ಮುಂಬಯಿ: ಅಂಧೇರಿ ಪಶ್ಚಿಮದ ಇರ್ಲಾದ ಶ್ರೀ ಅದಮಾರು ಮಠದ ಮುಂಬಯಿ ಶಾಖೆಯಲ್ಲಿ ತ್ರಿದಿವಸ ವಾಸ್ತವ್ಯಕ್ಕಾಗಿ ಗುರುವಾರ ಮುಂಜಾನೆ ಉಡುಪಿ ಪರ್ಯಾಯ ಪೂರ್ವಭಾವೀ ಸಂಚಾರ ನಿಮಿತ್ತ ಮುಂಬಯಿಯಲ್ಲಿರುವ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಆಗಮಿಸಿ ಆಶೀರ್ವದಿಸಿದರು.
ಅದಮಾರು ಮಠ ಮುಂಬಯಿ ಶಾಖಾ ದಿವಾನ ಲಕ್ಷ್ಮೀನಾರಾಯಣ ಮುಚ್ಚಿಂತ್ತಾಯ ಮತ್ತು ಲಕ್ಷ್ಮೀ ಎಲ್. ಮುಚ್ಚಿಂತ್ತಾಯ ಹಾಗೂ ಮಠದ ವ್ಯವಸ್ಥಾಪಕ ಪಡುಬಿದ್ರಿ ವಿ. ರಾಜೇಶ್ ಮತ್ತು ವಾಣಿ ಆರ್. ರಾವ್ ದಂಪತಿಗಳು ಶ್ರೀಗಳನ್ನು ಧಾರ್ಮಿಕ ಮತ್ತು ಸಾಂಪ್ರದಾಯಿಕ ರೀತಿಯಲ್ಲಿ ಶ್ರದ್ಧಾಭಕ್ತಿಪೂರ್ವಕವಾಗಿ ಸ್ವಾಗತಿಸಿ ಅದಮಾರು ಮಠದ ವತಿಯಿಂದ ಪಾದಪೂಜೆಗೈದರು.
ಮಧ್ಯಾಹ್ನ ಪಟ್ಟದ ಶ್ರೀ ರಾಮಚಂದ್ರ ದೇವರ ಮಹಾಪೂಜೆ ನೆರವೇರಿಸಿದ ಬಳಿಕ ಶ್ರೀಪಾದರ ಪಾದಪೂಜೆ ನಡೆಸಲಾಯಿತು. ವಿದ್ವಾನ್ ಕುತ್ಯಾರು ಗಿರೀಶ ಉಪಾಧ್ಯಾಯ ಅವರು ಪೂಜೆ ನೆರವೇರಿಸಿದರು. ಶ್ರೀ ವಿದ್ಯಾಧೀಶತೀರ್ಥರು ಶ್ರೀಗಳು ಸಂಜೆ ಭಾಗವತ ಪ್ರವಚನ ನಡೆಸಿ ಭಕ್ತರನ್ನು ಅನುಗ್ರಹಿಸಿದರು.
ಈ ಸಂದರ್ಭದಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಪೇಜಾವರ ಮಠದ ಕಾರ್ಯನಿರತ ಅಧ್ಯಕ್ಷ ಡಾ| ಸುರೇಶ್ ಎಸ್. ರಾವ್. ಕಟೀಲು, ವಿಜಯಲಕ್ಷ್ಮೀ ಎಸ್. ರಾವ್, ಮದ್ಭಾರತ ಮಂಡಳಿಯ ಜಗನ್ನಾಥ ಪುತ್ರನ್, ಜಗನ್ನಾಥ ಕಾಂಚನ್, ಸುಧೀರ್ ಆರ್. ಎಲ್. ಭಟ್, ವಿದ್ವಾನ್ ವಾಸುದೇವ ಉಡುಪ, ಶ್ರೀಕರ ಭಟ್ ಎಲ್ಲಾರೆ, ಗುರುರಾಜ ಉಪಾಧ್ಯಾಯ ಮೀರಾರೋಡ್, ಮಾಳ ಶ್ರೀನಿವಾಸ ಭಟ್, ಗೋಪಾಲ ಭಟ್, ಗುರುರಾಜ್ ಭಟ್, ಎಸ್. ಎನ್. ಉಡುಪ, ಗೋಪಾಲ ಶೆಟ್ಟಿ, ನಿರ್ಮಲಾ ಶಿವತ್ತಾಯ, ಮಾ| ಶ್ರೀಷ ಆರ್. ರಾವ್ ಮತ್ತಿತರ ಗಣ್ಯರು ಪ್ರಮುಖರಾಗಿ ಉಪಸ್ಥಿತರಿದ್ದರು.
ಅ.12-14ರ ವರೆಗೆ ಪಲಿಮಾರು ಶ್ರೀಗಳು ಅಂಧೇರಿ ಪಶ್ಚಿಮದ ಎಸ್. ವಿ. ರೋಡ್‌ನ ಇರ್ಲಾದ ಉಡುಪಿ ಶ್ರೀ ಅದಮಾರು ಮಠ ಮುಂಬಯಿ ಶಾಖೆಯಲ್ಲಿ ಮೊಕ್ಕಂ ಹೂಡಲಿದ್ದು, ದಿನಂಪ್ರತಿ ಬೆಳಗ್ಗೆ ಶ್ರೀಪಾದರ ಪಾದಪೂಜೆ, ಮಧ್ಯಾಹ್ನ ಪಟ್ಟದ ಶ್ರೀ ರಾಮಚಂದ್ರ ದೇವರ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಭಾಗವತ ಪ್ರವಚನ, ರಾತ್ರಿ ಪೂಜೆ ನಡೆಯಲಿದೆ. ಭಕ್ತರು ಆಗಮಿಸಿ ಶ್ರೀಪಾದರಿಂದ ಮಂತ್ರಾಕ್ಷತೆ ಸ್ವೀಕರಿಸಿ ಶ್ರೀದೇವರ ಅನುಗ್ರಹಕ್ಕೆ ಪಾತ್ರರಾಗುವಂತೆ ಪ್ರಬಂಧಕ ಪಡುಬಿದ್ರಿ ರಾಜೇಶ್ ರಾವ್ ತಿಳಿಸಿದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್