Advertisement

ಪಾಲಿಕೆಗೆ 50 ಸಾವಿರ ರೂ. ದಂಡ

12:47 PM Feb 24, 2018 | Team Udayavani |

ಬೆಂಗಳೂರು: ವಾರ್ಡ್‌ ಸಮಿತಿ ಸಭೆಗಳನ್ನು ನಡೆಸಲು ಹಾಗೂ ಘನತ್ಯಾಜ್ಯ ನಿರ್ವಹಣೆಗೆ ಕ್ರಮ ಕೈಗೊಳ್ಳಲು ವಿಫ‌ಲವಾಗಿರುವ ಬಿಬಿಎಂಪಿ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್‌, ಬಿಬಿಎಂಪಿಗೆ 50 ಸಾವಿರ ರೂ. ದಂಡ ವಿಧಿಸಿ ಶುಕ್ರವಾರ ಆದೇಶಿಸಿದೆ.

Advertisement

ಘನತ್ಯಾಜ್ಯ ನಿರ್ವಹಣೆ, ವಾರ್ಡ್‌ ಕಮಿಟಿ ರಚನೆ ಸಂಬಂಧ ಸಲ್ಲಿಕೆಯಾಗಿರುವ ರಿಟ್‌ ಅರ್ಜಿಗಳ ವಿಚಾರಣೆಯನ್ನು ಮಂಗಳವಾರ ನಡೆಸಿದ ನ್ಯಾ.ಬಿ.ಎಸ್‌. ಪಾಟೀಲ್‌ ಹಾಗೂ ನ್ಯಾ. ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ, ಈ ಆದೇಶ ನೀಡಿತು.

ನಗರದ ಎಲ್ಲ ವಾರ್ಡ್‌ ಸಮಿತಿಗಳು ತಿಂಗಳಿಗೊಂದು ಸಭೆ ನಡೆಸಬೇಕು. ಘನತ್ಯಾಜ್ಯ ನಿರ್ವಹಣೆಗೆ ಹೆಚ್ಚುವರಿ ಸ್ಥಳ ಗುರುತಿಸಿ, ಕ್ರಿಯಾಯೋಜನೆ ರೂಪಿಸಬೇಕು. ಆಯಾ ವಾರ್ಡ್‌ ವ್ಯಾಪ್ತಿಯಲ್ಲಿ ಜನರೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ಈ ಹಿಂದೆ ನೀಡಿದ್ದ ಆದೇಶ ಪಾಲನೆಯಾಗಿಲ್ಲ ಎಂದು ಅರ್ಜಿದಾರರ ಪರ ವಕೀಲರು ದೂರಿದರು.

ಆಯುಕ್ತರಿಗೆ ಎಚ್ಚರಿಕೆ: 130 ವಾರ್ಡ್‌ ಸಮಿತಿಗಳು ನ್ಯಾಯಾಲಯದ ಆದೇಶ ಉಲ್ಲಂ ಸಿರುವುದನ್ನು ಖಚಿತಪಡಿಸಿಕೊಂಡ ನ್ಯಾಯಪೀಠ, ತೀವ್ರ ತರಾಟೆ ತೆಗೆದುಕೊಂಡಿತು. ನ್ಯಾಯಾಲಯದ ಆದೇಶಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದಾದರೆ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಬೇಕಾಗುತ್ತದೆ.

ಆದೇಶ ಉಲ್ಲಂ ಸಿರುವ ವಾರ್ಡ್‌ ಸಮಿತಿ ಅಧಿಕಾರಿಗಳು, ಜಂಟಿ ಆಯುಕ್ತರು, ವಾರ್ಡ್‌ ಸಮಿತಿಯಲ್ಲಿರುವ ಜನಪ್ರತಿನಿಧಿಗಳ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳದಿದ್ದರೆ ಪಾಲಿಕೆ ಆಯುಕ್ತರ ವಿರುದ್ಧವೇ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತು.

Advertisement

ಆದೇಶ ಉಲ್ಲಂಘನೆ ಸಂಬಂಧ ಬಿಬಿಎಂಪಿ ಆಯುಕ್ತರು 50 ಸಾವಿರ ರೂ. ದಂಡವನ್ನು ಹೈಕೋರ್ಟ್‌ ರಿಜಿಸ್ಟ್ರಾರ್‌ ಬಳಿ ಠೇವಣಿಯಿಡಬೇಕು. ತಪ್ಪಿತಸ್ಥರ ವಿರುದ್ಧ ಕೈಗೊಂಡಿರುವ ಕ್ರಮಗಳು ಹಾಗೂ ವಾರ್ಡ್‌ ಸಮಿತಿಗಳ ಕಾರ್ಯನಿರ್ವಹಣೆ ಕುರಿತು ಮುಂದಿನ ವಿಚಾರಣೆ ವೇಳೆ ವರದಿ ಸಹಿತ ಅಫಿಡವಿಟ್‌ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಮಾ.28ಕ್ಕೆ ಮುಂದೂಡಿತು.

ಕಾನೂನು ಉಲ್ಲಂ ಸುವವರೇ ತುಂಬಿದ್ದಾರೆ!: ನಗರದ 198 ವಾರ್ಡ್‌ಗಳ ಪೈಕಿ 68 ವಾರ್ಡ್‌ ಸಮಿತಿಗಳು ಸಭೆ ನಡೆಸಿ ಕ್ರಿಯಾ ಯೋಜನೆ ಸಿದ್ಧಪಡಿಸಿವೆ. ಈ ಪೈಕಿ 64 ಸಮಿತಿಗಳ ವರದಿಗಳು ಅಪೂರ್ಣವಾಗಿದ್ದು, 4 ವಾರ್ಡ್‌ಗಳಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಸ್ಥಳಾವಕಾಶ ಸಿಗುತ್ತಿಲ್ಲ. ಇನ್ನು 130 ವಾರ್ಡ್‌ ಸಮಿತಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.

ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ಕಸದ ಸಮಸ್ಯೆಯಿಂದ ನಾಗರಿಕರಿಗಾಗುವ ತೊಂದರೆ ತಪ್ಪಿಸಲು ಕೋರ್ಟ್‌ ಕೂಡ ಪ್ರಮಾಣಿಕ ಪ್ರಯತ್ನ ಮಾಡುತ್ತಿದೆ. ಆದರೆ ಬಿಬಿಎಂಪಿಯಿಂದ ಸ್ಪಂದನೆಯೇ ಇಲ್ಲ. ಕೋರ್ಟ್‌ ಆದೇಶಗಳನ್ನು ಉಲ್ಲಂ ಸುವ ವರ್ತನೆ ಸಹಿಸಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು. ಹಾಗೇ ಬೆಂಗಳೂರಲ್ಲಿ ಕಾನೂನು ಉಲ್ಲಂ ಸುವವರೇ ತುಂಬಿಹೋಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿತು.

Advertisement

Udayavani is now on Telegram. Click here to join our channel and stay updated with the latest news.

Next