Advertisement

ಉಗ್ರ ಗುಲಾಮ್‌ಗೆ ಪಾಕ್‌ ನಂಟು

09:56 AM Jan 31, 2020 | mahesh |

ಬೆಂಗಳೂರು: ರೈಲ್ವೇ ಇಲಾಖೆಯ ನಕಲಿ ಇ- ಟಿಕೆಟ್‌ ಮಾರಾಟ ಜಾಲ ಪ್ರಕರಣದಲ್ಲಿ ಬಂಧಿತನಾಗಿರುವ ಹರಿಯಾಣದ ಗುಲಾಮ್‌ ಮುಸ್ತಫಾ ಪಾಕಿಸ್ಥಾನ ಮೂಲದ ಧಾರ್ಮಿಕ ಸಂಘಟನೆಯೊಂದರ ಅನುಯಾಯಿ ಆಗಿದ್ದ ಎಂಬ ಆಘಾತಕಾರಿ ಮಾಹಿತಿ ತನಿಖೆ ವೇಳೆ ಹೊರಬಿದ್ದಿದೆ.

Advertisement

ಗುಲಾಮ್‌ ಮುಸ್ತಫಾನ ವಿಚಾರಣೆ ಸಂದರ್ಭ ತನಿಖಾ ತಂಡಗಳಿಗೆ ಒಂದೊಂದೇ ವಿಷಯಗಳು ಗೊತ್ತಾಗುತ್ತಿವೆ. ಗುಲಾಮ್‌ ಪಾಕಿಸ್ಥಾನದ ತಬ್ಲೀಕಿ ಜಮಾತ್‌ ಹೆಸರಿನ ಧಾರ್ಮಿಕ ಸಂಘಟನೆಯ ಅನುಯಾಯಿ ಆಗಿದ್ದ ಎಂಬ ಮಾಹಿತಿ ಗೊತ್ತಾಗಿದೆ. ಹೀಗಾಗಿ ಈ ಸಂಘಟನೆ ಜತೆಗೆ ಹಣಕಾಸು ವರ್ಗಾವಣೆ ವ್ಯವಹಾರ ನಡೆದಿರುವ ಸಾಧ್ಯತೆಯಿದ್ದು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತನಿಖಾ ಮೂಲಗಳು ತಿಳಿಸಿವೆ.

ಗುಲಾಮ್‌ನಿಂದ ಜಪ್ತಿ ಮಾಡಿಕೊಂಡಿರುವ ಲ್ಯಾಪ್‌ಟಾಪ್‌ನಲ್ಲಿ ಪಾಕಿಸ್ಥಾನ, ಬಾಂಗ್ಲಾದೇಶ, ಅಫ್ಘಾನಿಸ್ಥಾನ, ದುಬಾೖ ಸಹಿತ ಹಲವು ರಾಷ್ಟ್ರಗಳ ದೂರವಾಣಿ ಸಂಖ್ಯೆಗಳು ಪತ್ತೆಯಾಗಿವೆ. ಅಲ್ಲಿನ ಉಗ್ರ ಸಂಘಟನೆಗಳಿಗೆ ಹಣ ಪೂರೈಸಿರುವ ಬಗ್ಗೆ ಅನುಮಾನಗಳು ದಟ್ಟವಾಗುತ್ತಿದ್ದು. ಯಾವ ಸಂಘಟನೆಗಳ ಜತೆ ಆತನಿಗೆ ನಿಕಟ ಸಂಪರ್ಕವಿತ್ತು ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ಕೋಟ್ಯಂತರ ರೂ. ವಹಿವಾಟು ನಡೆಸಿರುವ ಇ- ಟಿಕೆಟ್‌ ಜಾಲದ ಹಿಂದೆ ಹಲವು ಮಂದಿ ಕಿಂಗ್‌ಪಿನ್‌ಗಳು ಕಾರ್ಯನಿರ್ವಹಿಸಿರುವ ಸಾಧ್ಯತೆಯಿದೆ. ಅವರ ಬಂಧನವಾದ ಬಳಿಕ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ ಎಂದು ತನಿಖಾ ಮೂಲಗಳು ಹೇಳಿವೆ.

ಬ್ಯಾಂಕ್‌ಗಳಿಗೆ ಪತ್ರಬರೆದ ತನಿಖಾ ತಂಡಗಳು!
ಗುಲಾಮ್‌ ಮುಸ್ತಫಾ ಪೀಣ್ಯ, ಬಾಗಲಕುಂಟೆಯಲ್ಲಿರುವ ಎರಡು ಖಾಸಗಿ ಬ್ಯಾಂಕ್‌ಗಳಲ್ಲಿ ಖಾತೆ ತೆರೆದಿದ್ದು ಹಣಕಾಸು ನಿರ್ವಹಣೆ ಮಾಡಿದ್ದಾನೆ. ಅಲ್ಲಿನ ವಹಿವಾಟಿನ ಬಗ್ಗೆ ಮಾಹಿತಿ ಕೋರಿ ಬ್ಯಾಂಕ್‌ಗಳಿಗೆ ಅಧಿಕಾರಿಗಳು ಪತ್ರ ಬರೆದಿದ್ದಾರೆ.

Advertisement

ಎಟಿಎಸ್‌ಗೆ ವರ್ಗಾವಣೆ
ರೈಲ್ವೇ ಇ-ಟಿಕೆಟ್‌ ವಂಚನೆಯಲ್ಲಿ ಬಂಧನಕ್ಕೊಳಗಾಗಿ ರಾಜಗೋಪಾಲನಗರ ಠಾಣೆ ಪೊಲೀಸರ ವಶದಲ್ಲಿರುವ ಝಾರ್ಖಂಡ್‌ ಮೂಲದ ಸೈಬರ್‌ ಉಗ್ರ ಗುಲಾಮ್‌ ಮುಸ್ತಫಾ ಪ್ರಕರಣವನ್ನು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಸಿಸಿಬಿಯಿಂದ ಭಯೋತ್ಪಾದನ ನಿಗ್ರಹ ದಳ(ಎಟಿಎಸ್‌)ಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

- ಮಂಜುನಾಥ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next