Advertisement
ಬೆಂಗಳೂರು: ಬಿಬಿಎಂಪಿಗೆ ಸೇರ್ಪಡೆಗೊಂಡ 110 ಹಳ್ಳಿಗಳಲ್ಲಿ ಉತ್ತರದ ಕಟ್ಟಕಡೆಯ ಊರು ನಾಗೇನಹಳ್ಳಿ. ಈ ಗ್ರಾಮಸ್ಥರಿಗೆ ಕಾವೇರಿ ನೀರು ಇನ್ನೂ ಕನಸಾಗಿಯೇ ಉಳಿದಿದೆ. ಗ್ರಾಮದಲ್ಲಿ ಸುಮಾರು ಹದಿನೈದು ಸರ್ಕಾರಿ ಕೊಳವೆಬಾವಿಗಳಿದ್ದು, ಆ ಪೈಕಿ ಹತ್ತು ಬತ್ತಿಹೋಗಿವೆ. ಹೆಚ್ಚಾ-ಕಡಿಮೆ 1,200 ಅಡಿ ಆಳದಿಂದ ಬರುವ ನೀರು ಕುಡಿಯಲು ಎಷ್ಟು ಯೋಗ್ಯ ಎನ್ನುವುದಕ್ಕೆ ಯಾವುದೇ ಮಾನದಂಡ ಇಲ್ಲ. ಆ ನೀರು ಬಿಟ್ಟರೆ ಅಲ್ಲಿಯವರಿಗೆ ಬೇರೆ ಗತಿಯೂ ಇಲ್ಲ!
Related Articles
Advertisement
ಪಾಲಿಕೆಗೆ ಹೊಸದಾಗಿ ಸೇರ್ಪಡೆಗೊಂಡ ಹಳ್ಳಿಗಳ ಪೈಕಿ ಕೆಲವೆಡೆ ಈ ಮೊದಲು ವಾರಕ್ಕೆ ಎರಡು ಬಾರಿ ನೀರು ಬರುತ್ತಿತ್ತು. ಈಗ ವಾರಕ್ಕೊಮ್ಮೆ ಬರುತ್ತಿದೆ. ಸ್ವಂತ ಕೊಳವೆಬಾವಿಗಳಿದ್ದರೂ, ಬಹುತೇಕ ಕಡೆಗಳಲ್ಲಿ ನೀರಿನ ಇಳುವರಿ ಕಡಿಮೆಯಾಗಿದೆ. ಶಾಸಕರು ಮತ್ತು ಸಂಸದರ ಅನುದಾನದಲ್ಲಿ ಕೊರೆಸಿದ್ದ ಬೋರ್‌ವೆಲ್‌ಗಳಲ್ಲಿ ಕೆಲವು ದುರಸ್ತಿಗೊಂಡಿದ್ದರೆ, ಇನ್ನು ಹಲವು ಬತ್ತಿಹೋಗಿವೆ. ಇದು ಕೊಳವೆಬಾವಿಗಳ ಮೇಲಿನ ಅತಿಯಾದ ಅವಲಂಬನೆಯನ್ನು ಸೂಚಿಸುತ್ತವೆ.
ಹಣ ಕಟ್ಟಿದವರಿಗೆ ಮಾತ್ರ ನೀರು!: ಇನ್ನು ಯಲಹಂಕದ ಅಟ್ಟೂರು ಲೇಔಟ್‌ನ ನಿವಾಸಿಗಳಿಗೆ ಕಾವೇರಿ ನೀರು ಸಂಪರ್ಕ ಕಲ್ಪಿಸಲಾಗಿದೆ. ಆದರೆ, ಕಾವೇರಿ ಹರಿಯುವುದು ಹಣ ಪಾವತಿಸಿದ ಮನೆಗಳಿಗೆ ಮಾತ್ರ. ಲೇಔಟ್‌ನ ನೂರಾರು ಮನೆಗಳಿಗೆ ಹೊಸದಾಗಿ ಕಾವೇರಿ ಸಂಪರ್ಕ ಕೊಟ್ಟಿದ್ದಾರೆ. ಮೀಟರ್ ಅಳವಡಿಕೆ ಆಗಿಲ್ಲ. ಇದಕ್ಕಾಗಿ 8 ಸಾವಿರ ರೂ. ಕಟ್ಟಬೇಕು. ಹಣ ಕೊಟ್ಟ ಮನೆಗಳಿಗಷ್ಟೇ ವಾರಕ್ಕೊಮ್ಮೆ ಕಾವೇರಿ ನೀರು ಬರುತ್ತಿದೆ. ಉಳಿದವರು ಬೆಳಗ್ಗೆ ಎದ್ದ ತಕ್ಷಣ ಸರ್ಕಾರಿ ಕೊಳಾಯಿಗಳ ಮುಂದೆ “ಕ್ಯೂ’ ನಿಲ್ಲುವುದು ಅನಿವಾರ್ಯ ಎಂದು ಅಲ್ಲಿನ ನಿವಾಸಿ ಲಲಿತಾ ತಿಳಿಸುತ್ತಾರೆ.
ಅನಂತಪುರ, ರಾಚೇನಹಳ್ಳಿ, ದೊಡ್ಡಬೊಮ್ಮಸಂದ್ರ, ದಾಸರಹಳ್ಳಿ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಕಾವೇರಿ ನೀರು ಮರೀಚಿಕೆ. ವಾರಕ್ಕೊಮ್ಮೆ ಅಥವಾ ಎರಡು ಬಾರಿ ಕೊಳವೆಬಾವಿಗಳಿಂದ ನೀರು ಬರುತ್ತದೆ. ಆದ್ದರಿಂದ ಇಲ್ಲಿ ಸಾಮಾನ್ಯ ಜನ ಬೇಸಿಗೆ ಬರುತ್ತಿದ್ದಂತೆ ನೀರನ್ನು ಹಣದಂತೆ ಖರ್ಚು ಮಾಡುತ್ತಾರೆ. ಉಳ್ಳವರು ಟ್ಯಾಂಕರ್‌ಗಳ ಮೊರೆಹೋಗುತ್ತಾರೆ. ಟ್ಯಾಂಕರ್ ಬೆಲೆ 250 ರಿಂದ 300 ರೂ. ಇದೆ.
ನೀರಿನ ನಿಯಮಿತ ಪರೀಕ್ಷೆ ಮಾಡುತ್ತಿದ್ದೇವೆ ಪಾಲಿಕೆಗೆ ಸೇರ್ಪಡೆಗೊಂಡ 110 ಹಳ್ಳಿಗಳಿಗೆ ಕೊಳವೆಬಾವಿಗಳೊಂದೇ ನೀರಿನ ಮೂಲ. ಒಂದು ವೇಳೆ ಬೋರ್‌ವೆಲ್‌ಗಳೂ ಕೈಕೊಟ್ಟರೆ, ಅಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲು ಸೂಚಿಸಲಾಗಿದೆ. ಅಲ್ಲದೆ, ಅನಿವಾರ್ಯ ಇರುವ ಕಡೆಗಳಲ್ಲಿ ಹೊಸದಾಗಿ ಬೋರ್‌ವೆಲ್ ಕೊರೆಯಲಿಕ್ಕೂ ಸ್ಥಳೀಯ ಮಟ್ಟದಲ್ಲಿ ಸೂಚನೆ ನೀಡಲಾಗಿದೆ. ಇನ್ನು ಪ್ರಸ್ತುತ ಪೂರೈಕೆಯಾಗುತ್ತಿರುವ ಬೋರ್‌ವೆಲ್ ನೀರಿನ ಗುಣಮಟ್ಟವನ್ನೂ ನಿಯಮಿತವಾಗಿ ಅಧಿಕಾರಿಗಳು ಪರೀಕ್ಷೆಗೊಳಪಡಿಸುತ್ತಿದ್ದಾರೆ. ಹಾಗೊಂದು ವೇಳೆ ಫ್ಲೋರೈಡ್‌ಯುಕ್ತ ನೀರು ಬರುತ್ತಿದ್ದರೆ, ಸ್ಥಗಿತಗೊಳಿಸಲು ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಫ್ಲೋರೈಡ್ ನೀರು ಎಲ್ಲೆಲ್ಲಿ ಕಂಡುಬಂದಿದೆ ಎಂಬುದರ ಬಗ್ಗೆ ತಕ್ಷಣಕ್ಕೆ ಮಾಹಿತಿ ಇಲ್ಲ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಹೇಳಿದ್ದಾರೆ. ಇತ್ತೀಚೆಗಷ್ಟೇ ವಾರಕ್ಕೊಮ್ಮೆ ಕಾವೇರಿ ನೀರು ಬರುತ್ತಿದೆ. ಆದರೆ, ಯಾವಾಗ ಬಿಡುತ್ತಾರೆ ಎನ್ನುವುದೇ ಗೊತ್ತಿಲ್ಲ. ಎಲ್ಲರೂ ದುಡಿಯಲಿಕ್ಕೆ ಹೋದ ಸಮಯದಲ್ಲಿ ಅಂದರೆ 11ರ ನಂತರ ಕೆಲವೊಮ್ಮೆ ನೀರು ಬಿಡುತ್ತಾರೆ. ಇದು ಜಲಮಂಡಳಿಗೆ ನೀರು ಪೂರೈಸಿದ್ದೇವೆ ಎಂದಾಗುತ್ತದೆ. ಆದರೆ, ಜನರಿಗೆ ನೀರೂ ಸಿಗುವುದಿಲ್ಲ. ಮೀಟರ್ ಇಲ್ಲದವರಿಗಂತೂ ಅದೂ ಇಲ್ಲ.
-ಮುನಿಯಮ್ಮ, ಅಂಗನವಾಡಿ ಸಹಾಯಕಿ, ಅಟ್ಟೂರು ಲೇಔಟ್ ನಿವಾಸಿ. ಊರಲ್ಲಿ 14-15 ಸರ್ಕಾರಿ ಬೋರ್‌ವೆಲ್‌ಗಳಿವೆ. ಅದರಲ್ಲಿ 10ರಲ್ಲಿ ನೀರೇ ಬರುತ್ತಿಲ್ಲ. ಕಾವೇರಿ ಭಾಗ್ಯವಂತೂ ನಮಗಿಲ್ಲ. ಇರುವ ಬೋರ್‌ವೆಲ್‌ಗಳಿಂದ ವಾರಕ್ಕೊಮ್ಮೆ ನೀರು ಬರುತ್ತದೆ. ಅದೇ ನಮ್ಮ ಪುಣ್ಯ. ಅದೂ ಯಾವಾಗ ನಿಲ್ಲುತ್ತದೋ ಗೊತ್ತಿಲ್ಲ.
-ಸತೀಶ್, ನಾಗೇನಹಳ್ಳಿ. ಮಧ್ಯರಾತ್ರಿ 1ರವರೆಗೆ ನೀರಿಗಾಗಿ ಕಾಯಬೇಕು. ಬೆಳಗ್ಗೆಯಿಂದ ಸಂಜೆವರೆಗೆ ದುಡಿದು ಸಾಕಾಗಿರುತ್ತದೆ. ಮತ್ತೆ ಮನೆಗೆ ಹೋಗಿ ನೀರಿಗಾಗಿ ಜಾಗರಣೆ ಮಾಡಬೇಕು. ಹಾಗಾಗಿ, ಸಂಪುಗಳಿಗೆ ಬಿದ್ದ ನೀರನ್ನೇ ಕುಡಿಯಬೇಕಾದ ಅನಿವಾರ್ಯತೆ ಇದೆ.
-ಮಹೇಶ್, ಜಕ್ಕೂರು ನಿವಾಸಿ. ಸಮಸ್ಯೆ ಎಲ್ಲೆಲ್ಲಿ?
* ನಾಗೇನಹಳ್ಳಿ, ದೊಡ್ಡಬೊಮ್ಮಸಂದ್ರ, ದಾಸರಹಳ್ಳಿ, ಅಟ್ಟೂರು ಲೇಔಟ್, ಜಕ್ಕೂರು, ಸೇರಿದಂತೆ ಬಿಬಿಎಂಪಿಗೆ ಸೇರ್ಪಡೆಯಾಗಿದ್ದು 110 ಹಳ್ಳಿಗಳು
* ಇಲ್ಲಿ ಕಾವೇರಿ ಸಂಪರ್ಕ ಇಲ್ಲ; ಕೊಳವೆಬಾವಿಗಳೇ ಜಲಮೂಲ
* 1500 ಈ ಭಾಗದಲ್ಲಿರುವ ಸರ್ಕಾರಿ ಬೋರ್‌ವೆಲ್‌ಗಳು
* 1000-3000 ಅಡಿ ಈ ಭಾಗದ ಅಂತರ್ಜಲಮಟ್ಟ * ವಿಜಯಕುಮಾರ್ ಚಂದರಗಿ