Advertisement
ಪೋಸ್ನನ್ ಇದು ಪೋಲೆಂಡ್ (ಪೋಲಿಷ್ ಭಾಷೆಯಲ್ಲಿ “ಪೋಲ್ ಸ್ಕ’) ದೇಶದ ಪಶ್ಚಿಮ ಭಾಗದಲ್ಲಿ ವಾರ್ತ ನದಿಯ ದಡದಲ್ಲಿ ಇರುವ ಒಂದು ಹಳೆಯ ನಗರ. ಹತ್ತನೆಯ ಶತಮಾನದಲ್ಲಿ ಇದು ಸ್ಥಾಪನೆ ಆಯಿತು ಎನ್ನುವ ಉಲ್ಲೇಖ ಇದೆ. ಸುಮಾರು ಐದೂವರೆ ಲಕ್ಷ ಜನಸಂಖ್ಯೆ ಇರುವ ಪೋಸ್ನನ್ ನಗರ ಪ್ರಸಿದ್ಧ ಆಗಿರುವುದು ಇಲ್ಲಿನ ಹಳೆಯ ಕಾಲದ ಸುಂದರ ಕಟ್ಟಡಗಳಿಗಾಗಿ ಮತ್ತು ಉತ್ತಮ ವಿಶ್ವವಿದ್ಯಾನಿಲಯಗಳಿಗಾಗಿ. ಪೋಸ್ನನ್‌ನಲ್ಲಿ ಒಂಬತ್ತು ವಿಶ್ವವಿದ್ಯಾಲಯಗಳಿವೆ; ಖಾಸಗಿಯವು ಬೇರೆ ಇವೆ. ಇವುಗಳಲ್ಲಿ ಸುಮಾರು ಒಂದು ಲಕ್ಷ ನಲುವತ್ತು ಸಾವಿರ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ. ಅವುಗಳಲ್ಲಿ ಪ್ರಸಿದ್ಧವಾದುದು ಆದಮ್ ಮಿಕಿವಿಜ್ ವಿಶ್ವವಿದ್ಯಾನಿಲಯ. ಇದಕ್ಕೆ ಈಗ ನೂರು ವರ್ಷ ತುಂಬಿದ ಸಂಭ್ರಮ. ಪೋಲೆಂಡ್‌ನ ರಾಷ್ಟ್ರೀಯ ಕವಿ ಆದಮ್ ಮಿಕಿವಿಜ್ (Adam Mickiewicz) ನ ಹೆಸರನ್ನು ಈ ವಿವಿಗೆ ಇಡಲಾಗಿದೆ. ಆದಮ್ ಮಿಕಿವಿಜ್ (1798-1855) ಪೋಲಿಷ್ ಭಾಷೆಯ ಕವಿ, ನಾಟಕಕಾರ, ಪ್ರಬಂಧಕಾರ, ಅನುವಾದಕ, ಪ್ರಾಧ್ಯಾಪಕ ಆಗಿದ್ದುದರ ಜೊತೆಗೆ ರಾಜಕೀಯ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದವರು.
Related Articles
ಪಂಪನು ತನ್ನ ವಿಕ್ರಮಾರ್ಜುನ ವಿಜಯ ಕಾವ್ಯದಲ್ಲಿ ಕಥೆಯ ನಾಯಕನಾದ ಅರ್ಜುನನನ್ನು ತನ್ನ ಆಶ್ರಯದಾತನಾದ ಅರಿಕೇಸರಿಯೊಡನೆ ಸಮೀಕರಿಸಿ ಸಂಕಥನವನ್ನು ಕಟ್ಟಿದ್ದು ಮಾತ್ರವಲ್ಲದೆ, ತನ್ನ ಕೃತಿಯನ್ನು “ಇತಿಹಾಸ ಕಥೆ’ ಎಂದು ಕರೆಯುತ್ತಾನೆ. ಅಲ್ಲಿ “ಇತಿಹಾಸ’ವೂ ಇದೆ, “ಕಥೆ’ಯೂ ಇದೆ. ಪಂಪನು ತನ್ನ ಆದಿಪುರಾಣ ಕಾವ್ಯವನ್ನು ಆದಿತೀರ್ಥೇಶ್ವರನ ಚರಿತ ಎಂದು ಕರೆಯುತ್ತಾನೆ. ಪಂಪನ ಬಳಿಕದ ಅನೇಕ ಜೈನ ಕವಿಗಳು ತಮ್ಮ ಪುರಾಣಕಾವ್ಯಗಳನ್ನು ಚರಿತಪುರಾಣ ಎಂದು ಕರೆದರು. ಚರಿತ, ಚಾರಿತ್ರ, ಇತಿಹಾಸ ಮತ್ತು ಕಥೆ- ಒಂದರೊಡನೆ ಇನ್ನೊಂದು ಸೇರಿಕೊಂಡು ಚಾರಿತ್ರಿಕ ಸಂಕಥನ ಆಗುತ್ತದೆ.
Advertisement
ಪೋಲೆಂಡ್ ದೇಶದ ಎರಡನೆಯ ಅತಿ ದೊಡ್ಡ ನಗರ ಮತ್ತು ಹಿಂದಿನ ರಾಜಧಾನಿ ಕ್ರಾಕೊ. ಶೈಕ್ಷಣಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ಕಲಾತ್ಮಕ ಬದುಕಿನ ನಗರ ಕ್ರಾಕೊ ಯುರೋಪಿನ ಅತ್ಯಂತ ಸುಂದರ ನಗರಗಳಲ್ಲಿ ಒಂದು. ಕಲಾತ್ಮಕ ಪರಂಪರೆಯ ವೈವಿಧ್ಯಮಯ ಸುಂದರ ಕಟ್ಟಡಗಳ ನಗರ ಕ್ರಾಕೊದ ಹಳೆಯ ಪಟ್ಟಣವನ್ನು ಯುನೆಸ್ಕೋ ಜಾಗತಿಕ ಪರಂಪರೆಯ ತಾಣವಾಗಿ ಗುರುತಿಸಿದೆ. ಕ್ರಾಕೊದ ಯಾಗಿಯೆಲ್ಲೋನಿಯನ್ (Jagiellonian )ವಿಶ್ವವಿದ್ಯಾಲಯ ಜಗತ್ತಿನ ಪ್ರಾಚೀನ ವಿವಿಗಳಲ್ಲಿ ಪ್ರಮುಖವಾದುದು. (ಸ್ಥಾಪನೆ: 1364). ಈ ವಿಶ್ವವಿದ್ಯಾಲಯದ ಓರಿಯಂಟಲ್ ಅಧ್ಯಯನ ಸಂಸ್ಥೆಯ ಭಾಗವಾಗಿ ಇರುವ ಇಂಡಾಲಜಿ ವಿಭಾಗದಲ್ಲಿ ಪ್ರಾಧ್ಯಾಪಕಿ ಪ್ರೊ. ಲಿಡಿಯಾ ಸುದಿಕ. ಇವರು ನಮ್ಮನ್ನು ಪೋಸ್ನನ್‌ನಿಂದ ಕ್ರಾಕೊಗೆ ತಮ್ಮ ಸಂಸ್ಥೆಗೆ ಆಹ್ವಾನಿಸಿ, ಉಪನ್ಯಾಸಗಳನ್ನು ಕೊಡಲು ಕೇಳಿಕೊಂಡರು. ಕಳೆದ ವಾರ ಕ್ರಾಕೊದಲ್ಲಿ ನಾನು ಕೊಟ್ಟ ಉಪನ್ಯಾಸ ಪಂಪನ ಕಾವ್ಯಗಳಲ್ಲಿ ಲೌಕಿಕ ಮತ್ತು ಧರ್ಮದ ಪರಿಕಲ್ಪನೆಗಳ ಭಿನ್ನತೆ ಹಾಗೂ ಮಿಶ್ರಣ. ಸುಮಾರು ಐವತ್ತು ವಿದ್ಯಾರ್ಥಿಗಳು ಮತ್ತು ಕೆಲವು ಪ್ರಾಧ್ಯಾಪಕರು ಇದ್ದ ಸಭೆಯಲ್ಲಿ ಎಲ್ಲರಿಗೂ ಇಂಗ್ಲಿಷ್ ಅರ್ಥವಾಗುತ್ತಿತ್ತು. ಆದರೂ ಪವರ್ ಪಾಯಿಂಟ್‌ನೂ° ಬಳಸಿದೆ. ಅಲ್ಲಿ ಇದ್ದ ಯಾರಿಗೂ ಕನ್ನಡ ಭಾಷೆ ಸಾಹಿತ್ಯದ ಪರಿಚಯ ಇರಲಿಲ್ಲ. ಹಾಗಾಗಿ, ಜರ್ಮನಿ ಗಿಂತ ಭಿನ್ನವಾಗಿ ಕನ್ನಡ ಕರ್ನಾಟಕದ ಪರಿಚಯ ಮಾಡಿ,
ವಿಷಯ ಪ್ರವೇಶ ಮಾಡಿದೆ. ವಿಶೇಷವೆಂದರೆ, ಪೋಲಿಷ್ ವಿದ್ಯಾರ್ಥಿಗಳು ನನ್ನ ಉಪನ್ಯಾಸ ಆಲಿ ಸಿದ ಬಳಿಕ ಆಸಕ್ತಿದಾಯಕ ಪ್ರಶ್ನೆಗಳನ್ನು ಕೇಳಿದ್ದು. “ಕರ್ನಾಟಕಕ್ಕೆ ಬನ್ನಿ’ ಎಂದು ಆ ವಿದ್ಯಾರ್ಥಿಗಳನ್ನು ನಾನು ಆಹ್ವಾನಿಸಿದಾಗ, ಅವರ ನಗುಮುಖ ಕಂಡಾಗ ಪಂಪನ ಬನವಾಸಿ ನೆನಪಾಯಿತು. ಅಕ್ಕರದ ಗೊಟ್ಟಿಯಲ್ಲಿ ಪೋಲೆಂಡ್‌ನ ವಿದ್ಯಾರ್ಥಿ ಗಳ ನಡುವೆ ಪಂಪ ನಗುತ್ತಿದ್ದ. ಆರಂಕುಶಮಿಟ್ಟೊಡಮ್ ನೆನೆವುದೆನ್ನ ಮನಂ…
ಬಿ. ಎ. ವಿವೇಕ ರೈ