ನವದೆಹಲಿ: ಒಂದು ವೇಳೆ ನೀವು ಪಾನ್ ಕಾರ್ಡ್ ಹೊಂದಿದ್ದು, ಈವರೆಗೂ ಆಧಾರ್ ಜೊತೆ ಲಿಂಕ್ ಮಾಡದೇ ಇದ್ದರೇ ನಿಮಗೆ ಈ ಸುದ್ದಿ ತುಂಬಾನೇ ಮುಖ್ಯವಾದದ್ದು. ನಿಮ್ಮ ಪಾನ್ ಕಾರ್ಡ್ ಸಂಖ್ಯೆಯನ್ನು ಆಧಾರ್ ಜೊತೆ ಲಿಂಕ್ ಮಾಡಲು ವಿಫಲರಾದರೆ 2023ರ ಮಾರ್ಚ್ ಬಳಿಕ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳಲಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ (ಸಿಬಿಡಿಟಿ) ಮಂಡಳಿ ಸೋಮವಾರ (ನವೆಂಬರ್ 21) ತಿಳಿಸಿದೆ.
ಇದನ್ನೂ ಓದಿ:ಮೂರನೇ ಟಿ20 ಪಂದ್ಯಕ್ಕೆ ವಿಲಿಯಮ್ಸನ್ ಅಲಭ್ಯ; ಕಿವೀಸ್ ತಂಡಕ್ಕೆ ಸೌಥಿ ನಾಯಕ
ಇಲಾಖೆಯ ಅಧಿಸೂಚನೆ ಪ್ರಕಾರ, 2022ರ ಮಾರ್ಚ್ 31ರೊಳಗೆ ಪಾನ್ ಕಾರ್ಡ್ ಹೊಂದಿರುವವರು ಆಧಾರ್ ಜೊತೆ ಲಿಂಕ್ ಮಾಡಿರದಿದ್ದರೆ, 1,000 ರೂಪಾಯಿವರೆಗೆ ದಂಡ ತೆರಬೇಕಾಗಲಿದೆ. ಆದರೂ 2023ರ ಮಾರ್ಚ್ 31ರವರೆಗೆ ಪಾನ್ ಕಾರ್ಡ್ ಅನ್ನು ಬಳಸಲು ಅನುಮತಿ ನೀಡಲಾಗುತ್ತದೆ, ಒಂದು ವೇಳೆ ಲಿಂಕ್ ಮಾಡಲು ವಿಫಲರಾದರೆ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳಲಿದೆ ಎಂದು ಎಚ್ಚರಿಸಿದೆ.
ಒಂದು ವೇಳೆ ಪಾನ್ ಕಾರ್ಡ್ ನಿಷ್ಕ್ರಿಯಗೊಂಡರೆ, ಯಾವುದಕ್ಕೆಲ್ಲಾ ಪಾನ್ ಕಾರ್ಡ್ ಅಗತ್ಯವಿದೆಯೋ ಆಗ ನಿಮ್ಮ ಪಾನ್ ಕಾರ್ಡ್ ನಂಬರ್ ನ ಕಾರ್ಯನಿರ್ವಹಣೆ ಸ್ಥಗಿತಗೊಳ್ಳಲಿದೆ. ಬಳಿಕ ನಿಮ್ಮ ಪಾನ್ ಕಾರ್ಡ್ ಪುನಃ ನವೀಕರಿಸಲು ಆಧಾರ್ ಕೇಂದ್ರದಲ್ಲಿ ಮಾಹಿತಿ ನೀಡಿ, ನಿಗದಿಪಡಿಸಿದ ಶುಲ್ಕವನ್ನು ಪಾವತಿಸಿದ ನಂತರ ಪಾನ್ ಕಾರ್ಡ್ ಅನ್ನು ಸಕ್ರಿಯಗೊಳಿಸಬಹುದಾಗಿದೆ ಎಂದು ವರದಿ ವಿವರಿಸಿದೆ.
ಈಗಾಗಲೇ ಆದಾಯ ತೆರಿಗೆ ಇಲಾಖೆ ಪಾನ್ ಕಾರ್ಡ್ ಅನ್ನು ಆಧಾರ್ ಜೊತೆ ಲಿಂಕ್ ಮಾಡಲು ಹಲವು ಬಾರಿ ಅಂತಿಮ ದಿನಾಂಕವನ್ನು ವಿಸ್ತರಿಸಿತ್ತು. ಇದೀಗ ಪಾನ್, ಆಧಾರ್ ಲಿಂಕ್ ಮಾಡಲು 2023ರ ಮಾರ್ಚ್ 31 ಅಂತಿಮ ದಿನಾಂಕವಾಗಿರುತ್ತದೆ.