Advertisement

ಗಮನ ಸೆಳೆಯಲಿದೆ ಪಲಿಮಾರು ಪುರಪ್ರವೇಶ “ಮೆರವಣಿಗೆ’

03:24 PM Jan 01, 2018 | Team Udayavani |

ಉಡುಪಿ: ಜ. 18ರಂದು ಪರ್ಯಾಯ ಪೀಠಾರೋಹಣ ಮಾಡಲಿರುವ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಜ. 3ರಂದು ಪುರಪ್ರವೇಶ ಮಾಡಲಿದ್ದು, ಪುರಪ್ರವೇಶದ ಮರವಣಿಗೆ ಅದ್ದೂರಿಯಾಗಿ ನಡೆಯಲಿದೆ. ಅಂದು 3.30ಕ್ಕೆ ನಗರದ ಜೋಡುಕಟ್ಟೆ ರಸ್ತೆಯಿಂದ ಮೆರವಣಿಗೆ ಪ್ರಾರಂಭವಾಗಲಿದೆ. ದೇಶದ ವಿವಿಧ ರಾಜ್ಯಗಳ ಜಾನಪದ ಕಲಾ ತಂಡಗಳ ಭಾಗವಹಿಸುವಿಕೆ ಮೆರವಣಿಗೆಗೆ ವಿಶೇಷ ಮೆರುಗು ನೀಡಲಿದೆ.

Advertisement

ಮೆರವಣಿಗೆ ಸಾಗಿಬರುವ ಮುಂಭಾಗದಲ್ಲಿ ಬಂಗಾರದ ಪಲ್ಲಕಿ, ಅದರ ಹಿಂದಿನಿಂದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರನ್ನು ಕುಳ್ಳಿರಿಸಿ ಕರೆದುಕೊಂಡು ಬರುವ ಸಿಂಗಾರದ ರಥ ಸಾಗಿಬರಲಿದೆ. ಜತೆಗೆ ಅನೇಕ ಕಲಾಪ್ರಕಾರಗಳು, 500 ಮಂದಿ ಗಣ್ಯರು ಹಾಗೂ 15ರಿಂದ 20 ಸಾವಿರ ಮಂದಿ ಜನರು ಮೆರವಣಿಗೆಯಲ್ಲಿ ಸಾಗಿಬರಲಿದ್ದಾರೆ. 

ಜೋಡುಕಟ್ಟೆಯಿಂದ ಪ್ರಾರಂಭವಾದ ಮೆರವಣಿಗೆ ಡಯಾನ ಸರ್ಕಲ್‌, ಕೆ.ಎಂ. ಮಾರ್ಗ, ಸಂಸ್ಕೃತ ಕಾಲೇಜು, ಕನಕದಾಸ ರಸ್ತೆಯ ಮೂಲಕ ರಥಬೀದಿಗೆ ಸಾಗಿಬರಲಿದೆ. ಅನಂತರ ಸಂಜೆ 6.35ರ ವೇಳೆಗೆ ಶ್ರೀಗಳು ಪುರಪ್ರವೇಶ ಮಾಡಲಿದ್ದಾರೆ.  

3,000 ಕಲಾವಿದರು 75 ಕಲಾ ತಂಡಗಳು 
ದೇಶದ ವಿವಿಧ ರಾಜ್ಯಗಳ ಸುಮಾರು 3,000 ಮಂದಿ ಕಲಾವಿದರ ಕಲಾ ಪ್ರೌಢಿಮೆ ಮೆರವಣಿಗೆಯಲ್ಲಿ ಪ್ರಸ್ತುತಗೊಳ್ಳಲಿದೆ. 75 ಜಾನಪದ ಕಲಾ ತಂಡಗಳ 75 ನಮೂನೆಯ ಕಲಾಪ್ರಕಾರಗಳು ಪ್ರದರ್ಶನಗೊಳ್ಳಲಿದೆ. ತುಳುನಾಡಿನ ಅನೇಕ ಕಲಾವಿದರು ಸಹಿತ ದೇಶದ ಮೂಲೆಮೂಲೆಯ ಕಲಾತಂಡಗಳ ಕಲಾವಿದರು ಹಾಗೂ ಮಣಿಪುರ, ಶ್ರೀಲಂಕಾದ ಕಲಾವಿದರೂ ಭಾಗವಹಿಸಲಿದ್ದಾರೆ. ಮೂಡಬಿದಿರೆಯ ಆಳ್ವಾಸ್‌ ಸಂಸ್ಥೆಯ ಡಾ| ಎಂ. ಮೋಹನ್‌ ಆಳ್ವ ಅವರ ನೇತೃತ್ವದಲ್ಲಿ ಈ ಅದ್ದೂರಿ ಮೆರವಣಿಗೆ ನಡೆಯಲಿದೆ. 

ಪ್ರದರ್ಶನಗೊಳ್ಳಲಿರುವ ಪ್ರಮುಖ ಕಲಾಪ್ರಕಾರಗಳು
ನಂದಿಧ್ವಜ, ಪಕ್ಕಿನಿಶಾನೆ, ಶಂಖ- ಕೊಂಬು, ನಾದಸ್ವರ, ಶಿಲ್ಪಗೊಂಬೆ, ಸೃಷ್ಟಿಗೊಂಬೆ ಬಳಗ, ಚಿಲಿಪಿಲಿ ಗೊಂಬೆ, 32 ತಟ್ಟಿರಾಯ, ಹುಲಿ ವೇಷ ಕುಣಿತ, ನಗಾರಿ, ಹೊನ್ನಾವರ ಹಾಗೂ ಚಿತ್ರದುರ್ಗದ ಬ್ಯಾಂಡ್‌ಸೆಟ್‌, ವೀರಭದ್ರ ಕುಣಿತ, ಪೂಜಾ ಕುಣಿತ, ಮರಗಾಲು, ಕೇರಳದ ದೇವರ ವೇಷ, ಅರ್ಧನಾರೀಶ್ವರ, ಕುಂದಾಪುರದ ಕೊರಗರ ಡೋಲು, ಕೊಂಚಾಡಿ ಚೆಂಡೆ, ಮಹಿಳಾ ಚೆಂಡೆ, ಕೇರಳದ ಚೆಂಡೆ, ಸಿಂಗಾರಿ ಮೇಳ, ಪಂಚವಾದ್ಯ, ತಯ್ಯಂ, ಜಗ್ಗಳಿಕೆ ಮೇಳ, ಸುರತ್ಕಲ್‌ನ ಮುಸಲ್ಮಾನರ ದಪ್ಪು, ಡೊಳ್ಳು ಕುಣಿತ, ತುಳುನಾಡ ವಾದ್ಯ, ಲಂಬಾಣಿ, ಭಜನ ತಂಡಗಳು, ಉತ್ತರ ಕರ್ನಾಟಕದ ಹಗಲು ವೇಷ ಮೊದಲಾದ ಕಲಾ-ಸಾಂಸ್ಕೃತಿಕ ವೈಭವ ಮೆರವಣಿಗೆಯಲ್ಲಿರಲಿದೆ. 

Advertisement

ಪ್ರತಿಯೊಬ್ಬರು ನೋಡಬೇಕಾದುದು
2ನೇ ಬಾರಿಗೆ ಪರ್ಯಾಯ ಸ್ವೀಕಾರ ಮಾಡಲಿರುವ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ದೇಶಾದ್ಯಂತ ಸಂಚರಿಸಿ ಪುರಪ್ರವೇಶ ಮಾಡುವಾಗ ಅವರನ್ನು ಅದ್ದೂರಿಯಾಗಿ ಸ್ವಾಗತಿಸುವುದು ನಮ್ಮೆಲ್ಲರ ಕರ್ತವ್ಯ. ಹೀಗಾಗಿ ಶ್ರೀಗಳ ಸ್ವಾಗತದ ಸಂದರ್ಭ ಮೆರವಣಿಗೆಯಲ್ಲಿ ಮನೋರಂಜನೆ ಹೆಚ್ಚಿಸಲು ಸಾಂಸ್ಕೃತಿಕ ತಂಡಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಮ್ಮ ದೇಶದ ಕಲೆ, ಸಂಪ್ರದಾಯ, ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹ ಸಾಂಸ್ಕೃತಿಕ ಕಲಾ ತಂಡಗಳು ಭಾಗವಹಿಸಲಿವೆೆ. ಶಾಲಾ ಮಕ್ಕಳು ಸಹಿತ ವಯೋವೃದ್ಧರು ಕೂಡ ಈ ಕಲಾ ಪ್ರಕಾರಗಳನ್ನು ನೋಡಬೇಕು. ಇದು ಮನೋರಂಜನೆಯ ಜತೆಗೆ ತಿಳಿವಳಿಕೆ ನೀಡಲಿದೆ. 
ಡಾ| ಎಂ. ಮೋಹನ್‌ ಆಳ್ವ, ಮೆರವಣಿಗೆಯ ಉಸ್ತುವಾರಿ

ಜಿವೇಂದ್ರ ಶೆಟ್ಟಿ 

Advertisement

Udayavani is now on Telegram. Click here to join our channel and stay updated with the latest news.

Next