ಪುಣೆ: ಮುಂದಿನ ಜನವರಿಯಲ್ಲಿ ಪರ್ಯಾಯ ಪೀಠವನ್ನು ಅಲಂಕರಿಸಲಿರುವ ಉಡುಪಿಯ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಪುಣೆಯ ಕಾತ್ರಜ್ ಶ್ರೀ ಅಯ್ಯಪ್ಪ ಮಂದಿರಕ್ಕೆ ಭೇಟಿ ನೀಡಿದರು.
ಪೂಜ್ಯ ಸ್ವಾಮೀಜಿಯವರ ಪರ್ಯಾಯ ಪೂರ್ವಭಾವಿ ಸಂಚಾರ ನಿಮಿತ್ತ ಪುಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಶ್ರೀಗಳು ಪುಣೆಯ ತುಳು ಕನ್ನಡಿಗರ ಧಾರ್ಮಿಕ ಕ್ಷೇತ್ರ ಕಾತ್ರಜ್ ಶ್ರೀ ಅಯ್ಯಪ್ಪ ಮಂದಿರದಲ್ಲಿ ಸಾರ್ವಜನಿಕ ಸಮ್ಮಾನ ಸ್ವೀಕರಿಸಿದರು. ಪೂಜ್ಯ ಸ್ವಾಮೀಜಿಯವರನ್ನು ಮಂದಿರದ ಪ್ರಧಾನ ಅರ್ಚಕ ಹರೀಶ್ ಭಟ್, ವಿಶ್ವಸ್ತ ಮಂಡಳಿಯ ಅಧ್ಯಕ್ಷ ಸುಭಾಷ್ ಶೆಟ್ಟಿ ಮತ್ತು ಪದಾಧಿಕಾರಿಗಳು ಸ್ವಾಗತಿಸಿದರು.
ಶ್ರೀಗಳು ಮಂದಿರದ ಆರಾಧ್ಯ ದೇವರಿಗೆ ಪೂಜೆ ಸಲ್ಲಿಸಿ, ಪ್ರಾರ್ಥನೆಗೈದರು. ಶ್ರೀ ಅಯ್ಯಪ್ಪ ವಿಶ್ವಸ್ತ ಮಂಡಳಿ, ಕಾರ್ಯಕಾರಿ ಸಮಿತಿ ಮತ್ತು ಮಹಿಳಾ ಸಮಿತಿ ಮತ್ತು ಭಕ್ತರ ಪರವಾಗಿ ಸಾರ್ವಜನಿಕವಾಗಿ ಶ್ರೀಗಳಿಗೆ ಫಲಪುಷ್ಪ$ ಅರ್ಪಿಸಿ ವಂದನೆ ಸಲ್ಲಿಸಿದರು.
ಸಮ್ಮಾನ ಸ್ವೀಕರಿಸಿದ ಶ್ರೀಗಳು ಸೇರಿದ ಭಗವದ್ಭಕ್ತರನ್ನು ಉದ್ದೇಶಿಸಿ ದ್ವಿತೀಯ ಬಾರಿಗೆ ಉಡುಪಿ ಶ್ರೀ ಕೃಷ್ಣನ ಪೂಜಾ ಸೇವೆ ಮಾಡುವ ಅವಕಾಶ ಒದಗಿ ಬಂದಿದೆ. ಈ ಶುಭ ಸಂದರ್ಭದಲ್ಲಿ ಪರ್ಯಾಯ ಮಹೋತ್ಸವವು ನಡೆಯಲಿದ್ದು ಈ ಶುಭ ಕಾಲದಲ್ಲೀ ಪುಣೆಯ ಭಕ್ತರೆಲ್ಲರೂ ಉಪಸ್ಥಿತರಿದ್ದು ಶ್ರೀ ಕೃಷ್ಣನ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿ ಭಕ್ತಾದಿಗಳನ್ನು ಆಶೀರ್ವದಿಸಿದರು. ಶ್ರೀ ಅಯ್ಯಪ್ಪ ಸೇವಾ ಸಂಘ ವಿಶ್ವಸ್ತ ಮಂಡಳಿಯ ಕಾರ್ಯದರ್ಶಿ ರಘುರಾಮ್ ರೈ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಚಿತ್ರ-ವರದಿ: ಹರೀಶ್ ಮೂಡಬಿದ್ರಿ ಪುಣೆ.