ಈಶ್ವರಮಂಗಲ: ಸರಿಯಾಗಿ ಅಡುಗೆ ಮಾಡಿಲ್ಲ ಎಂಬ ಕಾರಣ ಮುಂದಿಟ್ಟು ಪಾಣಾಜೆ ಗ್ರಾಮದ ಕಲ್ಲಪದವಿನಲ್ಲಿ ಗುರುವಾರ ರಾತ್ರಿ ವ್ಯಕ್ತಿಯೋರ್ವ ಪತ್ನಿಯನ್ನು ಚೂರಿಯಿಂದ ಇರಿದು ಕೊಲೆಗೈದಿದ್ದಾನೆ. ಕೃತ್ಯದ ಬಳಿಕ ಪರಾರಿಯಾಗಿದ್ದ ಆರೋಪಿಯನ್ನು ಶುಕ್ರವಾರ ಸಂಪ್ಯ ಪೊಲೀಸರು ಬಂಧಿಸಿದ್ದಾರೆ.
ಪಾಣಾಜೆ ಗ್ರಾಮದ ಆರ್ಲಪದವಿನ ಕಲ್ಲಪದವು ಬಾಬು ಅವರ ಪುತ್ರ, ಕೂಲಿ ಕಾರ್ಮಿಕ ಗಣೇಶ್ ಆರೋಪಿ ಹಾಗೂ ಆತನ ಪತ್ನಿ ಅಕ್ಷತಾ (22) ಕೊಲೆಯಾದವರು.
ಈ ದಂಪತಿ ಸುಮಾರು ಒಂದು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಗುರುವಾರ ಸಂಜೆ ಅಡುಗೆ ವಿಷಯದಲ್ಲಿ ಇವರ ನಡುವೆ ಮನೆಯಲ್ಲಿಯೇ ಜಗಳವಾಗಿತ್ತು. ಜಗಳ ತಾರಕಕ್ಕೇರಿದಾಗ ಗಣೇಶನು ಚೂರಿಯಿಂದ ಅಕ್ಷತಾಳಿಗೆ ಇರಿದು ಗಂಭೀರವಾಗಿ ಗಾಯಗೊಳಿಸಿದ. ಕೂಡಲೇ ಆಕೆ ಮನೆ ಸಮೀಪವಿರುವ ಗಂಡನ ತಾಯಿ ಮನೆಗೆ ಬಂದಿದ್ದು, ಅಲ್ಲಿಗೂ ಆರೋಪಿ ಬೆನ್ನಟ್ಟಿ ಬಂದಿದ್ದ. ಅಲ್ಲಿಯೂ ಪತ್ನಿಯ ಮೇಲೆ ಹಲ್ಲೆಗೆ ಮುಂದಾಗಿದ್ದ ಆತನನ್ನು ಮನೆಯವರು ತಡೆದಿದ್ದರು.
ಗಂಭೀರ ಸ್ಥಿತಿಯಲ್ಲಿದ್ದ ಅಕ್ಷತಾಳನ್ನು ಮನೆಯವರು ವಿಚಾರಿಸಿದಾಗ ಅಡುಗೆ ವಿಷಯದಲ್ಲಿ ಇರಿದುದಾಗಿ ತಿಳಿಸಿದ್ದಳು. ಕುತ್ತಿಗೆ, ಮುಖ ಮತ್ತಿತರ ಕಡೆ ಇರಿತದ ಗಾಯವಾಗಿದ್ದ ಆಕೆಯನ್ನು ರಿಕ್ಷಾದಲ್ಲಿ ತಾಯಿ ಹಾಗೂ ಗಣೇಶನ ಅಣ್ಣ ಬಾಲಕೃಷ್ಣ ಅವರು ಪುತ್ತೂರು ಸರಕಾರಿ ಆಸ್ಪತ್ರೆ ಕರೆ ತಂದರು. ಪರೀಕ್ಷಿಸಿದ ವೈದ್ಯರು ಅಕ್ಷತಾ ಮೃತಪಟ್ಟಿರುವುದಾಗಿ ತಿಳಿಸಿದರು.
ದೇರಳಕಟ್ಟೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಅಕ್ಷತಾಳ ತಾಯಿ ನಿಡ್ಪಳ್ಳಿ ಗ್ರಾಮದ ದೊಂಬಟೆಬರಿ ನಿವಾಸಿ ಕಮಲಾ ನೀಡಿರುವ ದೂರಿನಂತೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರಾರಿಯಾಗಿ ಲಾರಿಯಲ್ಲಿ ಮಲಗಿದ್ದ ಆರೋಪಿ
ತಾಯಿ ಮನೆಗೆ ಬಂದು ಅಲ್ಲಿಂದ ಪರಾರಿಯಾಗಿದ್ದ ಗಣೇಶನು ಆರ್ಲಪದವಿನಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಲಾರಿಯಲ್ಲಿ ಮಲಗಿದ್ದ. ಅಲ್ಲಿಂದ ಆತನನ್ನು ಸಂಪ್ಯ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯವಾಗಿ ಕೂಲಿ ಕೆಲಸ ಮಾಡುತ್ತಿದ್ದ ಈತ ಮುಂಗೋಪಿಯಾಗಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.