ನಂಜನಗೂಡು: ಇಲ್ಲಿನ ಪದವಿ ಕಾಲೇಜಿನ ಆವರಣದಲ್ಲಿ ಪಕೋಡಾ ತಯಾರಿಸಿ ಮಾರಾಟ ಮಾಡುವ ಮೂಲಕ ಪ್ರಧಾನಿ ಹೇಳಿಕೆ ಖಂಡಿಸಿ ಜನಸಂಗ್ರಾಮ ಪರಿಷತ್ ಪ್ರತಿಭಟನೆ ನಡೆಸಿತು.
ಜನಸಂಗ್ರಾಮ ಪರಿಷತ್‌ನ ವಿಭಾಗೀಯ ಸಂಚಾಲಕ ನಗರ್ಲೆ ವಿಜಯ ಕುಮಾರ ನೇತೃತ್ವದಲ್ಲಿ ವಿವಿಧ ಮುಖಂಡರು ಗುರುವಾರ ನಗರದ ಸರ್ಕಾರಿ ಪದವಿ ಕಾಲೇಜಿನ ಆವರಣದಲ್ಲಿ ಪಕೋಡಾ ತಯಾರಿಸಿ ಡಿಗ್ರಿ ಪಕೋಡಾ ಎಂಬ ಹೆಸರಿಟ್ಟು ಮಾರಾಟ ಮಾಡಿದರು. ಒಂದು ಪ್ಲೇಟಿಗೆ ಹತ್ತು ರೂ.ನಂತೆ ಮಾರಾಟ ಮಾಡಿದ ಪರಿಷತ್‌ನ ವಿಜಯ ಕುಮಾರ ಸಂಗಡಿಗರು ಪ್ರಧಾನಿ ಮೋದಿ ಅವರ ವಿರುದ್ಧ ಪಕೊಡಾ ಪ್ರತಿಭಟನೆ ನಡೆಸಿದರು.
ಧರಣಿ ವೇಳೆ ಮಾತನಾಡಿದ ನಗರ್ಲೆ ವಿಜಯ ಕುಮಾರ, ಪ್ರಧಾನಿ ಮೋದಿ ಉದ್ಯೋಗ ಕೇಳಿದವರಿಗೆ ಪಕೋಡಾ ತಯಾರಿಸಿ ಮಾರಾಟ ಮಾಡಿ ಎಂದಿದ್ದನ್ನು ನಾವು ಕಾರ್ಯರೂಪಕ್ಕೆ ತಂದಿದ್ದು, ಈ ಉದ್ಯೋಗಕ್ಕೆ ಅವರು ಕೇಂದ್ರ ಸರ್ಕಾರದ ಅಧಿಕೃತ ಮುದ್ರೆ ಒತ್ತಿ ಸಹಾಯ ಹಸ್ತ ನೀಡಲಿ, ಇಲ್ಲವೇ ಆಡಿದ ಮಾತನ್ನು ವಾಪಸ್ ಪಡೆಯಲಿ ಎಂದು ಒತ್ತಾಯಿಸಿದರು.
ದೇಶದ ನಿರುದ್ಯೋಗಿಗಳಿಗೆ ಉದ್ಯೋಗ ನೀಡಬೇಕಾದ ಜವಾಬ್ದಾರಿ ಸ್ಥಾನದಲ್ಲಿದ್ದು, ಇಂಥಹ ಕೀಳು ಹೇಳಿಕೆ ನೀಡಿರುವುದು ಖಂಡನೀಯ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸಂಘಟನೆಯ ನಾಯಕರಾದ ಚುಂಚನಳ್ಳಿ ಮಲ್ಲೇಶ, ಮಲ್ಲಹಳ್ಳಿ ನಾರಾಯಣ, ಕಾಲೇಜಿನ ವಿದ್ಯಾರ್ಥಿಗಳಾದ ಪ್ರತಿಮಾ ಹಾಗೂ ನಂಜುಂಡಸ್ವಾಮಿ ಮೋದಿ ಅವರ ಪಕೋಡಾ ಹೇಳಿಕೆಯನ್ನು ಖಂಡಿಸಿದರು.
ಕಂದೇಗಾಲ ಶ್ರೀನಿವಾಸ, ಅಭಿ ನಾಗಭೂಷಣ, ಮಹದೇವಸ್ವಾಮಿ ,ಸಿದ್ದು ಉಮಾಕಾಂತ, ಪದವಿ ಕಾಲೇಜಿನ ಪ್ರಾಧ್ಯಾಪಕ ಪ್ರೋ. ಮಾದೇವ ಭರಣಿ ಮುಂತಾದವರು ಉಪಸ್ಥಿತರಿದ್ದರು.