ಇಸ್ಲಾಮಾಬಾದ್:ಗೂಢಚರ್ಯ ಮತ್ತು ಭಯೋತ್ಪಾದನೆ ಆರೋಪದಲ್ಲಿ ಪಾಕಿಸ್ತಾನದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತದ ಮಾಜಿ ನೌಕಾಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನ ಮತ್ತೊಂದು ನಾಟಕಕ್ಕೆ ಸಜ್ಜಾಗಿದ್ದು, ಗೂಢಚರ್ಯ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಜಾಧವ್ ಮರಣದಂಡನೆ ಶಿಕ್ಷೆಯ ಕುರಿತು ಪುನರ್ ಪರಿಶೀಲನೆ ಮನವಿ ಸಲ್ಲಿಸಲು ನಿರಾಕರಿಸಿರುವುದಾಗಿ ತಿಳಿಸಿದೆ.
ಕುಲಭೂಷಣ್ ಜಾಧವ್ ತನಗೆ ವಿಧಿಸಿರುವ ಮರಣದಂಡನೆ ಶಿಕ್ಷೆಯನ್ನು ಪುನರ್ ಪರಿಶೀಲನೆ ಮನವಿ ಸಲ್ಲಿಸುವ ಬದಲು ಈಗಾಗಲೇ ಸಲ್ಲಿಸಿರುವ ಬಾಕಿ ಇರುವ ಕ್ಷಮಾದಾನ ಅರ್ಜಿಯ ಅಂತಿಮ ನಿರ್ಧಾರಕ್ಕೆ ಕಾಯುತ್ತಿರುವುದಾಗಿ ಪಾಕಿಸ್ತಾನದ ಮಾಧ್ಯಮದ ವರದಿ ಹೇಳಿದೆ.
ಪಾಕಿಸ್ತಾನದ ಹೆಚ್ಚುವರಿ ಅಟಾರ್ನಿ ಜನರಲ್ ಅಹ್ಮದ್ ಇರ್ಫಾನ್ ಹಾಗೂ ಇಸ್ಲಾಮಾಬಾದ್ ದಕ್ಷಿಣಾ ಏಷ್ಯಾ ಡೈರೆಕ್ಟರ್ ಜನರಲ್ ಜತೆಗೂಡಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ಜಾಧವ್ ಗೆ ಎರಡನೇ ಬಾರಿ ರಾಜತಾಂತ್ರಿಕ ನೆರವಿನ ಆಫರ್ ನೀಡಿರುವುದಾಗಿ ತಿಳಿಸಿದರು.
ಕುಲಭೂಷಣ್ ಜಾಧವ್ ಗೆ ವಿಧಿಸಿರುವ ಶಿಕ್ಷೆ ಮತ್ತು ಆರೋಪದ ಬಗ್ಗೆ ಪುನರ್ ಪರಿಶೀಲನೆ ನಡೆಸು ಬಗ್ಗೆ ಅರ್ಜಿ ಸಲ್ಲಿಸುವಂತೆ 2020ರ ಜೂನ್ 17ರಂದು ತಿಳಿಸಲಾಗಿತ್ತು ಎಂದು ಅಟಾರ್ನಿ ಜನರಲ್ ತಿಳಿಸಿರುವುದಾಗಿ ಪಾಕ್ ಮಾಧ್ಯಮದ ವರದಿ ಹೇಳಿದೆ.
ಭಾರತದ ನಿವೃತ್ತ ನೌಕಾಪಡೆ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಪಾಕಿಸ್ತಾನದ ಭದ್ರತಾ ಪಡೆ 2016ರ ಮಾರ್ಚ್ 3ರಂದು ಬಂಧಿಸಿತ್ತು. ನೌಕಾಪಡೆಯ ಅಧಿಕಾರಿಯಾಗಿ ಕುಲಭೂಷಣ್ ಪಾಕಿಸ್ತಾನದಲ್ಲಿ ಗೂಢಚರ್ಯ ಮಾಡಿಕೊಂಡು ಅನೇಕ ವಿಧ್ವಂಸಕ ಕೃತ್ಯಗಳನ್ನು ಮಾಡಿದ್ದರು ಎಂಬುದು ಪಾಕಿಸ್ತಾನದ ಆರೋಪ. ಅಷ್ಟೇ ಅಲ್ಲ ಜಾಧವ್ ಅವರನ್ನು ಬಲೂಚಿಸ್ತಾನದಲ್ಲೇ ಬಂಧಿಸಲಾಯಿತು ಎಂದು ಪಾಕ್ ಆರೋಪಿಸಿತ್ತು. ಆದರೆ, ಕುಲಭೂಷಣ್ ಅವರು ನೌಕಾಪಡೆಯಿಂದ ನಿವೃತ್ತರಾಗಿ ಇರಾನ್ ದೇಶದಲ್ಲಿ ತಮ್ಮದೇ ವೈಯಕ್ತಿಕ ವ್ಯವಹಾರ ನಡೆಸುತ್ತಿದ್ದರು. ಅಲ್ಲಿಂದ ಅವರನ್ನು ಅಚಾನಕ್ಕಾಗಿ ಪಾಕಿಸ್ತಾನೀಯರು ಬಂಧಿಸಿ ಕರೆದೊಯ್ದರು ಎಂಬುದು ಭಾರತದ ವಾದಿಸಿತ್ತು.