Advertisement

ಪಾಕ್‌ನಲ್ಲಿ ಹೊಸ ಹಿಂದು ವಿವಾಹ ಕಾಯಿದೆ; ಬಲವಂತದ ಮದುವೆಗೆ ಕೊನೆ?

05:00 PM Apr 12, 2017 | Team Udayavani |

ಇಸ್ಲಾಮಾಬಾದ್‌ : ಕಳೆದ ಮಾರ್ಚ್‌ 19ರಂದು ಪಾಕಿಸ್ಥಾನದಲ್ಲಿ  ಜಾರಿಗೆ ಬಂದಿರುವ ಹಿಂದೂ ಮ್ಯಾರೇಜ್‌ ಆ್ಯಕ್ಟ್ 2017 ಇದರ ಪರಿಣಾಮವಾಗಿ ಪಾಕಿಸ್ಥಾನದಲ್ಲಿನ ಹಿಂದು ಅಲ್ಪಸಂಖ್ಯಾಕ ಮಹಿಳೆಯರ ಅಪಹರಣ, ಬಹುಪತ್ನಿತ್ವಕ್ಕಾಗಿ ಇತರ ಧರ್ಮಗಳಿಗೆ ಅವರ ಮತಾಂತರ ಹಾಗೂ ಬಲವಂತದ ಮದುವೆ ಮುಂತಾದ ಅನಿಷ್ಟಗಳು ಕೊನೆಗೊಳ್ಳಬಹುದೆಂಬ ನಿರೀಕ್ಷೆಯನ್ನು ಹುಟ್ಟಿಸಿದೆ. 

Advertisement

ಪಾಕ್‌ ಸಂಸತ್ತು ಅನುಮೋದಿಸಿರುವ ಈ ಹೊಸ ಕಾನೂನು ಹಿಂದುಗಳಿಗೆ ತಮ್ಮ ವಿವಾಹವನ್ನು 1947ರ ಬಳಿಕ ಇದೇ ಮೊದಲ ಬಾರಿಗೆ ನೋಂದಾವಣೆ ಮಾಡಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸುತ್ತದೆ. 

ಹೊಸ ಮೈಲಿಗಲ್ಲು ಕಾನೂನು ಎಂದೇ ಬಣ್ಣಿಸಲ್ಪಟ್ಟಿರುವ ಹಾಗೂ ಪಾಕಿಸ್ಥಾನದ ನ್ಯಾಶನಲ್‌ ಅಸೆಂಬ್ಲಿಯಿಂದ ಸರ್ವಾನುಮತದಿಂದ ಅನುಮೋದಿಸಲ್ಪಟ್ಟಿರುವ ಈ ಹೊಸ ಕಾನೂನು ದೇಶದಲ್ಲಿನ ಅಲ್ಪ ಸಂಖ್ಯಾಕ ಹಿಂದು ಸಮುದಾಯದವರ ಮದುವೆಗಳನ್ನು ಕಾನೂನುಸಮ್ಮತವಾಗಿ ನಿಯಂತ್ರಿಸುವ ಉದ್ದೇಶ ಹೊಂದಿದೆ. 

ಈ ಕಾನೂನು ಸುದೀರ್ಘ‌ ಚರ್ಚೆಯ ಬಳಿಕ ನ್ಯಾಶನಲ್‌ ಅಸೆಂಬ್ಲಿಯಿಂದ ಕಳೆದ ವರ್ಷ ಸೆಪ್ಟಂಬರ್‌ನಲ್ಲಿ  ಪಾಸಾಗಿತ್ತು. ಆದರೆ ಬಳಿಕ ಸೆನೆಟ್‌ನಲ್ಲಿ  ಆ ಕುರಿತ ಮಸೂದೆಯು ಮಾರ್ಪಾಡಿಗೆ ಒಳಪಟ್ಟ ಕಾರಣ ಪುನಃ ಅದನ್ನು ರಾಷ್ಟ್ರೀಯ ಅಸೆಂಬ್ಲಿ ಪಾಸು ಮಾಡಬೇಕಾಯಿತು. ಅನಂತರ ಅದು ಈ ವರ್ಷ ಫೆಬ್ರವರಿಯಲ್ಲಿ ಕಾಯಿದೆಯಾಗಿ ಅದಕ್ಕೆ ಅನುಮೋದನೆ ನೀಡಲಾಯಿತು. 

ಪಾಕಿಸ್ಥಾನದ ಈ ಐತಿಹಾಸಿಕ ಹಿಂದು ವಿವಾಹ ಕಾಯಿದೆಯು ಅಲ್ಪ ಸಂಖ್ಯಾಕ ಹಿಂದೂ ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸುವ ಉದ್ದೇಶ ಹೊಂದಿದ್ದು ವಿಶೇಷವಾಗಿ ಹಿಂದುಗಳ ವಿವಾಹಕ್ಕೆ ಕಾನೂನು ಸಮ್ಮತಿ ಸಿಗುವಂತೆ ಮಾಡಿರುವುದು ಗಮನಾರ್ಹ. 

Advertisement

1947ರಲ್ಲಿ ಭಾರತ ವಿಭಜನೆಯಾಗಿ ಮುಸ್ಲಿಮರಿಗಾಗಿ ಪ್ರತ್ಯೇಕ ಪಾಕಿಸ್ಥಾನ ರಾಷ್ಟ್ರ ಉದಯಿಸಿದ ಬಳಿಕ ಪಾಕಿಸ್ಥಾನದಲ್ಲಿನ 3 ಕೋಟಿ ಹಿಂದು ಅಲ್ಪಸಂಖ್ಯಾಕರ ವಿವಾಹಗಳಿಗೆ ಅಧಿಕೃತ ಕಾನೂನು ಮಾನ್ಯತೆ ಇಲ್ಲದೇ ಅವರು ಕಾನೂನಿನ ಯಾವುದೇ ರಕ್ಷಣೆಯನ್ನು ಪಡೆಯುವುದು ಅಸಾಧ್ಯವಾಗಿತ್ತು. ಇದೀಗ ಈ ಹೊಸ ಕಾನೂನಿಂದ ಆ ಕೊರತೆ ತುಂಬಿದಂತಾಗಿದೆ.  

Advertisement

Udayavani is now on Telegram. Click here to join our channel and stay updated with the latest news.

Next