Advertisement

ಅರಮನೆ ಚಿನ್ನಲೇಪಿತ ಪೇಂಟಿಂಗ್‌ ವಿವಾದ: ಸರ್ಕಾರಕ್ಕೆ ನೋಟಿಸ್‌

10:03 AM Sep 19, 2017 | |

ಬೆಂಗಳೂರು: ಮೈಸೂರು ಅರಮನೆಯ ದರ್ಬಾರ್‌ ಹಾಲ್‌, ಕಂಬಗಳು ಸೇರಿ ಇನ್ನಿತರೆ ಅತ್ಯಮೂಲ್ಯ ಪರಿಕರಗಳಿಗೆ ಚಿನ್ನಲೇಪಿತ ಪೇಂಟಿಂಗ್‌ ಕಾರ್ಯ ಪೂರ್ಣಗೊಳ್ಳದ ವಿವಾದ ಹೈಕೋರ್ಟ್‌ ಅಂಗಳ ತಲುಪಿದೆ. ಚಿನ್ನಲೇಪಿತ ಕಾಮಗಾರಿ ಅವ್ಯವಹಾರ ಆರೋಪ ಪ್ರಕರಣ ಸಂಬಂಧ ಲೋಕಾಯುಕ್ತದಲ್ಲಿರುವ ಪ್ರಕರಣ ವಾಪಸ್‌ ಪಡೆದುಕೊಂಡು, ಬಾಕಿ ಉಳಿದಿರುವ ಚಿನ್ನಲೇಪಿತ ಪೇಂಟಿಂಗ್‌ ಪೂರ್ಣಗೊಳಿಸುವುದು ಹಾಗೂ ಅಂತಾರಾಷ್ಟ್ರೀಯ ಖ್ಯಾತ ಕಲಾವಿದ ಗಂಜೀಫಾ ರಘುಪತಿ ಭಟ್‌ ಅವರಿಗೇ ಚಿನ್ನಲೇಪನ ಪೇಂಟಿಂಗ್‌ ಮಾಡಲು ಅವಕಾಶ ಮಾಡಿಕೊಡುವಂತೆ ರಾಜ್ಯಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

Advertisement

ಈ ಕುರಿತು ಅರಸು ಆಡಳಿತ ಮಂಡಳಿ ನಿರ್ದೇಶಕ ಬಸವರಾಜೇ ಅರಸ್‌ ಸಲ್ಲಿಸಿರುವ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎಸ್‌.ಕೆ ಮುಖರ್ಜಿ ಹಾಗೂ ನ್ಯಾ. ಪಿ.ಎಸ್‌ ದಿನೇಶ್‌ಕುಮಾರ್‌ ಅವರಿದ್ದ ವಿಭಾಗೀಯ ಪೀಠ, ಪ್ರತಿವಾದಿಗಳಾದ ರಾಜ್ಯಸರ್ಕಾರದ ಮುಖ್ಯಕಾರ್ಯದರ್ಶಿ, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರು, ಮೈಸೂರು ಜಿಲ್ಲಾಧಿಕಾರಿಗಳಿಗೆ ನೋಟಿಸ್‌
ಜಾರಿಗೊಳಿಸಲು ಆದೇಶಿಸಿ, ಅ.16ಕ್ಕೆ ವಿಚಾರಣೆ ಮುಂದೂಡಿತು.

ಪ್ರಕರಣ ಏನು?: 2013ರ ಜನವರಿಯಲ್ಲಿ ಅರಮನೆ ಆಡಳಿತ ಮಂಡಳಿ, ಅರಮನೆಯ ಖಾಸಗಿ ದರ್ಬಾರ್‌, ಪಿಲ್ಲರ್‌ಗಳು, ಚಿನ್ನಲೇಪಿತ ಪೇಂಟಿಂಗ್‌ ಮಾಡುವ ಕೆಲಸವನ್ನು ರಾಷ್ಟ್ರಪ್ರಶಸ್ತಿ ವಿಜೇತ ಕಲಾವಿದ ಗಂಜೀಫಾ ರಘುಪತಿ ಭಟ್‌ ಅವರಿಗೆ 3.50 ಲಕ್ಷ ರೂ. ಗಳಿಗೆ ವಹಿಸಿತ್ತು. ಅದರಂತೆ ಮೇ ವೇಳೆಗೆ ಕಾಮಗಾರಿ ಪೂರ್ಣಗೊಳಿಸಿಕೊಟ್ಟಿದ್ದರು. ಇದರಿಂದ ಪ್ರೇರಿತಗೊಂಡ ಆಡಳಿತ ಮಂಡಳಿ ಚಿನ್ನಲೇಪನವಾಗದ ಉಳಿದ ಪಿಲ್ಲರ್‌ ಗಳು, ಕಲಾಕೃತಿಗಳು, ಅತ್ಯಮೂಲ್ಯ ಪರಿಕರಗಳಿಗೂ ಪೇಂಟಿಂಗ್‌ ಮಾಡಿಸಲು ಪ್ರವಾಸೋದ್ಯಮ ಇಲಾಖೆ ಅನುಮತಿ ಪಡೆದು 4.98. ಕೋಟಿ ರೂ.ಗಳಿಗೆ ರಘುಪತಿ ಭಟ್‌ರಿಗೆ ಜವಾಬ್ದಾರಿ ನೀಡಿತ್ತು. ಈ ಬೆಳವಣಿಗೆ ಮಧ್ಯೆಯೇ ಜವರಾಜು ಎಂಬಾತ, ಚಿನ್ನಲೇಪಿತ ಕಾಮಗಾರಿ ಟೆಂಡರಿನಲ್ಲಿ ಅವ್ಯವಹಾರವಾಗಿದೆ ಎಂದು ಅರಮನೆ ಆಡಳಿತ ಮಂಡಳಿ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

ಪ್ರಕರಣದಲ್ಲಿ ಕಲಾವಿದ ರಘುಪತಿ ಭಟ್‌ ಅವರನ್ನೂ ಎಳೆದು ತರಲಾಗಿದೆ. ಈ ಹಿನ್ನೆಲೆಯಲ್ಲಿ ಇಡೀ ಚಿನ್ನಲೇಪನ ಕಾಮಗಾರಿ ನಿಂತು ಹೋಗಿದ್ದು, ಕೆಲಕಂಬಗಳು ಮೊದಲಿನ ಹೊಳಪು ಕಳೆದುಕೊಳ್ಳುತ್ತಿವೆ. ಹೀಗಾಗಿ ಕಾಮಗಾರಿ ಮುಂದುವರಿಸಲು ಡೀಸಿ, ಪುರಾತತ್ವ ಇಲಾಖೆಗೆ ಎಷ್ಟು ಕೇಳಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಪ್ರಕರಣವನ್ನು ವಾಪಸ್‌ ಪಡೆದು ಕಲಾವಿದ ರಘುಪತಿ ಭಟ್‌ ಅವರಿಂದಲೇ ಪೇಂಟಿಂಗ್‌ ಪೂರ್ಣಗೊಳಿಸುವಂತೆ ಕೋರ್ಟ್‌ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next