Advertisement

ಮೂರೇ ದಿನದಲ್ಲಿ ಗೆದ್ದ ದಕ್ಷಿಣ ಆಫ್ರಿಕಾ

12:30 AM Dec 29, 2018 | Team Udayavani |

ಸೆಂಚುರಿಯನ್‌: ಈ ವರ್ಷದ “ಬಾಕ್ಸಿಂಗ್‌ ಡೇ ಟೆಸ್ಟ್‌’ ಪಂದ್ಯದ ಮೊದಲ ಫ‌ಲಿತಾಂಶ ದಕ್ಷಿಣ ಆಫ್ರಿಕಾ ಪರವಾಗಿ ಬಂದಿದೆ. ಇಲ್ಲಿನ “ಸೂಪರ್‌ ನ್ಪೋರ್ಟ್‌ ಪಾರ್ಕ್‌’ನಲ್ಲಿ ನಡೆದ ಪಾಕಿಸ್ಥಾನ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯವನ್ನು ಹರಿಣಗಳ ಪಡೆ ಕೇವಲ ಮೂರೇ ದಿನಗಳಲ್ಲಿ 6 ವಿಕೆಟ್‌ಗಳಿಂದ ಜಯಿಸಿದೆ.

Advertisement

ಗೆಲುವಿಗೆ 149 ರನ್ನುಗಳ ಗುರಿ ಪಡೆದ ದಕ್ಷಿಣ ಆಫ್ರಿಕಾ, ಪಂದ್ಯದ 3ನೇ ದಿನವಾದ ಶುಕ್ರವಾರ 4 ವಿಕೆಟ್‌ ನಷ್ಟದಲ್ಲಿ 151 ರನ್‌ ಮಾಡಿ ಗೆಲುವನ್ನು ಒಲಿಸಿಕೊಂಡಿತು. ರನ್‌ ಖಾತೆ ತೆರೆಯುವ ಮೊದಲೇ ಐಡನ್‌ ಮಾರ್ಕ್‌ರಮ್‌ ವಿಕೆಟ್‌ ಉರುಳಿಸಿಕೊಂಡರೂ ಡೀನ್‌ ಎಲ್ಗರ್‌ (50) ಮತ್ತು ಹಾಶಿಮ್‌ ಆಮ್ಲ (ಔಟಾಗದೆ 63) ದ್ವಿತೀಯ ವಿಕೆಟಿಗೆ 119 ರನ್‌ ಪೇರಿಸಿ ತಂಡವನ್ನು ದಡ ಮುಟ್ಟಿಸಿದರು.

ಪಾಕಿಸ್ಥಾನ ದ್ವಿತೀಯ ದಿನದ ಅಂತ್ಯಕ್ಕೆ ಸರಿಯಾಗಿ 190 ರನ್ನಿಗೆ ಕುಸಿದು ದಕ್ಷಿಣ ಆಫ್ರಿಕಾಕ್ಕೆ ಸಾಮಾನ್ಯ ಮೊತ್ತದ ಟಾರ್ಗೆಟ್‌ ನೀಡಿತ್ತು. ಶುಕ್ರವಾರ ಚೇಸಿಂಗ್‌ ಆರಂಭಿಸಿದ ಆತಿಥೇಯ ತಂಡ ದಿನದ 2ನೇ ಓವರಿನಲ್ಲೇ ಮಾರ್ಕ್‌ರಮ್‌ (0) ವಿಕೆಟ್‌ ಕಳೆದುಕೊಂಡಿತು. ಹಸನ್‌ ಅಲಿ ಲೆಗ್‌ ಬಿಫೋರ್‌ ರೂಪದಲ್ಲಿ ಈ ವಿಕೆಟನ್ನು ಬುಟ್ಟಿಗೆ ಹಾಕಿಕೊಂಡರು. ಬ್ಯಾಟಿಂಗಿಗೆ ತುಸು ಕಠಿನವೆನಿಸಿದ ಟ್ರ್ಯಾಕ್‌ನಲ್ಲಿ ಪಾಕ್‌ ತಿರುಗೇಟು ನೀಡಬಹುದೆಂಬ ನಿರೀಕ್ಷೆ ಮೂಡಿತು. ಆದರೆ ಎಲ್ಗರ್‌-ಆಮ್ಲ ಸೇರಿಕೊಂಡು ತಂಡಕ್ಕೆ ಜೀವ ತುಂಬಿದರು. ಕೊನೆಯಲ್ಲಿ 18 ರನ್‌ ಅಂತರದಲ್ಲಿ 3 ವಿಕೆಟ್‌ ಉರುಳಿತಾದರೂ ಆಗಲೇ ಹರಿಣಗಳ ಪಡೆ ಸುರಕ್ಷಿತ ವಲಯವನ್ನು ಸೇರಿಕೊಂಡಾಗಿತ್ತು.

ಕ್ರಮವಾಗಿ 39ಕ್ಕೆ 6 ಹಾಗೂ 59ಕ್ಕೆ 5 ವಿಕೆಟ್‌ ಕಿತ್ತ ದಕ್ಷಿಣ ಆಫ್ರಿಕಾ ಮಧ್ಯಮ ವೇಗಿ ಡ್ನೂನ್‌ ಒಲಿವರ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ಥಾನ-181 ಮತ್ತು 190. ದಕ್ಷಿಣ ಆಫ್ರಿಕಾ-223 ಮತ್ತು 4 ವಿಕೆಟಿಗೆ 151. 

Advertisement
Advertisement

Udayavani is now on Telegram. Click here to join our channel and stay updated with the latest news.

Next