Advertisement
ಕಡಬ ಹಾಗೂ ಎಡಮಂಗಲ ಗ್ರಾಮಗಳನ್ನು ಬೆಸೆಯುವ ಈ ಸೇತುವೆ ಕಾಮಗಾರಿ ಕಳೆದ ನವೆಂಬರ್‌ನಿಂದ ಪ್ರಾರಂಭಗೊಂಡಿದ್ದು, ಸೇತುವೆಯ ಪಿಲ್ಲರ್‌ನ ಅಡಿಪಾಯ ಸೇರಿದಂತೆ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದೆ. ಇದೇ ವರ್ಷದ ಕೊನೆಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಇರಿಸಿಕೊಳ್ಳಲಾಗಿದೆ.
ದಾನಿಗಳ ಆರ್ಥಿಕ ನೆರವಿನಿಂದ ಎಡಮಂಗಲ ಹಾಗೂ ಪಿಜಕಳ ಪರಿಸರದ ಜನರ ಶ್ರಮದಾನದ ಫಲವಾಗಿ ಕಳೆದ ಕೆಲವು ವರ್ಷಗಳಿಂದ ಊರವರೇ ಸೇರಿಕೊಂಡು ಶ್ರಮದಾನದ ಮೂಲಕ ಇಲ್ಲಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಿ ಬೇಸಗೆಯಲ್ಲಿ ವಾಹನ ಸಂಚರಿಸಲು ವ್ಯವಸ್ಥೆ ಮಾಡಿಕೊಂಡಿದ್ದರು. ಕಡಬ ತಾಲೂಕಿಗೆ ಎಡಮಂಗಲ, ಎಣ್ಮೂರು, ದೋಳ್ಪಾಡಿ, ಚಾರ್ವಾಕ ಹಾಗೂ ಕಾಣಿಯೂರು ಗ್ರಾಮಗಳು ಸೇರ್ಪಡೆಯಾಗಿದ್ದು, ತಾಲೂಕು ಕೇಂದ್ರ ಕಡಬವನ್ನು ಸಂಪರ್ಕಿಸಲು ಪಾಲೋಳಿ ಮಾರ್ಗ ಅತ್ಯಂತ ಹತ್ತಿರದ ದಾರಿಯಾಗಿದೆ. ಹಾಗಾಗಿ ಪಾಲೋಳಿಯಲ್ಲಿ ಶಾಶ್ವತ ಸೇತುವೆ ನಿರ್ಮಾಣವಾಗಬೇಕು ಎಂಬ ಬೇಡಿಕೆ ಇಲ್ಲಿನವರದಾಗಿದ್ದು, ಸದ್ಯ ಕನಸು ಸಾಕಾರಗೊಳ್ಳುವ ಹಂತದಲ್ಲಿದೆ.
Related Articles
ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಎಸ್. ಅಂಗಾರ ಅವರು ಲೋಕೋಪಯೋಗಿ ಇಲಾಖೆ ಮುಖಾಂತರ ಪಾಲೋಳಿ ಸೇತುವೆ ನಿರ್ಮಾಣಕ್ಕೆ 19.68 ಕೋಟಿ ರೂ. ಅನುದಾನ ಮಂಜೂರುಗೊಳಿಸಿ 4 ತಿಂಗಳ ಹಿಂದೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದರು. 175 ಮೀ. ಉದ್ದ ಹಾಗೂ 12 ಮೀ. ಅಗಲದಲ್ಲಿ (ಒಂದು ಬದಿಯಲ್ಲಿ ಫುಟ್‌ಪಾತ್ ಸೇರಿದಂತೆ) ಸೇತುವೆ ನಿರ್ಮಾಣವಾಗಲಿದೆ. ಸೇತುವೆಯ ಎಡಮಂಗಲ ಭಾಗದಲ್ಲಿನ 675 ಮೀ. ಸಂಪರ್ಕದ ಕಚ್ಚಾ ರಸ್ತೆಯನ್ನು ಕಾಂಕ್ರೀಟ್ ರಸ್ತೆಯಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಎಡಮಂಗಲ ಭಾಗದ ಸಂಪರ್ಕ ರಸ್ತೆ (150 ಮೀ.) ಹಾಗೂ ಪಿಜಕಳ ಭಾಗದ ಸಂಪರ್ಕ ರಸ್ತೆ (100 ಮೀ.) ಗಳನ್ನೂ ಕಾಂಕ್ರೀಟ್ ಹಾಸಿ ಅಭಿವೃದ್ಧಿಪಡಿಸುವ ಕೆಲಸ ನಡೆಯಲಿದೆ.
Advertisement
ಬಹುತೇಕ ಬೇಡಿಕೆ ಈಡೇರಿಸಲಾಗಿದೆ ಸುಳ್ಯ ವಿಧಾನಸಭಾ ಕ್ಷೇತ್ರದ ಬಹುತೇಕ ಸೇತುವೆಗಳ ಬೇಡಿಕೆಗಳನ್ನು ಈಡೇರಿಸಲಾಗಿದೆ. ಪಾಲೋಳಿ ಹಾಗೂ ಕೋರಿಯಾರ್ ಸೇತುವೆ ನಿರ್ಮಾಣಕ್ಕೆ ಜನರ ಬೇಡಿಕೆ ಇತ್ತು. ಆ ಪೈಕಿ ಪಾಲೋಳಿ ಸೇತುವೆಗೆ ಅನುದಾನ ಒದಗಿಸಿಕೊಟ್ಟು ಕಾಮಗಾರಿ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೋರಿಯಾರ್ ಸೇತುವೆಗೂ ಅನುದಾನ ಒದಗಿಸಲಾಗುವುದು.
-ಎಸ್. ಅಂಗಾರ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರು