ಪಣಜಿ : ಗೋವಾದ ಸಾವರ್ಡೆಯ ಕೋನೀರ್ ಕಾಜ್ರೆಘಾಟ್ ಜಲಪಾತಕ್ಕೆ ಬಂದಿದ್ದ ವಾಸ್ಕೋ ಮೂಲದ ಇಬ್ಬರು ಸೆಲ್ಫಿ ತೆಗೆದುಕೊಳ್ಳುವಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು ಮೃತ ಯುವಕರನ್ನು ಶಶಿ ಸೋಮನಲ್ (18) ಮತ್ತು ಗೌರವ ರಣಧೀರ್ ಸಿಂಗ್ (18) ಎಂದು ಗುರುತಿಸಲಾಗಿದೆ.
ಈ ಘಟನೆಯ ಕುರಿತು ಲಭ್ಯವಾಗಿರುವ ಮಾಹಿತಿಯ ಪ್ರಕಾರ ವಾಸ್ಕೋದಿಂದ ಎಂಟು ಮಂದಿ ಕೋನೀರ್ ಜಲಪಾತಕ್ಕೆ ಪ್ರವಾಸಕ್ಕೆಂದು ಬಂದಿದ್ದರು. ಭಾರೀ ಮಳೆಯಿಂದಾಗಿ ಇಲ್ಲಿ ನೀರಿನ ಹರಿವು ಜೋರಾಗಿತ್ತು. ಈ ವೇಳೆ ಶಶಿ ಮತ್ತು ಗೌರವ್ ಸೆಲ್ಫಿ ಫೋಟೋ ತೆಗೆದುಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಓರ್ವನ ಕಾಲು ಜಾರಿದಾಗ ಮತ್ತೊಬ್ಬ ಆತನ ಕೈ ಹಿಡಿದು ರಕ್ಷಿಸುವ ಪ್ರಯತ್ನ ನಡೆಸಿದ್ದಾನೆ ಈ ವೇಳೆ ಇಬ್ಬರೂ ಕಾಲು ಜಾರಿ ಜಲಪಾತದಲ್ಲಿ ಬಿದ್ದಿದ್ದಾರೆ ಎನ್ನಲಾಗಿದೆ.
ಘಟನೆ ನಡೆದ ಕೂಡಲೇ ವಾಳಪೈ ಅಗ್ನಿಶಾಮಕ ದಳ ಹಾಗೂ ವಾಳಪೈ ಪೊಲೀಸರು ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಸತತ ನಾಲ್ಕು ಗಂಟೆಗಳ ಹುಡುಕಾಟದ ಬಳಿಕ ಶಶಿ ಸೋಮನಲ್ ಮೃತದೇಹ ಪತ್ತೆಯಾಗಿದೆ. ಆದರೆ ಗೌರವ್ ಶವ ಇದುವರೆಗೂ ಪತ್ತೆಯಾಗಿಲ್ಲ. ರಾತ್ರಿ 10 ಗಂಟೆಯವರೆಗೂ ಕಾರ್ಯಾಚರಣೆ ನಡೆಸಲಾಗಿದೆ. ಬಳಿಕ ಮಂಗಳವಾರ ಬೆಳಗ್ಗೆಯಿಂದ ಮತ್ತೆ ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿದೆ.
ಜಲಪಾತಕ್ಕೆ ಭೇಟಿ ನಿಷೇಧ…!
ಈ ಜಲಪಾತಕ್ಕೆ ಅನೇಕ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಕೆಲವರು ಮದ್ಯ ಸೇವಿಸಿ ಇಲ್ಲಿ ಬಂದು ಮೋಜುಮಸ್ತಿ ನಡೆಸುತ್ತಾರೆ. ನಿರಂತರ ಮಳೆಯಿಂದಾಗಿ ಜಲಪಾತದ ನೀರಿನ ಹರಿವು ಹೆಚ್ಚಾಗಿದೆ. ಇದರ ಕಲ್ಪನೆ ಹೊರಗಿನಿಂದ ಬರುವ ಪ್ರವಾಸಿಗರಿಗೆ ಮಾಹಿತಿ ಇರುವುದಿಲ್ಲ. ಇದರಿಂದ ಜೀವಹಾನಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇನ್ನು ಮುಂದೆ ಇಂತಹ ಜೀವಹಾನಿ ಆಗದಂತೆ ಜಲಪಾತಕ್ಕೆ ಬರುವವರನ್ನು ನಿರ್ಬಂಧಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ವಾಸ್ಕೋದ ಯುವಕರು ಈ ಜಲಪಾತವನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ ಬಳಿಕ ಪ್ರವಾಸಕ್ಕೆ ಈ ಸ್ಥಳ ಆಯ್ಕೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಅಪಾಯಕಾರಿ ಜಾಗದಲ್ಲಿ ನಿಂತು ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಆಮಿಷಕ್ಕೆ ಒಳಗಾಗಿ ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ. ಶಶಿ ಸೋಮನಲ್ ಎಂಎಎಸ್ ಕಾಲೇಜಿನಲ್ಲಿ ಬಿಕಾಂ ಸ್ವಾಸಂಗ ಮಾಡುತ್ತಿದ್ದ, ಗೌರವ ಅದೇ ಕಾಲೇಜಿನಲ್ಲಿ 11ನೇ ತರಗತಿಯಲ್ಲಿ ಓದುತ್ತಿದ್ದ ಎನ್ನಲಾಗಿದೆ.