ಇಸ್ಲಾಮಾಬಾದ್ :ಪಾಕಿಸ್ಥಾನ ಆಡಳಿತಾರೂಢ ಸಮ್ಮಿಶ್ರ ಸರ್ಕಾರದ ಮಹತ್ವದ ಸದಸ್ಯರಾಗಿರುವ ಮೌಲಾನಾ ಫಜಲ್ ಉರ್ ರೆಹಮಾನ್ 4 ದಿನಗಳ ಭಾರತ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.
ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಅವರ ಪ್ರಧಾನಿ ಮೋದಿ ವಿರೋಧಿ ಆಕ್ಷೇಪಾರ್ಹ ಹೇಳಿಕೆಗಳ ಬಳಿಕ ಪಾಕ್ ವಿರುದ್ದ ಭಾರತದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.
ಇಮ್ರಾನ್ ಖಾನ್ ಪ್ರಧಾನಿಯಾಗಿದ್ದಾಗ ಅವರಿಗೆ ಪೈಪೋಟಿ ನೀಡುವಲ್ಲಿ ಜಮಿಯತ್ ಉಲೇಮಾ-ಎ-ಇಸ್ಲಾಂ (ಎಫ್) ಅಧ್ಯಕ್ಷ ಮೌಲಾನಾ ಫಜಲ್-ಉರ್-ರೆಹಮಾನ್ ಪ್ರಮುಖ ಪಾತ್ರ ವಹಿಸಿದ್ದರು. ಇಮ್ರಾನ್ ಖಾನ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ 2019 ರಲ್ಲಿ ಇಸ್ಲಾಮಾಬಾದ್ ಕಡೆಗೆ ಮೆರವಣಿಗೆ ನಡೆಸುವುದಾಗಿ ರೆಹಮಾನ್ ವಾಗ್ದಾನ ಮಾಡಿದ್ದರು.
ಇಮ್ರಾನ್ ಖಾನ್ ಸರಕಾರವನ್ನು ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿರೋಧ ಪಕ್ಷಗಳ ಒಕ್ಕೂಟವಾದ ಪಾಕಿಸ್ಥಾನ್ ಡೆಮಾಕ್ರಟಿಕ್ ಚಳವಳಿಯ ಸದಸ್ಯರೂ ಆಗಿದ್ದರು.
ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಅಗಲಿದ ನಂತರ ಸಂತಾಪವನ್ನು ಸೂಚಿಸಲು 2018 ರ ಆಗಸ್ಟ್‌ನಲ್ಲಿ ಪಾಕ್ ನ ಕಾನೂನು ಮತ್ತು ನ್ಯಾಯ ಸಚಿವ ಸೈಯದ್ ಅಲಿ ಜಾಫರ್ ದೆಹಲಿಗೆ ಭೇಟಿ ನೀಡಿದ್ದು ಪಾಕ್ ಸರಕಾರದ ಮಂತ್ರಿಯ ಕೊನೆಯ ಭೇಟಿಯಾಗಿತ್ತು. ಭೇಟಿಯ ಸಂದರ್ಭದಲ್ಲಿ ಅವರು ಭಾರತದ ಆಗಿನ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿಯಾಗಿದ್ದರು.