ಮುಂಬಯಿ: ದಿನದಿಂದ ದಿನಕ್ಕೆ ರಂಗೇರುತ್ತಿರುವ ಪಾಲ್ಘರ್ ಲೋಕಸಭಾ ಉಪಚುನಾವಣೆಯು ಬಿಜೆಪಿ ಮತ್ತು ಶಿವಸೇನೆಗೆ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ.
ಒಂದು ಕಡೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಶಿವಸೇನೆಯು ಮಿತ್ರದ್ರೋಹ ಎಸಗಿದೆ ಎಂದು ಹೇಳಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಕೆಂಗಣ್ಣಿಗೆ ತುತ್ತಾದರೆ, ಇನ್ನೊಂದೆಡೆ ಉತ್ತರ ಪ್ರದೇಶದವರೇ ಹೆಚ್ಚಾಗಿ ನೆಲೆಸಿರುವ ಪಾಲ್ಘರ್ ಕ್ಷೇತ್ರಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಬಿಜೆಪಿ ಬುಧವಾರ ಚುನಾವಣಾ ಪ್ರಚಾರಕ್ಕೆ ಆಹ್ವಾನಿಸಿದೆ.
ಬುಧವಾರ ಯೋಗಿ ಅದಿತ್ಯನಾಥ್ ಅವರು ವಿರಾರ್ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ನಲಸೋಪರದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪಾಲ^ರ್ ಲೋಕಸಭಾ ಉಪಚುನಾವಣೆಯ ಸೋಲು-ಗೆಲುವಿನಲ್ಲಿ ಇಲ್ಲಿ ನೆಲೆಕಂಡಿರುವ ಉತ್ತರ ಭಾರತೀಯರ ಪಾತ್ರ ಮಹತ್ವದ್ದಾಗಿದೆ. ಈ ಕಾರಣದಿಂದ ಉತ್ತರ ಭಾರತೀಯರ ಮತಗಳನ್ನು ಸೆಳೆಯಲು ಬಿಜೆಪಿಯು ಯೋಗಿ ಆದಿತ್ಯಾನಾಥ್ ಅವರನ್ನು ಪ್ರಚಾರ ಕಣಕ್ಕಿಳಿಸಲು ಮುಂದಾಗಿದೆ. ಬಿಜೆಪಿ ಸಂಸದ ಚಿಂತಾಮಣ್ ವನಗಾ ಅವರ ನಿಧನದಿಂದ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಶಿವಸೇನೆಯಿಂದ ಶ್ರೀನಿವಾಸ ವನಗಾ ಮತ್ತು ಬಿಜೆಪಿಯಿಂದ ರಾಜೇಂದ್ರ ಗಾವಿತ್ ಅವರು ಕಣದಲ್ಲಿದ್ದಾರೆ.
ಈ ಚುನಾವಣೆಯಲ್ಲಿ ಉತ್ತರ ಭಾರತೀಯರ ಮತಗಳೇ ನಿರ್ಣಾಯಕ ಪಾತ್ರ ವಹಿಸಲಿವೆ ಎಂದು ಬಿಜೆಪಿ ಉತ್ತರ ಭಾರತೀಯ ಮೋರ್ಚಾದ ಅಧ್ಯಕ್ಷ ಜೆಪಿ ಠಾಕೂರ್ ಅವರು ತಿಳಿಸಿದ್ದಾರೆ. ಯೋಗಿ ಅವರ ಆಗಮನದಿಂದ ಉತ್ತರ ಭಾರತೀಯರು ಬಿಜೆಪಿ ಕಡೆಗೆ ಒಲವು ತೋರಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಯೋಗಿ ಆದಿತ್ಯನಾಥ್ ಅವರ ಆಗಮನದಿಂದ ಬಿಜೆಪಿ ಪರಿಸ್ಥಿತಿ ಮತ್ತಷ್ಟು ಬಲಿಷ್ಠಗೊಳ್ಳಲಿದೆ ಎಂದು ಮುಂಬಯಿ ಬಿಜೆಪಿಯ ನಾಯಕ ಅಮರ್‌ಜಿತ್ ಮಿಶ್ರಾ ತಿಳಿಸಿದ್ದಾರೆ. ಯೋಗಿ ರ್ಯಾಲಿಯು ವಿರಾರ್ ಜೀವದಾನಿ ಮಂದಿರ ಸಮೀಪದ ಮನ್ವೆಲ್ ಪಾಡಾದಲ್ಲಿ ಸಂಜೆ ಪ್ರಾರಂಭಗೊಳ್ಳಲಿದೆ.