ಅಕ್ಕಿಆಲೂರು: ಕಿತ್ತು ತಿನ್ನುವ ಬಡತನ, ಸೂರು ಇಲ್ಲದೆ ಗುಡಿಸಿಲಲ್ಲಿಯೆ ಜೀವನ. ಬದುಕಿನ ಬಂಡಿ ನಡೆಸಲು ತಂದೆಯದದ್ದು ಸಣ್ಣದೊಂದು ಬೀಡಾ ಅಂಗಡಿ. ಶಾಲೆ ಬಿಟ್ಟ ನಂತರ ಇದೇ ಬೀಡಾ ಅಂಗಡಿಯಲ್ಲಿ ಕುಳಿತು ಓದಿದ ಸಿಂಧೂ ಹಾವೇರಿ ಗಳಿಸಿದ್ದು ಬರೋಬ್ಬರಿ ಶೇ. 98.72 ಅಂಕ. ಈ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಶೇಷಗಿರಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಸಿಂಧು ಹಾವೇರಿ ತನ್ನ ಊರು ಹೊಂಕಣದಿಂದ ಶೇಷಗಿರಿಗೆ 6 ಕಿಮೀ ನಿತ್ಯ ಸೈಕಲ್ನಲ್ಲಿ ಸಂಚರಿಸಿ ಶಾಲೆ ತಲುಪುತ್ತಿದ್ದಳು. ಹೊಂಕಣ ಗ್ರಾಮದ ಶಿರಸಿ-ಹರಿಹರ ರಾಜ್ಯ ಹೆದ್ದಾರಿಯ ಪಕ್ಕದ ಗುಡಿಸಲಲ್ಲಿ ವಾಸಿಸುವ ಬಸವರಾಜ ಹಾವೇರಿ ತಮ್ಮ ಗುಡಿಸಲು ಎದುರಿಗೆ ಒಂದು ಸಣ್ಣ ಹೋಟೆಲ್ ಮತ್ತು ಬೀಡಾ ಅಂಗಡಿ ನಡೆಸುತ್ತಾರೆ. ತಾಯಿ ರೇಣುಕಾ ದಿನಸಿ ಮಾಡಿದರೆ ತಂದೆ ದಿನಸಿಗಳನ್ನು ಮಾರಾಟ ಮಾಡಿ ಬಂದ ಪುಡಿಗಾಸಿನಲ್ಲಿಯೆ ಜೀವನ ನಡೆಸುತ್ತಾರೆ.
ಇಂತಹ ಕಡುಬಡತನದ ಕುಟುಂಬದಲ್ಲಿ ಯಾವ ವಿಶೇಷ ತರಬೇತಿ, ಟ್ಯೂಷನಗೆ ಹೋಗದೆ ಸಿಂಧು ಹಾವೇರಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ. ವಿಷಯ ತಿಳಿದು ಶಾಸಕ ಸಿ.ಎಂ. ಉದಾಸಿ ಹಾಗೂ ಹೊಂಕಣ ಗ್ರಾಮಸ್ಥರ ಪರವಾಗಿ ಪಿಡಿಒ ಶಿಲ್ಪಾ ಕೊಪ್ಪದ ವಿದ್ಯಾರ್ಥಿನಿ ಸಿಂಧು ಅವರ ಮನೆಗೆ ತೆರಳಿ ಸನ್ಮಾನಿಸಿ ಅಭಿನಂದಿಸಿದ್ದಾರೆ.
ಖಂಡಿತ ನಾನೇ ಶಾಲೆಗೆ ಮೊದಲು ಬರುತ್ತೇನೆ ಎಂಬ ವಿಶ್ವಾಸ ಇತ್ತು. ಅದಕ್ಕೆ ತಕ್ಕಂತೆ ಶಾಲೆಯಲ್ಲಿ ಹೇಳಿದ ಅಭ್ಯಾಸ ಗಮನವಿಟ್ಟು ಕೇಳಿ, ಮನೆಯಲ್ಲಿ ಮನನ ಮಾಡಿಕೊಳ್ಳುತ್ತಿದ್ದೆ. ಯಾವ ಟ್ಯೂಷನ್‌ಗೂ ಹೋಗಿಲ್ಲ. ಹೋಗುವ ಆರ್ಥಿಕ ಶಕ್ತಿಯೂ ನಮ್ಮ ಬಳಿ ಇರಲಿಲ್ಲ. ತಂದೆ-ತಾಯಿ ಆಶೀರ್ವಾದ, ಗುರುಗಳ ಮಾರ್ಗದರ್ಶನ ಮತ್ತು ನನ್ನ ಶ್ರಮಕ್ಕೆ ತಕ್ಕ ಪ್ರತಿಫಲ ದೊರತ್ತಿದೆ.
Advertisement
ಬಸವರಾಜ ಮತ್ತು ರೇಣುಕಾ ದಂಪತಿಯ ಮುದ್ದಿನ ಮಗಳು ಸಿಂಧು ಹಾವೇರಿ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಾಡಿರುವ ಸಾಧನೆ ಇಡೀ ಜಿಲ್ಲೆಯೇ ಅವಳತ್ತ ನೋಡುವಂಥ ಸಾಧನೆ ಮಾಡಿರುವುದು ಹೆತ್ತವರ ಹೃದಯದಲ್ಲಿ ಎಲ್ಲಿಲ್ಲದ ಸಂತಸ ಮೂಡಿದೆ. ಮಗಳ ಸಾಧನೆಯ ಮೊದಲ ಮೆಟ್ಟಿಲು ಭವ್ಯ ಭವಿಷ್ಯದ ಮೊಳಕೆ ಚಿಗುರೊಡೆದಿದೆ.
Related Articles
Advertisement
•ಸಿಂಧು ಹಾವೇರಿ, ವಿದ್ಯಾರ್ಥಿನಿ
ಶೈಕ್ಷಣಿಕವಾಗಿ ನಮ್ಮ ತಾಲೂಕಿನಲ್ಲಿ ಸಾಕಷ್ಟು ಪ್ರತಿಭೆಗಳು ತಮ್ಮ ಅಮೋಘ ಸಾಧನೆಯ ಮೂಲಕ ರಾಜ್ಯದ ಗಮನ ಸೆಳೆಯುತ್ತಿರುವುದು ಸಂತಸ ತಂದಿದೆ. ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡ ಸಿಂಧು ಹಾವೇರಿಯವರ ಸಾಧನೆ ನೂರಾರು ವಿದ್ಯಾರ್ಥಿಗಳಿಗೆ ಪ್ರೇರಣೆ. ಅವಳ ಭವಿಷ್ಯ ಉಜ್ವಲವಾಗಿ ದೇಶದ ಆಡಳಿತ ವ್ಯವಸ್ಥೆಯಲ್ಲಿ ಉನ್ನತ ಹುದ್ದೆ ಅಲಂಕರಿಸುವಂತಾಗಲಿ.
•ಸಿ.ಎಂ.ಉದಾಸಿ, ಶಾಸಕ