಿಕರಿಗೆ ಎಚ್ಚರಿಕೆ ನೀಡಿದೆ. ಭಾರೀ ಮಳೆ ಮತ್ತು ಗಾಳಿಯ ಹಿನ್ನೆಲೆ ಕಂಸಾವಲಿ-ವೆಹ್ಸಾವ್‍ನಲ್ಲಿ 4 ಚಕ್ರದ ವಾಹನದ ಮೇಲೆ ದೊಡ್ಡ ಆಲದ ಮರ ಬಿದ್ದಿದೆ.
ಈ ಅವಘಡದಲ್ಲಿ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಹಾಗೂ ಕಾರಿನಲ್ಲಿದ್ದ ಇನ್ನೋರ್ವ ಪ್ರಯಾಣಿಕ ಅದೃಷ್ಟವಶಾತ್ ಪಾರಾಗಿದ್ದಾರೆ.
ಕರಾವಳಿ ಭಾಗದಲ್ಲಿ ವಾಸಿಸುವ ಜನರು ಹಾಗೂ ಮೀನುಗಾರರು ವಿಶೇಷ ನಿಗಾ ವಹಿಸುವಂತೆಯೂ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಸಣ್ಣ ಮತ್ತು ದೊಡ್ಡ ದೋಣಿಗಳೊಂದಿಗೆ ಸಮುದ್ರಕ್ಕೆ ತೆರಳುವ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರ ವಹಿಸಬೇಕು. ಅಲ್ಲದೆ, ಜಲ ಕ್ರೀಡೆಗಳನ್ನು ತಾತ್ಕಾಲಿಕವಾಗಿ ನಿಷೇಧಿಸುವಂತೆಯೂ ಹವಾಮಾನ ಇಲಾಖೆ ಸೂಚಿಸಿದೆ.
ಜುಲೈ 16 ರಂದು ರಾಜ್ಯಕ್ಕೆ ಆರೆಂಜ್ ವಾರ್ನಿಂಗ್ ಮತ್ತು ಜು.17 ಮತ್ತು 18 ರಂದು ಎಲ್ಲೋ ಅಲರ್ಟ್ ಅನ್ನು ಹವಾಮಾನ ಇಲಾಖೆ ನೀಡಿದೆ.