Advertisement

Panaji: ರಾಜ್ಯದಲ್ಲಿ ಭಾರೀ ಮಳೆ, ಪ್ರವಾಹ: ನದಿ ತೀರದ ಗ್ರಾಮಗಳಿಗೆ ಮುನ್ನೆಚ್ಚರಿಕೆ

03:19 PM Jul 22, 2023 | Team Udayavani |

ಪಣಜಿ: ಗೋವಾ ರಾಜ್ಯದಲ್ಲಿ ಮುಂಗಾರು ಮಳೆ ಮುಂದುವರಿದಿದ್ದು, ಮಳೆ ಎಪ್ಪತ್ತೈದು ಇಂಚು ದಾಟಿದೆ. ಇದೇ ಸ್ಥಿತಿ ಮುಂದುವರಿದರೆ ಹಲವೆಡೆ ಪ್ರವಾಹ ಭೀತಿ ಎದುರಾಗಲಿದೆ.

Advertisement

ತೆರೆಖೋಲ್ ಮತ್ತು ಕುಶಾವತಿ ಸೇರಿದಂತೆ ಹಲವಾರು ನದಿಗಳು ಅಪಾಯದ ಮಟ್ಟ ದಾಟಿ ಹರಿಯುತ್ತಿದೆ. ತಿಲಾರಿ ಅಣೆಕಟ್ಟಿನಿಂದ ನೀರು ಹೊರಬಿಡುವ ಸಾಧ್ಯತೆಯಿರುವುದರಿಂದ ಡಿಚೋಳಿ ಮತ್ತು ಪೆಡ್ನೆ ತಾಲೂಕಿನ ನದಿ ತೀರದ ಗ್ರಾಮಗಳಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.

ಗೋವಾ ರಾಜ್ಯಾದ್ಯಂತ ಮಳೆ ಮುಂದುವರಿಯುವ ಸಾಧ್ಯತೆಯಿರುವುದರಿಂದ ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಯಲ್ಲೊ ಅಲರ್ಟ್ ಘೋಷಿಸಲಾಗಿದೆ.

ಅಣೆಕಟ್ಟಿನ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ, ಪಂಚವಾಡಿಯೊಂದಿಗೆ ಸಾಳಾವಲಿ ಅಣೆಕಟ್ಟು ಸಂಪೂರ್ಣ ಭರ್ತಿಯಾಗಿದೆ. ಗಾವಣೆ ಮತ್ತು ಆಮಠಾಣೆ ಅಣೆಕಟ್ಟುಗಳು ಭರ್ತಿಯಾಗುವ ಹಂತದಲ್ಲಿದೆ. ಅಂಜುಣೆ ಡ್ಯಾಂ ಕೂಡ ಶೇ.50ರಷ್ಟು ತುಂಬಿದೆ ಎಂದು ಜಲಸಂಪನ್ಮೂಲ ಇಲಾಖೆ ತಿಳಿಸಿದೆ.

ಗಾವಣೆ ಅಣೆಕಟ್ಟು ಶೇ.96.5ರಷ್ಟು ಮತ್ತು ಆಮಠಾಣೆ ಅಣೆಕಟ್ಟೆ ಶೇ.94.4ರಷ್ಟು ಭರ್ತಿಯಾಗಿದೆ.

Advertisement

ನೀರು ಬಿಡುಗಡೆ: ನದಿ ತೀರದ ನಿವಾಸಿಗಳಿಗೆ ಎಚ್ಚರಿಕೆ

ನಾಲ್ಕು ದಿನಗಳಿಂದ ತಿಳಾರಿ ಅಣೆಕಟ್ಟು ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಅಣೆಕಟ್ಟೆಯ ನೀರಿನ ಸಂಗ್ರಹ ವೇಗವಾಗಿ ಏರುತ್ತಿದೆ. ಆದ್ದರಿಂದ ಅಣೆಕಟ್ಟಿನಿಂದ ನೀರು ಬಿಡಲು ಯೋಜನೆ ರೂಪಿಸಲಾಗಿದ್ದು, ಈ ನೀರಿನಿಂದಾಗುವ ಅಪಾಯ ಅಥವಾ ಹಾನಿಯನ್ನು ತಡೆಗಟ್ಟಲು ಉಪವಿಭಾಗಾಧಿಕಾರಿ ತಿಳಾರಿ ಅಣೆಕಟ್ಟು ಉಪವಿಭಾಗ ನಂ.2 ರವರು ಪ್ರಚಾರ ಕರಪತ್ರದ ಮೂಲಕ ಮಾರ್ಗಸೂಚಿಗಳನ್ನು ನೀಡಿದ್ದಾರೆ.

ನೀರಿನ ಮಟ್ಟ ಹೆಚ್ಚಾದರೆ ಅಣೆಕಟ್ಟಿನಿಂದ ನೀರು ಹೊರಬಿಡಲಾಗುವುದು ಎಂದು ಅಣೆಕಟ್ಟಿನ ಕೆಳ ಭಾಗದ ಗ್ರಾಮಗಳಿಗೆ ಎಚ್ಚರಿಕೆ ನೀಡಲಾಗಿದೆ.

ತಿಳಾರಿ ಅಣೆಕಟ್ಟಿನ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ತಿಳಾರಿ ಅಣೆಕಟ್ಟಿನ ನೀರಿನ ಸಂಗ್ರಹವು ವೇಗವಾಗಿ ಹೆಚ್ಚುತ್ತಿದೆ. ಹೆಚ್ಚುವರಿ ನೀರನ್ನು ಕಾಲುವೆ ಮೂಲಕ ತಿಳಾರಿ ನದಿಗೆ ನಿಯಂತ್ರಿತ ರೀತಿಯಲ್ಲಿ ಬಿಡಲು ಯೋಜಿಸಲಾಗಿದೆ.

ಜುಲೈ 22 ರಂದು ಖಾಲ್ಗಾದ ದಗ್ಡಿ ಅಣೆಕಟ್ಟಿನಿಂದ ತಿಲಾರಿ ನದಿಗೆ ನೀರು ಬಿಡಲಾಗುತ್ತಿದೆ. ಅಣೆಕಟ್ಟು ಪ್ರದೇಶದ ಹೊರಭಾಗದ ಜಲಾನಯನ ಪ್ರದೇಶ, ಖರಾರಿ ಕಾಲುವೆ ನೀರು ನದಿ ಪಾತ್ರಕ್ಕೆ ಸೇರುವುದರಿಂದ ನದಿ ಪಾತ್ರದಲ್ಲಿ ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆ ಇದೆ.

ನದಿಯ ಜಲಾನಯನ ಪ್ರದೇಶದಲ್ಲಿ ಯಾವುದೇ ಸಮಯದಲ್ಲಿ ಹರಿವು ಹೆಚ್ಚಾಗುವ ಸಾಧ್ಯತೆಯಿರುವಾಗ ನದಿ ಜಲಾನಯನ ಪ್ರದೇಶದ ನಾಗರಿಕರು ಜಾಗರೂಕರಾಗಿರಬೇಕು.  ದನಕರುಗಳನ್ನು ಬಿಡುವ ರೈತರು ಕೂಡ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.

ಈ ಗ್ರಾಮಗಳು ಎಚ್ಚರಿಕೆ ವಹಿಸಬೇಕು…!

ದೋಡಾಮಾರ್ಗ ತಾಲೂಕಿನ ಕೋನಾಳಕಟ್ಟಾ, ಘೋಟಗೆವಾಡಿ, ಪರ್ಮೆ, ಘೋಟಗೆ, ಖನ್ಯಾಲೆ-ಅವಡೆ, ಮಾಣೇರಿ, ಕುಡಸೆ, ಸಾತೇಲಿ-ಭೇಡಶಿ ಹಾಗೂ ಗೋವಾದ ಇಬ್ರಾಂಪುರ, ಹಂಖಾನೆ, ಚಂದೇಲ್, ಹಾಸಾಪುರ, ಕಾಸರವರ್ಣೆ, ವಾರಖಂಡದ ನಾಗರಿಕರು ಎಚ್ಚರದಿಂದ ಇರುವಂತೆ ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next