ನವದೆಹಲಿ : ನಿಮ್ಮ ಆಧಾರ್ ಕಾರ್ಡ್‍ಗೆ ಪಾನ್ ಕಾರ್ಡ್ ಲಿಂಕ್ ಮಾಡಲು ನೀಡಲಾಗಿದ್ದ ಗಡುವು ಇಂದಿಗೆ (ಮಾರ್ಚ್ 31) ಕೊನೆಗೊಳ್ಳಲಿದೆ. ಕೊನೆಯ ದಿನವಾದ ಇಂದು ಆಧಾರ್ ಕಾರ್ಡ್‍ಗೆ ಪಾನ್ ಕಾರ್ಡ್ ನಂಬರ್ ಲಿಂಕ್ ಮಾಡದೇ ಇದ್ದಲ್ಲಿ ನಾಳೆಯಿಂದ ( ಏಪ್ರಿಲ್ 1) ಪಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ.
ಹೌದು, ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಲಿಂಕ್ ಮಾಡಲು 2020 ಜೂನ್ 30 ಕೊನೆಯ ದಿನ ಎಂದು ಹೇಳಿತ್ತು. ಆದರೆ, ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆ ಈ ಕಾಲಾವಕಾಶ ಮಾರ್ಚ್ 31, 2021ರ ವರೆಗೆ ವಿಸ್ತರಿಸಿತ್ತು. ಈ ಹಿಂದೆ ಬರೊಬ್ಬರಿ 8 ಬಾರಿ ಡೆಡ್‍ಲೈನ್ ನಿಗದಿ ಮಾಡಲಾಗಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಪಾನ್ ಕಾರ್ಡ್‌ಗೆ ಆಧಾರ್ ಲಿಂಕ್ ಆಗದ ಕಾರಣ ಮತ್ತೆ ಅವಕಾಶ ಮಾಡಿಕೊಡಲಾಗಿತ್ತು. ಇಂದು ಕೊನೆಯ ದಿನವಾಗಿದ್ದು, ನೀವು ಆಧಾರ್ ಲಿಂಕ್ ಮಾಡಿಸದೇ ಇದ್ದರೆ ನಿಮ್ಮ ಪಾನ್ ಕಾರ್ಡ್ ಮುಂಬರುವ ತಿಂಗಳಿನಿಂದ ನಿಷ್ಕ್ರಿಯಗೊಳ್ಳಲಿದೆ ಎಂದು ಎಚ್ಚರಿಸಿದೆ.
ಆಧಾರ್ ಕಾರ್ಡ್ ಅನ್ನು ಪಾನ್ ಕಾರ್ಡ್ ಜತೆ ಲಿಂಕ್ ಮಾಡುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ನಿಮ್ಮ ಆಧಾರ್ ಹಾಗೂ ಪಾನ್ ಕಾರ್ಡ್ ಗೆ ಲಿಂಕ್ ಆಗದೆ ಇದ್ದರೆ ಇಂದೇ ಕೊನೆಯ ದಿನವಾಗಿದ್ದು, ತಡಮಾಡದೇ ಲಿಂಕ್ ಮಾಡಿಕೊಳ್ಳುವುದು ಉತ್ತಮ.
ಲಿಂಕ್ ಮಾಡದಿದ್ದರೆ ದಂಡ :
ಒಂದು ವೇಳೆ ಸರ್ಕಾರ ನೀಡಿರುವ ಗಡುವಿನ ಹೊರತಾಗಿಯೂ ಪಾನ್ ಕಾರ್ಡ್ ಲಿಂಕ್ ಮಾಡದೇ ಇದ್ದಲ್ಲಿ ಅಂತಹವರ ಮೇಲೆ ಆದಾಯ ತೆರಿಗೆಯ ಸೆಕ್ಷನ್ 272ಬಿ ನಡಿ 1000 ರೂ. ದಂಡದ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಹಾಗೂ ನಿಷ್ಕ್ರಿಯಗೊಂಡ ಪಾನ್ ಕಾರ್ಡ್‍ಗಳನ್ನು ಬಳಸುವುದು ಗಮನಕ್ಕೆ ಬಂದರೆ ದಂಡದ ಪ್ರಮಾಣ 10,000 ಕ್ಕೆ ಹೆಚ್ಚಬಹುದು.