ಅಹ್ಮದಾಬಾದ್: ರೈಡಿಂಗ್ ಮತ್ತು ಟ್ಯಾಕಲ್ ಎರಡರಲ್ಲಿಯೂ ಭರ್ಜರಿ ಪ್ರದರ್ಶನ ನೀಡಿದ ಪುನೇರಿ ಪಲ್ಟಾನ್ ತಂಡ 5ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಬೆಂಗಾಲ್ ವಾರಿಯರ್ ವಿರುದ್ಧ 34-17ರಿಂದ ಜಯ ದಾಖಲಿಸಿದೆ. ಹಿಂದಿನ ಪಂದ್ಯದಲ್ಲಿ ಜೈಪುರ ವಿರುದ್ಧ ಸೋತ ಪುನೇರಿ ಮತ್ತೆ ಗೆಲುವಿನ ಹಳಿಗೆ ಮರಳಿದೆ. ದ್ವಿತೀಯ ಪಂದ್ಯದಲ್ಲಿ ಆತಿಥೇಯ ಗುಜರಾತ್ 27-24 ಅಂತರದಿಂದ ಬೆಂಗಳೂರು ಬುಲ್ಸ್ ತಂಡವನ್ನು ಮಣಿಸಿತು.
“ಟ್ರಾನ್ಸ್ ಸ್ಟೇಡಿಯಾ ಅರೆನಾ ಒಳಾಂಗಣ ಕ್ರೀಡಾಂಗಣ’ದಲ್ಲಿ ಪುನೇರಿ ಪಲ್ಟಾನ್ ಮತ್ತು ಬೆಂಗಾಲ್ ವಾರಿಯರ್ ನಡುವೆ ನಡೆದ ಪಂದ್ಯ ಅತ್ಯಂತ ರೋಚಕವಾಗಿತ್ತು. ಕನ್ನಡಿಗ ಬಿ.ಸಿ.ರಮೇಶ್ ಮಾರ್ಗ ದರ್ಶನದಲ್ಲಿ ಪಳಗಿದ ಪುನೇರಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಪಂದ್ಯವನ್ನು ಭಾರೀ ಅಂತರದಲ್ಲಿ ವಶಪಡಿಸಿಕೊಂಡಿತು.
ಪಂದ್ಯ ಆರಂಭವಾಗಿ 8ನೇ ನಿಮಿಷದ ಅಂತ್ಯಕ್ಕೆ ಉಭಯ ತಂಡಗಳು 5-5 ಸಮಬಲದಲ್ಲಿದ್ದವು. ಅನಂತರ ಹಂತಹಂತವಾಗಿ ಪುನೇರಿ ಮೇಲುಗೈ ಸಾಧಿಸಿತು. ಬೆಂಗಾಲ್ ತಂಡದ ಸ್ಟಾರ್ ಆಟಗಾರ ಜಾಂಗ್ ಕುನ್ ಲೀ ರೈಡಿಂಗ್‌ನಲ್ಲಿ ವೈಫಲ್ಯ ಎದುರಿಸಿದ್ದು, ಆ ತಂಡದ ಹಿನ್ನಡೆಗೆ ಕಾರಣವಾಯಿತು. 15ನೇ ನಿಮಿಷದಲ್ಲಿ ಬೆಂಗಾಲ್ ಅಂಕಣದಲ್ಲಿ ಇಬ್ಬರು ಮಾತ್ರ ಇದ್ದರು. ಈ ಹಂತದಲ್ಲಿ ರೈಡಿಂಗ್‌ಗೆ ಹೋದ ಪುನೇರಿ ತಂಡದ ಸಂದೀಪ್ ನರ್ವಾಲ್ ಇಬ್ಬರನ್ನು ಔಟ್ ಮಾಡಿ ಮರಳಿದರು. ಹೀಗಾಗಿ 15ನೇ ನಿಮಿಷದಲ್ಲಿ ಬೆಂಗಾಲ್ ಮೊದಲ ಬಾರಿಗೆ ಆಲೌಟ್‌ಗೆ ತುತ್ತಾಯಿತು. ಈ ಹಂತದಲ್ಲಿ ಪುನೇರಿ 12-5 ರಿಂದ ಭಾರೀ ಮುನ್ನಡೆ ಪಡೆದುಕೊಂಡಿತ್ತು.
ಅನಂತರ ಕೂಡ ಪುನೇರಿ ತನ್ನ ದಾಳಿ ಮತ್ತು ರಕ್ಷಣಾ ವಿಭಾಗವನ್ನು ಬಿಗಿಗೊಳಿಸಿಕೊಂಡಿತು. ಒಮ್ಮೆ ಪುನೇರಿಯ ದೀಪಕ್ ಸೂಪರ್ ಟ್ಯಾಕಲ್‌ನಲ್ಲಿ ಸಿಕ್ಕಿಬಿದ್ದರು. ಹೀಗಾಗಿ ಮೊದಲ ಅವಧಿಯ ಅಂತ್ಯದಲ್ಲಿ ಪುನೇರಿಯ ಅಂಕಗಳ ಮುನ್ನಡೆ (17-10) ಸ್ವಲ್ಪ ಕುಗ್ಗಿತು.
ಮೊದಲ ಅವಧಿಯ ಮುನ್ನಡೆಯ ಹುಮ್ಮಸ್ಸಿನಲ್ಲಿದ್ದ ಪುನೇರಿ ಇಲ್ಲಿಯೂ ತನ್ನ ಪರಾಕ್ರಮವನ್ನು ಮುಂದುವರಿಸಿತು. ಇದರಿಂದಾಗಿ 25ನೇ ನಿಮಿಷದಲ್ಲಿ ಬೆಂಗಾಲ್ ಮತ್ತೂಮ್ಮೆ ಆಲೌಟ್ ಆಯಿತು. ಈ ಹಂತದಲ್ಲಿ ಪುನೇರಿ 24-11ರಿಂದ ಮುನ್ನಡೆ ಪಡೆದಿತ್ತು. ಅಂತಿಮವಾಗಿ ಬೆಂಗಾಲ್ ತಂಡವನ್ನು ಭಾರೀ ಅಂತರದಲ್ಲಿ ಸೋಲಿಸುವಲ್ಲಿ ಪುನೇರಿ ಯಶಸ್ವಿಯಾಯಿತು. ಪುನೇರಿ ಪರ ಸಂದೀಪ್ ನರ್ವಾಲ್ 7 ಅಂಕ, ಜಿ.ಬಿ.ಮೋರೆ 6 ಅಂಕ ಸಂಪಾದಿಸಿದರು, ಬೆಂಗಾಲ್ ಪರ ರಾಣ್ ಸಿಂಗ್ 7 ಅಂಕ ಪಡೆದರೆ, ತಾರಾ ಆಟಗಾರ ಕುನ್ ಲೀ ಕೇವಲ 1 ಅಂಕ ಪಡೆದರು.
ಕಬಡ್ಡಿ ಅಂಕಣದಲ್ಲಿ ಸ್ವಾತಂತ್ರ್ಯೋತ್ಸವ
ಅಹ್ಮದಾಬಾದ್‌ನಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಅಂಕಣದಲ್ಲಿ 71ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಬಾಲಿವುಡ್ ನಟ ಸಿದ್ಧಾರ್ಥ ಮಲ್ಹೋತ್ರಾ ರಾಷ್ಟ್ರಗೀತೆಯನ್ನು ಹಾಡುವ ಮೂಲಕ ಪಂದ್ಯಕ್ಕೆ ಚಾಲನೆ ನೀಡಿದರು. ಬಾಲಿವುಡ್ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಆಗಮಿಸಿ ಪಂದ್ಯ ವೀಕ್ಷಿಸಿದರು. ಅನಂತರ ಇಬ್ಬರೂ ಸ್ವಲ್ಪ ಸಮಯ ವೀಕ್ಷಕ ವಿವರಣೆ ನೀಡಿ ತೆರಳಿದರು.