Advertisement

PAN Card ಹೊಸ ಫೀಚರ್ಸ್‌, ಹೆಚ್ಚು ಸುರಕ್ಷಿತ

12:15 AM Dec 03, 2024 | Team Udayavani |

ಕೇಂದ್ರ ಸರಕಾರವು ಪ್ಯಾನ್‌ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಮುಂದಾಗಿದ್ದು, ಪ್ಯಾನ್‌ 2.0 ಅಪ್‌ಗ್ರೇಡ್ ಘೋಷಿಸಿದೆ. ಈ ಸುಧಾರಿತ ಪ್ಯಾನ್‌ ಹೆಚ್ಚು ಸುರಕ್ಷಿತ ಹಾಗೂ ಸರಕಾರದ ಎಲ್ಲ ಡಿಜಿಟಲ್‌ ವೇದಿಕೆಗಳಲ್ಲಿ ಪ್ಯಾನ್‌ ಬಳಕೆಯನ್ನು ಸರಳೀಕರಿಸಲಿದೆ. ಈ ಹಿನ್ನೆಲೆಯಲ್ಲಿ ಏನಿದು ಪ್ಯಾನ್‌ ಕಾರ್ಡ್‌? ಪ್ಯಾನ್‌ 2.0 ಯಾಕೆ? ಏನೇನು ಲಾಭ? ಹೊಸ ವೈಶಿಷ್ಟéಗಳೇನು ಎಂಬ ಕುರಿತು ಮಾಹಿತಿ ಇಲ್ಲಿದೆ.

Advertisement

ಪ್ಯಾನ್‌ ಕಾರ್ಡ್‌ ಎಂದರೇನು?
ಪ್ಯಾನ್‌(PAN)ಎಂದರೆ ತೆರಿಗೆದಾರರ “ಶಾಶ್ವತ ಖಾತೆ ಸಂಖ್ಯೆ’ ­(permanent account number). ಈ ಕಾರ್ಡ್‌ 10 ಅಂಕಿಗಳ ವಿಶಿಷ್ಟ ಗುರುತಿನ ನಂಬರ್‌ ಹೊಂದಿದ್ದು, ಆದಾಯ ತೆರಿಗೆ ಇಲಾಖೆ ವಿತರಿಸುತ್ತದೆ. ಈ ಕಾರ್ಡ್‌ನಲ್ಲಿ ಖಾತೆದಾರರ ಹೆಸರು, ಭಾವಚಿತ್ರ, ಜನ್ಮದಿನಾಂಕ, ಹೆತ್ತವರ ಮಾಹಿತಿ ಸಹಿತ ಇತರ ಎಲ್ಲ ವಿವರಣೆ ಇರುತ್ತದೆ. ಈ ದಾಖಲೆಯನ್ನು ಜನರು ಗುರುತು ಅಥವಾ ಜನ್ಮದಿನಾಂಕ ದೃಢೀಕರಣ ಪತ್ರವಾಗಿಯೂ ಬಳಸಬಹುದು. ಈ ಕಾರ್ಡ್‌ ಮೂಲಕ ತೆರಿಗೆದಾರ ಎಲ್ಲ ಹಣಕಾಸು ವಹಿವಾಟನ್ನು ಟ್ರ್ಯಾಕ್‌ ಮಾಡಬಹುದು ಮತ್ತು ಇದು ಐಟಿ ಇಲಾಖೆ ಬಳಿ ಇರುವ ತೆರಿಗೆದಾರರ ಅಧಿಕೃತ ಮಾಹಿತಿಯಾಗಿರುತ್ತದೆ.

ಏನಿದು ಪ್ಯಾನ್‌ ಕಾರ್ಡ್‌ 2.0?
ಸದ್ಯ ಇರುವ ಪ್ಯಾನ್‌ ಕಾರ್ಡ್‌ನ ಸುಧಾರಿತ ಆವೃತ್ತಿಯೇ ಈ ಪ್ಯಾನ್‌ 2.0. ನೋಂದಣಿಯನ್ನು ಹೆಚ್ಚು ಸುಲಭಗೊಳಿಸಲು ಮತ್ತು ತೆರಿಗೆದಾರರಿಗೆ ಹೆಚ್ಚು ಅನುಕೂಲವಾಗುವಂತೆ ತಂತ್ರ­ಜ್ಞಾನದ ಬಳಕೆ ಮಾಡಲಾಗುತ್ತದೆ. ಈ ಮೂಲಕ ಆದಾಯ ತೆರಿಗೆ ಇಲಾಖೆಯ ಡಿಜಿಟಲ್‌ ಮೂಲಸೌಕರ್ಯವನ್ನು ಜನರು ಮತ್ತು ವ್ಯವಹಾರಗಳಿಗೆ ಉತ್ತಮ ಸೇವೆ ನೀಡುವಂತೆ ಮಾಡಲಾಗಿದೆ. ಭಾರತ ಸರಕಾರದ ಡಿಜಿಟಲ್‌ ಇಂಡಿಯಾದ ಭಾಗವಾಗಿ ಪ್ಯಾನ್‌ ಅಪ್‌ಗ್ರೇಡ್ ಮಾಡಲಾಗುತ್ತಿದೆ. ಪ್ಯಾನ್‌ 2.0 ಸರಕಾರಿ ಸಂಸ್ಥೆಗಳಿಗೆ ನಿರ್ದಿಷ್ಟಪಡಿಸಿದ ಡಿಜಿಟಲ್‌ ವ್ಯವಸ್ಥೆಗಳಲ್ಲಿ ಸಾರ್ವತ್ರಿಕ ಗುರುತಿನ ಕಾರ್ಡ್‌ ಆಗಿ ಬಳಸಲು ಅವಕಾಶವನ್ನು ಕಲ್ಪಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಹೊಸ ಪ್ಯಾನ್‌ ಹೆಚ್ಚು ಸುರಕ್ಷಿತವಾಗಿರುತ್ತದೆ.

ಯಾಕೆ ಪ್ಯಾನ್‌ ಅಪ್‌ಗ್ರೇಡ್?
ಪ್ಯಾನ್‌ ಅನ್ನು ಏಕೀಕೃತ ವ್ಯಾಪಾರ ಗುರುತಿನ ಸಂಖ್ಯೆಯಾಗಿ ಅಪ್‌ಗ್ರೇಡ್ ಮಾಡಬೇಕೆಂಬುದು ಉದ್ಯಮದ ಬಹುದಿನಗಳ ಬೇಡಿಕೆಯಾಗಿತ್ತು. ಅದ­ನ್ನೀಗ ಸರಕಾರವು ಈಡೇರಿಸುತ್ತಿದೆ. ಸುಧಾರಿತ ಆವೃತ್ತಿಯ ಮೂಲಕ ಪ್ಯಾನ್‌ ಅನ್ನು ಎಲ್ಲ ಡಿಜಿಟಲ್‌ ವ್ಯವಸ್ಥೆಯಲ್ಲಿ ಸಾಮಾನ್ಯ ಗುರುತು ಕಾರ್ಡ್‌ ಆಗಿ ಬಳ­ಸಲಾಗು­ತ್ತದೆ. ಕೇಂದ್ರ ಸಚಿವ ಅಶ್ವಿ‌ನಿ ವೈಷ್ಣವ್‌ ಪ್ರಕಾರ ಪ್ಯಾನ್‌ 2.0, ವೇ­ಗವಾಗಿ ಮತ್ತು ಹೆಚ್ಚು ನಿಖರವಾದ ಸೇವೆಗಳನ್ನು ನೀಡುವುದರ ಜತೆಗೆ ಎಲ್ಲ ಡಿಜಿಟಲ್‌ ವೇದಿಕೆಗಳಲ್ಲಿ ಡೇಟಾ ಸ್ಥಿರತೆಯನ್ನು ಖಾತ್ರಿಪಡಿಸುತ್ತದೆ. ಕಾರ್ಯಾಚರಣೆ ಸುಗಮಗೊಳಿಸುತ್ತದೆ. ಕಾಗದರಹಿತ ವ್ಯವಸ್ಥೆ­ಯನ್ನು ಅಳವಡಿಸಿಕೊಳ್ಳುವುದರ ಜತೆಗೆ ಕಾರ್ಡ್‌ಗೆ ಭದ್ರತೆಯನ್ನು ಒದಗಿಸು­ತ್ತದೆ. ಪ್ಯಾನ್‌ 2.0 ಅಪ್‌ಗ್ರೇಡ್ ಗಾಗಿ ಕೇಂದ್ರ ಸರಕಾರವು 1,438 ಕೋಟಿ ರೂ. ವೆಚ್ಚ ಮಾಡಲಿದೆ.

ಈಗಿರುವ ಪ್ಯಾನ್‌ ರದ್ದಾಗುತ್ತಾ?
ಪ್ಯಾನ್‌ 2.0 ಹಿನ್ನೆಲೆಯಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಪ್ಯಾನ್‌ ರದ್ದಾಗು­ತ್ತಾ? ಪ್ಯಾನ್‌ ನಂಬರ್‌ ಬದಲಾಗುತ್ತಾ? ಎನ್ನುವ ಅನುಮಾನಗಳು ಮೂಡುವುದು ಸಹಜ. ಖಂಡಿತ ಇಲ್ಲ. ಖಾತೆದಾರರು ಭಯಪಡಬೇಕಾ­ಗಿಲ್ಲ. ಈಗಿರುವ ಕಾರ್ಡ್‌ಗೆ ಮಾನ್ಯತೆ ಇದ್ದೇ ಇರುತ್ತದೆ. ಆದರೆ ಅದನ್ನು ಅಪ್‌ಗ್ರೇಡ್ ಮಾಡಿಸಿಕೊಳ್ಳಬೇಕಾಗುತ್ತದೆ. ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.

Advertisement

ಅಪ್‌ಗ್ರೇಡ್ ಕಾರ್ಡ್‌ಗೆ ಶುಲ್ಕವಿಲ್ಲ
ಈಗಿರುವ ಪ್ಯಾನ್‌ ಅಪ್‌ಗ್ರೇಡ್ ಮಾಡಲು ಯಾವುದೇ ಶುಲ್ಕವನ್ನು ನೀಡಬೇ­ಕಿಲ್ಲ. ಇದಕ್ಕಾಗಿ ಯಾವುದೇ ಅರ್ಜಿ ಸಲ್ಲಿಬೇಕಿಲ್ಲ (ಹೊಸ ಕಾರ್ಡ್‌ ಹೊರತು­ಪಡಿಸಿ). ಇದು ಉಚಿತ­ವಾಗಿಯೇ ದೊರೆಯಲಿದೆ. ಜತೆಗೆ ನೀವೇ ಮಾಹಿತಿಯನ್ನು ಆನ್‌ಲೈನ್‌ ಮೂಲಕ ಅಪ್‌ಗ್ರೇಡ್ ಕೂಡ ಮಾಡಬಹುದು.

ಸೈಬರ್‌ ವಂಚಕರಿಂದ ಎಚ್ಚರ ಇರಲಿ
ಪ್ಯಾನ್‌ 2.0 ಅಪ್‌ಗ್ರೇಡ್ ನೆಪದಲ್ಲಿ ಸೈಬರ್‌ ವಂಚಕರು ನಿಮ್ಮನ್ನು ಬಲೆಗೆ ಬೀಳಿಸಬಹುದು. ಹಾಗಾಗಿ ಖಾತೆದಾರರು, ಪ್ಯಾನ್‌ 2.0 ಅಪ್‌ಗ್ರೇಡ್ ಗೆ ಸಂ­ಬಂಧಿಸಿದ ಸಂಶಯಾಸ್ಪದ ಕರೆಗಳು, ಸಂದೇಶಗಳಿಗೆ ಉತ್ತರಿಸಲು ಹೋಗಬೇಡಿ. ಜತೆಗೆ ನಿಮ್ಮ ವೈಯಕ್ತಿಕ ಹಾಗೂ ಬ್ಯಾಂಕ್‌ ಮಾಹಿತಿಯನ್ನು ಅಪರಿಚಿತ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಲು ಹೋಗಬೇಡಿ. ಇಂಥ ಅವಕಾಶಗಳಿಗೆ ವಂಚಕರು ಕಾಯುತ್ತಿರುತ್ತಾರೆಂಬುದನ್ನು ಮರೆಯಬೇಡಿ.

ಪ್ಯಾನ್‌ 2.0 ಪ್ರಮುಖ ವೈಶಿಷ್ಟ್ಯ ಗಳು

1 ಕ್ಯುಆರ್‌ ಕೋಡ್‌: ಇನ್ನು ಮುಂದೆ ಎಲ್ಲ ಹೊಸ ಮತ್ತು ಈಗಾಗಲೇ ಚಾಲ್ತಿಯಲ್ಲಿರುವ ಕಾರ್ಡ್‌ಗಳಲ್ಲಿ ಕ್ಯುಆರ್‌ ಕೋರ್ಡ್‌ ಇರಲಿದೆ. ಇದರಿಂದ ವ್ಯವಸ್ಥೆಯನ್ನು ಏಕೀಕೃತಗೊಳಿಸಲು ಸಾಧ್ಯವಾಗುತ್ತದೆ. ಕ್ಯುಆರ್‌ ಕೋಡ್‌ನಿಂದ ಎಲ್ಲ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ.

2ಡೇಟಾ ಭದ್ರಕೋಟೆ: ಪ್ಯಾನ್‌ 2.0 ಹೆಚ್ಚು ಸುರಕ್ಷಿತವಾಗಿರುತ್ತದೆ. ತೆರಿಗೆದಾರರ ಮಾಹಿತಿಗೆ ಕನ್ನ ಹಾಕಲು ಅವಕಾಶವೇ ಇರುವುದಿಲ್ಲ. ಪ್ಯಾನ್‌ ನಕಲಿ ಕಾರ್ಡ್‌ ಮಾಡಲು ಸಾಧ್ಯವಿಲ್ಲ. ಇದು ಸೈಬರ್‌ ಭದ್ರತೆಯನ್ನು ಒದಗಿಸುತ್ತದೆ.

3ಏಕೀಕೃತ ಪೋರ್ಟಲ್‌: ಒಂದೇ ವೇದಿಕೆಯು ಹಳತಾದ ತಂತ್ರಾಂಶವನ್ನು ಬದಲಾಯಿಸುವುದರ ಜತೆಗೆ ಕುಂದುಕೊರತೆ ಪರಿಹಾರ ಮತ್ತು ಆ್ಯಪ್ಲಿಕೇಶನ್‌ ಪ್ರಕ್ರಿಯೆಗಳನ್ನು ಸುಗಮಗೊಳಿಸುತ್ತದೆ.

4ಕಾಗದರಹಿತ ಅರ್ಜಿ ಪ್ರಕ್ರಿಯೆ: ವಿಶೇಷ ಎಂದರೆ ಈಗ ಪ್ಯಾನ್‌ ಪಡೆಯುವ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್‌ ನಡೆಯಲಿದೆ. ಹಾಗಾಗಿ ಈ ಹೊಸ ವ್ಯವಸ್ಥೆ ಹೆಚ್ಚು ಪರಿಸರಸ್ನೇಹಿಯಾಗಿದೆ.

5ಸಮಗ್ರ ವ್ಯವಸ್ಥೆ : ಡೇಟಾ ಸ್ಥಿರತೆ ಮತ್ತು ಸುಧಾರಿತ ಸೇವೆ ಪೂರೈಕೆಗಾಗಿ ಪ್ಯಾನ್‌ ಮತ್ತು ಟ್ಯಾನ್‌(ತೆರಿಗೆ ಕಡಿತ ಮತ್ತು ಸಂಗ್ರಹ ಖಾತೆ ನಂಬರ್‌) ಚಟುವಟಿಕೆಗಳನ್ನು ಒಂದುಗೂಡಿಸಲಾಗುತ್ತದೆ. ಇದರಿಂದ ಪ್ರಕ್ರಿಯೆಗಳು ಇನ್ನಷ್ಟು ಸರಳವಾಗಲಿವೆ.

ಕ್ಯು ಆರ್‌ ಕೋಡ್‌ ಬಳಕೆ ಏಕೆ?
ಸುಧಾರಿತ ಪ್ಯಾನ್‌ 2.0ನಲ್ಲಿ ಕ್ಯುಆರ್‌ ಕೋಡ್‌ ಅನ್ನು ಕಡ್ಡಾಯವಾಗಿ ವ್ಯವಸ್ಥೆ ಮಾಡಲಾಗಿದೆ. ಪ್ಯಾನ್‌ ಕಾರ್ಡ್‌ನ ಪೂರ್ಣ ವಿವರವನ್ನು ಈ ಕ್ಯುಆರ್‌ ಕೋಡ್‌ ದೃಢೀಕರಿಸುತ್ತದೆ. ಕ್ಯುಆರ್‌ ಕೋಡ್‌ ಅನ್ನು ಸ್ಕ್ಯಾನ್‌ ಮಾಡಿದಾಗ ಖಾತೆದಾರರ ಹೆಸರು, ಜನ್ಮದಿನಾಂಕ ಮತ್ತು ಭಾವಚಿತ್ರ ಸಹಿತ ಎಲ್ಲ ಸಮಗ್ರ ಮಾಹಿತಿಯನ್ನು ಒದಗಿಸುತ್ತದೆ. ಇದು ಪ್ಯಾನ್‌ನ ಸುರಕ್ಷತೆಯನ್ನು ಹೆಚ್ಚಿಸುತ್ತದೆ. ಇದರಿಂದ ವ್ಯವಸ್ಥೆಯನ್ನು ಏಕೀಕೃತಗೊಳಿಸಲು ಸಾಧ್ಯವಾಗುತ್ತದೆ. ಹಾಗಾಗಿ ಪ್ಯಾನ್‌ 2.0ನಲ್ಲಿ ಕ್ಯುಆರ್‌ ಕೋಡ್‌ ಬಳಸಲಾಗುತ್ತಿದೆ. ಹಾಗೆ ನೋಡಿದರೆ, 2017-18ರಿಂದ ವಿತರಿಸಲಾದ ಪ್ಯಾನ್‌ ಕಾರ್ಡ್‌ಗಳಲ್ಲಿ ಕ್ಯುಆರ್‌ ಕೋಡ್‌ ಇದೆ. ಅದಕ್ಕಿಂತ ಹಳೆಯ ಕಾರ್ಡ್‌ಗಳಲ್ಲಿ ಈ ವ್ಯವಸ್ಥೆ ಇಲ್ಲ. ಕ್ಯುಆರ್‌ ಕೋಡ್‌ ಇರುವ ಹಳೇ ಮಾದರಿಯ ಕಾರ್ಡ್‌ ಬೇಕಿದ್ದರೆ ಅರ್ಜಿ ಸಲ್ಲಿಸಬೇಕಾಗುತ್ತದೆ.

78 ಕೋಟಿ  ದೇಶದಲ್ಲಿರುವ ಒಟ್ಟು ಪ್ಯಾನ್‌ ಕಾರ್ಡ್‌ಗಳು
73.28 ಲಕ್ಷ ದೇಶದಲ್ಲಿರುವ ಒಟ್ಟು ತೆರಿಗೆ ಕಡಿತ ಕಾರ್ಡ್‌ಗಳು
1,435 ಕೋಟಿ ರೂ.ಪ್ಯಾನ್‌ 2.0 ಅಪ್‌ಗ್ರೇಡ್ ಗಾಗಿ ಸರಕಾರದ ವೆಚ್ಚ

ಮಲ್ಲಿಕಾರ್ಜುನ ತಿಪ್ಪಾರ

Advertisement

Udayavani is now on Telegram. Click here to join our channel and stay updated with the latest news.

Next