ಜಗತ್ತು ಸೃಷ್ಟಿಯಾದಾಗಿನಿಂದಲೂ ಮನುಷ್ಯರು ಮತ್ತು ಪ್ರಾಣಿಗಳ ನಡುವೆ ಒಂದು ಬೇರ್ಪಡಿಸಲಾಗದ ನಂಟು, ಸಂಬಂಧ, ಒಡನಾಟವಿದೆ. ಅನೇಕ ಸಂದರ್ಭಗಳಲ್ಲಿ ಇದು ಬೇರೆ ಬೇರೆ ರೂಪಗಳಲ್ಲಿ ಪ್ರಕಟವಾಗುತ್ತಲೇ ಇರುತ್ತದೆ. ಅದರಲ್ಲೂ ಮನುಷ್ಯ ಮತ್ತು ನಾಯಿಯ ನಡುವಿನ ಭಾವನಾತ್ಮಕ ಸಂಬಂಧ ಇನ್ನೂ ವಿಶೇಷವಾದದ್ದು.
ಪುರಾಣ-ಪುಣ್ಯಕಥೆಗಳು, ಇತಿಹಾಸದ ಪುಟಗಳಿಂದ ಹಿಡಿದು ಇಂದಿನ ಸ್ಮಾರ್ಟ್‌ಪೋನ್ ಜಮಾನದವರೆಗೂ ಮನುಷ್ಯ ಮತ್ತು ನಾಯಿಯ ನಡುವಿನ ಸಂಬಂಧ ಸಾರುವ ಲೆಕ್ಕವಿಲ್ಲದಷ್ಟು ನಿದರ್ಶನಗಳು, ದೃಶ್ಯಗಳು ನಮ್ಮ ಕಣ್ಣ ಮುಂದೆಯೇ ಪ್ರತಿನಿತ್ಯ ನಡೆಯುತ್ತಲೇ ಇರುತ್ತದೆ. ಹೀಗೆ ನಮ್ಮ ನಡುವೆಯೇ ನಡೆಯುವ ಮನುಷ್ಯ ಮತ್ತು ನಾಯಿಯ ನಡುವಿನ ಬಾಂಧವ್ಯವನ್ನು ತೆರೆದಿಡುವ ಸಿನಿಮಾವೇ “777 ಚಾರ್ಲಿ’.
ಸ್ವತಃ “777 ಚಾರ್ಲಿ’ ಸಿನಿಮಾದ ನಾಯಕ ನಟ ರಕ್ಷಿತ್ ಶೆಟ್ಟಿ ಮತ್ತು ಚಿತ್ರತಂಡವೇ ಹೇಳುವಂತೆ, “”777 ಚಾರ್ಲಿ’ ಸಿನಿಮಾದಲ್ಲಿ ಹೀರೋ ಅಂತ ಇಲ್ಲ. ಇಲ್ಲಿ ತೆರೆಮೇಲೆ ಬರುವುದೆಲ್ಲವೂ ಒಂದೊಂದು ಪಾತ್ರಗಳು ಮಾತ್ರ. ಪ್ರತಿ ಪಾತ್ರಕ್ಕೂ ಅದರದ್ದೇ ಆದ ಮಹತ್ವವಿದೆ. ಹಾಗೇನಾದ್ರೂ ಸಿನಿಮಾದಲ್ಲಿ ಇದ್ದರೆ ಅದು “ಚಾರ್ಲಿ’ ಅನ್ನೋ ನಾಯಿ ಮಾತ್ರ. ಯಾಕೆಂದರೆ, ಇಡೀ ಸಿನಿಮಾದ ಕಥೆ ಈ ನಾಯಿಯ ಸುತ್ತ ನಡೆಯುತ್ತದೆ’ ಎನ್ನುವುದು ಚಿತ್ರತಂಡ ಮಾತು.
“ಇದೊಂದು ಸಂಪೂರ್ಣ ಭಾವನಾತ್ಮಕ ಕಥಾಹಂದರದ ಸಿನಿಮಾ. ಹಾಗಾಗಿ ಯಾವುದೇ ಭಾಷೆಯ ಹಂಗಿಲ್ಲದೆ ಎಲ್ಲ ಪ್ರೇಕ್ಷಕರಿಗೂ ಸಿನಿಮಾ ಕನೆಕ್ಟ್ ಆಗುತ್ತದೆ. ಎಲ್ಲರ ಮನಮುಟ್ಟುವಂಥ ಸಿನಿಮಾ ಮಾಡಿದ್ದೇವೆ ಎಂಬ ನಂಬಿಕೆ ಇದೆ. ಈಗಾಗಲೇ ಸಿನಿಮಾ ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಾಮಾನ್ಯವಾಗಿ ಇಡೀ ಸಿನಿಮಾದಲ್ಲಿ ಕೇವಲ ಮನುಷ್ಯರೇ ಇದ್ದಾಗ ನಮಗೆ ಬೇಕಾದಂತೆ ಶೆಡ್ಯೂಲ್ ಮಾಡಿಕೊಂಡು ಶೂಟಿಂಗ್ ಮಾಡಬಹುದು. ಪ್ಲಾನ್ ಪ್ರಕಾರ ಶೂಟಿಂಗ್ ಮಾಡಿ ಮುಗಿಸಬಹುದು. ಆದ್ರೆ “777 ಚಾರ್ಲಿ’ ಸಿನಿಮಾ ಹಾಗಲ್ಲ. ಇಡೀ ಸಿನಿಮಾದ ಕಥೆ ಒಂದು ನಾಯಿಯ ಸುತ್ತ ನಡೆಯುತ್ತದೆ. ಸಿನಿಮಾದಲ್ಲಿ ನಾಯಕ ರಕ್ಷಿತ್ ಶೆಟ್ಟಿ ಎಷ್ಟು ಮುಖ್ಯವೋ, ಚಾರ್ಲಿ (ನಾಯಿ) ಕೂಡ ಅಷ್ಟೇ ಮುಖ್ಯವಾಗಿತ್ತು. ನಮ್ಮ ಸಿನಿಮಾದ ಸ್ಕ್ರಿಪ್ಟ್ ಫೈನಲ್ ಆದ ನಂತರ ಸಿನಿಮಾದಲ್ಲಿ ಟಾಸ್ಕ್ ಮಾಡುವಂಥ ನಾಯಿಯೊಂದು ನಮಗೆ ಬೇಕಾಗಿತ್ತು. ಆ ನಾಯಿಯ ಹುಡುಕಾಟಕ್ಕೇ ತಿಂಗಳುಗಳ ಕಾಲ ಸಮಯ ಹಿಡಿಯಿತು. ನಮಗೆ ಬೇಕಾದಂಥ ನಾಯಿ ಸಿಕ್ಕ ತಕ್ಷಣ ಅದಕ್ಕೆ ಟ್ರೈನಿಂಗ್ ಮಾಡಬೇಕಿತ್ತು. ಆ ಟ್ರೈನಿಂಗ್‌ಗಾಗಿ ಮತ್ತಷ್ಟು ಸಮಯ ಹಿಡಿಯಿತು. ಹೀಗೆ, ಕೇವಲ ನಾಯಿಯ ಹುಡುಕಾಟ ಮತ್ತು ಅದರ ಟ್ರೈನಿಂಗ್ ಗಾಗಿ ವರ್ಷಗಳೇ ಬೇಕಾಯ್ತು’ ಎಂದು ಸಿನಿಮಾ ಸಾಕಷ್ಟು ಸಮಯ ತೆಗೆದುಕೊಂಡಿರುವುದರ ಹಿಂದಿನ ಕಾರಣಕ್ಕೆ ವಿವರಣೆ ಕೊಡುತ್ತಾರೆ ನಿರ್ದೇಶಕ ಕಿರಣ್ ರಾಜ್.