ಗ್ರಾಮಭಾರತದ ಇಂದಿನ ಚಿತ್ರಣ ಹಿಂದಿನಂತಿಲ್ಲ. ಬದಲಾವಣೆಗೆ ಪಕ್ಕಾದ ಆಧುನಿಕ ಬದುಕಿನಂತೆಯೇ ಭಾರತದ ಹಳ್ಳಿಗಳ ಬಾಳೂ ಹೊಸ ಹೊಸ ಗಾಳಿಗೆ ತೆರೆದುಕೊಂಡಿದೆ. “ಹೊಸ ಗಾಳಿ’ ಎಂಬುದನ್ನು ನಾವು ಆಧುನಿಕತೆ ಎಂದೂ ಕರೆಯುವ ಸ್ಥಿತಿಯಲ್ಲಿ ಈಗ ಇಲ್ಲ. ಯಾಕೆಂದರೆ ಅಲ್ಲಿದ್ದ ಹಳೆಯ ವಿಚಾರಗಳು, ನಡಾವಳಿಗಳು, ಗ್ರಾಮೀಣರ ಬದುಕು, ಮೌಡ್ಯಗಳು ಕಂಡೂ ಕಾಣದಂತಿದ್ದರೂ ಪಳೆಯುಳಿಕೆಗಳಂತೆಯೇ ಕಣ್ಣಮುಂದಿನ ಊರ “ಮಾರಿ’ಹಬ್ಬಗಳಂತೆಯೇ ಉಳಿದುಕೊಂಡು ಬಂದಿವೆ.
ಪ್ರಜಾಪ್ರಭುತ್ವದ ಮಹತ್ವದ ಬದಲಾವಣೆಗಳನ್ನು ಇಂಡಿಯಾದ ಗ್ರಾಮ ಸಮಾಜ ಕಂಡಿದ್ದರೂ ಇಂದಿಗೂ ಹಳ್ಳಿಗಳನ್ನು ಭೂತ ಕಾಲದ ಭ್ರೂಣಗಳಂತೆ ಹಳೆಯ ಸಂಪ್ರದಾಯಗಳೇ ಆಳುತ್ತಿರುವುದು ಸುಳ್ಳಲ್ಲ. ಅಕ್ಷರಲೋಕವನ್ನು ಕಣ್ಣೆದುರಿಗೆ ಕಂಡಿದ್ದರೂ ನಮ್ಮ ಹಳ್ಳಿಗರು ಮುಗ್ಧರಂತೆಯೂ ಶೋಷಿತರಂತೆಯೂ ಅಥವಾ ಇವೆರಡನ್ನೂ ಒಟ್ಟಿಗೆ ಅನುಭವಿಸುತ್ತಿರುವ ಪಾತ್ರಗಳಂತೆಯೂ ಬದುಕುತ್ತಿರುವುದನ್ನು ಈಗಲೂ ನಮ್ಮ ಸುತ್ತಮುತ್ತಲಿನ ಸಾವಿರಾರು ಊರುಗಳಲ್ಲಿ ಕಾಣಬಹುದು.
ಹಳ್ಳಿಗಳಲ್ಲಿ ಶೋಷಣೆ ಎಂಬುದು ಶೋಷಣೆಯಂತೆ ಕಾಣುತ್ತಿಲ್ಲ. ಮೌಡ್ಯವೆಂಬುದು ಆಚರಣೆಯಂತೆಯೂ, ನಂಬಿಕೆ ಎಂಬುದು ಗುಲಾಮಗಿರಿಯಂತೆಯೂ ಒಟ್ಟೊಟ್ಟಿಗೆ ಆಳುತ್ತಿರುವ ತಲ್ಲಣಗಳು ಈಗಲೂ ಹಳ್ಳಿಗಳ ಕರುಳನ್ನು ಹಿಂಡುತ್ತಿವೆ. ಹಾಗೆಂದು ಇಲ್ಲಿ ನೋವೆಂಬುದು ಎಲ್ಲವೂ ಆಗಿಲ್ಲ. ಹಳ್ಳಿಯ ಒಡಬಾಳಿನ ಉಲ್ಲಾಸದ ಕ್ಷಣಗಳು, ನಲಿವಿನ ಗಳಿಗೆಗಳು ಎಲ್ಲವೂ ಮಿಳಿತಗೊಂಡಿವೆ. ಅದರ ನಡುವೆಯೂ ಗ್ರಾಮ ಸಮಾಜದ ಜೀವಗಳನ್ನು ಇಟ್ಟಾಡಿಸುವ, ತಟ್ಟಾಡಿಸುವ ಹತ್ತಾರು ಪಲ್ಲಟಗಳು, ಇವೇ ಮುಂತಾದ ವಿಚಾರಗಳನ್ನು ಚರ್ಚಿಸುವ “ಪಲ್ಲಟ’ ಸಿನಿಮಾ ಪ್ರದರ್ಶನ ಏರ್ಪಾಡಾಗಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಆಶ್ರಯದಲ್ಲಿ ಪ್ರದರ್ಶನ ನಡೆಯುತ್ತಿದೆ. ಚಿತ್ರದ ನಿರ್ದೇಶಕ ರಘು ಎಸ್. ಪಿ ಮತ್ತು ತಂಡದ ಕೆಲವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಯಾವಾಗ?: ಮಾರ್ಚ್ 18. ಸಂಜೆ 4.
ಎಲ್ಲಿ?: ಚಾಮುಂಡೇಶ್ವರಿ ಸ್ಟುಡಿಯೊ, ಮಿಲ್ಲರ್ ರಸ್ತೆ