Advertisement
ಭಾರತದ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಜತೆಗೆ ಪಾಕ್ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವಾ ಅವರೇ ಮಾತುಕತೆಗೆ ಮುಂದಾಗಿದ್ದರು. ಆದರೆ ಅಲ್ಲಿನ ರಾಜಕೀಯ ಅಸ್ಥಿರತೆ ಮನಗಂಡು ಈ ಮಾತುಕತೆಗೆ ಭಾರತ ಸೊಪ್ಪು ಹಾಕಲಿಲ್ಲ ಎನ್ನಲಾಗಿದೆ. ಆರ್ಥಿಕ ಕುಸಿತದಿಂದ ತತ್ತರಿಸುತ್ತಿರುವ ಪಾಕಿಸ್ಥಾನಕ್ಕೆ ಭಾರತದ ಜತೆ ಸೌಹಾರ್ದ ಸಂಬಂಧ ಅಗತ್ಯವಿದೆ ಎಂದು ಮನಗಂಡ ಬಾಜ್ವಾ ಇಂಥದ್ದೊಂದು ಪ್ರಯತ್ನಕ್ಕೆ ಮುಂದಾಗಿದ್ದರು ಎನ್ನಲಾಗಿದೆ.
ಭಾರತದ ಜತೆ ಮಾತುಕತೆಗೆ ಪಾಕ್ ಮೃದು ವಾಗುವುದಕ್ಕೆ ಚೀನದ ಸೂಚನೆಯೂ ಕಾರಣ ಎನ್ನಲಾಗಿದೆ. ಭಾರತದೊಂದಿಗೆ ಗಡಿಯಲ್ಲಿ ಉತ್ತಮ ಸಂಬಂಧ ಬೆಳೆಸಿಕೊಳ್ಳಿ ಎಂದು ಪಾಕಿಸ್ಥಾನಕ್ಕೆ, ತನ್ನ ಆರ್ಥಿಕ ಹಿತಾಸಕ್ತಿಯ ಉದ್ದೇಶದಿಂದ ಚೀನ ಸೂಚನೆ ನೀಡಿತ್ತು. ಉಗ್ರ ನಿಗ್ರಹವಲ್ಲ, ವಿತ್ತ ದಾರಿ
ಪಾಕ್‌ಗೆ ಮಾತುಕತೆ ಮೂಲಕ ಆಗಬೇಕಿರುವುದು ಉಗ್ರ ನಿಗ್ರಹವಲ್ಲ. ಬದಲಿಗೆ ಭಾರತದಿಂದ ಪಾಕ್ ಮೇಲೆ ವಿಧಿಸಲಾಗಿರುವ ಆರ್ಥಿಕ ದಿಗ್ಬಂಧನಗಳನ್ನು ತೆಗೆದುಹಾಕಬೇಕಿರುವುದು. ಈ ಮೂಲಕ ಪಾಕಿಸ್ಥಾನದ ಉತ್ಪನ್ನಗಳು ಏಷ್ಯಾ ದೇಶಗಳಿಗೆ ಸಾಗಲು ಅನುವಾಗಲಿದೆ. ಇದು ಪಾಕ್ ಆರ್ಥಿಕತೆಯನ್ನು ಸುಧಾರಿಸುತ್ತದೆ. ಸಾಮಾನ್ಯವಾಗಿ ಕಾಶ್ಮೀರ ವಿಚಾರ ಪ್ರಸ್ತಾವವಾಗುತ್ತಿದ್ದಂತೆಯೇ, ಉಭಯ ದೇಶಗಳ ಮಧ್ಯೆ ವಿಶ್ವಾಸ ವೃದ್ಧಿಯ ಕ್ರಮವಾಗಿ ಗಡಿಯಲ್ಲಿ ವ್ಯಾಪಾರ ವಿನಿಮಯಕ್ಕೆ ಉತ್ತೇಜನ ನೀಡುವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇಂತಹ ಕ್ರಮಗಳಿಂದಾಗಿ ಪಾಕಿಸ್ಥಾನಕ್ಕೆ ಹೆಚ್ಚಿನ ಅನುಕೂಲವಾಗಲಿದೆ.