ಕರಾಚಿ: ಬುಲೂಚಿಸ್ತಾನದ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಮಂಗಳವಾರ(ಜ.16 ರಂದು) ವೈಮಾನಿಕ ದಾಳಿಯನ್ನು ನಡೆಸಿದ್ದು, ಈ ದಾಳಿಯನ್ನು ಪಾಕಿಸ್ತಾನ ತೀವ್ರವಾಗಿ ಖಂಡಿಸಿದೆ.
ಬಲೂಚಿಸ್ತಾನ್ ಪ್ರಾಂತ್ಯದ ಜೈಶ್ ಉಲ್-ಅದ್ಲ್ ಭಯೋತ್ಪಾದಕ ಗುಂಪಿನ ಎರಡು ಪ್ರಮುಖ ನೆಲೆಗಳ ಮೇಲೆ ದಾಳಿ ಮಾಡಿದೆ ಎಂದು ಇರಾನ್ ಹೇಳಿಕೊಂಡಿದೆ.
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಪ್ರಕಾರ, ಬಲೂಚಿಸ್ತಾನ್ ಪ್ರಾಂತ್ಯದ ಜೈಶ್ ಉಲ್-ಅದ್ಲ್ ಭಯೋತ್ಪಾದಕ ಗುಂಪಿನ ಎರಡು ನೆಲೆಗಳನ್ನು ಡ್ರೋನ್ ಮತ್ತು ಕ್ಷಿಪಣಿಗಳೊಂದಿಗೆ ನಾಶಪಡಿಸಲಾಗಿದೆ ಎಂದು ಸ್ಟೇಟ್ ಮೀಡಿಯಾ ವರದಿ ಮಾಡಿದೆ.
ಕುಹೆ ಸಬ್ಜ್ ಪ್ರದೇಶದಲ್ಲಿ ಜೈಶ್ ಉಲ್-ಅದ್ಲ್‌ನ ನೆಲೆಗಳು ಭಯೋತ್ಪಾದಕ ಗುಂಪಿನ ಅತಿದೊಡ್ಡ ನೆಲೆಗಳಲ್ಲಿ ಒಂದಾಗಿದೆ. “ಈ ನೆಲೆಗಳನ್ನು ಕ್ಷಿಪಣಿಗಳು ಮತ್ತು ಡ್ರೋನ್‌ಗಳಿಂದ ಹೊಡೆದು ನಾಶಪಡಿಸಲಾಗಿದೆ” ಎಂದು ವರದಿ ತಿಳಿಸಿದೆ.
ಇರಾನ್‌ನ ಈ ಕೃತ್ಯವನ್ನು ಖಂಡಿಸಿರುವ ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಇದು ತನ್ನ ವಾಯುಪ್ರದೇಶದ ” ಅಪ್ರಚೋದಿತ ಉಲ್ಲಂಘನೆ” ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಈ ದಾಳಿಯಲ್ಲಿ ಇಬ್ಬರು ಮುಗ್ಧ ಮಕ್ಕಳು ಸಾವನ್ನಪ್ಪಿದ್ದಾರೆ ಹಾಗೂ ಮೂವರು ಹೆಣ್ಣು ಮಕ್ಕಳು ಗಾಯಗೊಂಡಿದ್ದಾರೆ. ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಮತ್ತು ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಹೇಳಿ ಎಚ್ಚರಿಸಿದೆ.
ಈ ಹಿಂದೆ ಜೈಶ್ ಉಲ್-ಅದ್ಲ್ ಭಯೋತ್ಪಾದಕ ಗುಂಪು ಈ ಹಿಂದೆ ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ಇರಾನ್ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.